More

    ಹೆಚ್ಚಿನ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಮರುಮಾರಾಟ : ಪಂಜಾಬ್ ಸರ್ಕಾರದ ಮೇಲೆ ಗಂಭೀರ ಆರೋಪ

    ಚಂಡೀಗಢ : ಪಂಜಾಬ್​ನ ಕಾಂಗ್ರೆಸ್ ಸರ್ಕಾರ ಕೋವಾಕ್ಸಿನ್ ಲಸಿಕೆಯ ಸುಮಾರು 35,000 ಡೋಸ್​ಗಳನ್ನು 400 ರೂ. ಬೆಲೆಗೆ ಖರೀದಿಸಿ 1,060 ರೂ. ಬೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಮರುಮಾರಾಟ ಮಾಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಕಾಲಿ ದಳದ ಮುಖ್ಯಸ್ಥ ಸುಖಬೀರ್​ ಸಿಂಗ್ ಬಾದಲ್ ಈ ಆರೋಪ ಹೊರಿಸಿದ್ದು, ಭಾರೀ ಹಣ ಮಾಡುವ ಅನೈತಿಕ ಪ್ರಯತ್ನದೊಂದಿಗೆ ಕರೊನಾ ಲಸಿಕೆಯ ಕೃತಕ ಅಭಾವವನ್ನು ಪಂಜಾಬ್​ ಸರ್ಕಾರ ಸೃಷ್ಟಿಸುತ್ತಿದೆ ಎಂದಿದ್ದಾರೆ.

    ಕರೊನಾ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರದ ವಿರುದ್ಧ ಸರಣಿ ಟ್ವೀಟ್​ಗಳ ಮೂಲಕ ಹರಿಹಾಯ್ದಿರುವ ಬಾದಲ್​, ಈ ಆಪತ್ಕಾಲದಲ್ಲಿ ಕರೊನಾ ಲಸಿಕೆಗಳನ್ನು ಮಾರಿ ಕಾಂಗ್ರೆಸ್​ ಸರ್ಕಾರ ಅನೈತಿಕವಾಗಿ ಲಾಭ ಮಾಡುತ್ತಿದೆ. ಈ ಜನವಿರೋಧಿ ನಡವಳಿಕೆಯ ಬಗ್ಗೆ ಹೈಕೋರ್ಟ್​ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು. ರಾಜ್ಯ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಮೇಲೆ ಮೊಕದ್ದಮೆ ಹೂಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

    ಇದನ್ನೂ ಓದಿ: ಪ್ರಧಾನಿ ಮೋದಿಗೆ ಜೀವಬೆದರಿಕೆ ಹಾಕಿದ್ದೇಕೆ ಎಂದು ಬಾಯ್ಬಿಟ್ಟ ಡ್ರಗ್‌ ಎಡಿಕ್ಟ್‌: ಪೊಲೀಸರು ಸುಸ್ತು!

    ಕೋವಾಕ್ಸಿನ್ ಡೋಸ್​ಗಳನ್ನು ರಾಜ್ಯ ಸರ್ಕಾರದ ದರದಂತೆ ಡೋಸ್​ಗೆ 400 ರೂ.ಗಳಿಗೆ ಖರೀದಿಸಿ, ಅದನ್ನು ಖಾಸಗಿ ಆಸ್ಪತ್ರೆಗಳಿಗೆ 1,060 ರೂ.ಗಳಿಗೆ ಮಾರುತ್ತಿದೆ. ಹೀಗೆ ಪಡೆದ ಲಸಿಕೆಗಳಿಗೆ ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್​ಗೆ 1,560 ರೂ. ಪಡೆಯುತ್ತಿದ್ದು, ಜನಸಾಮಾನ್ಯರನ್ನು ಲೂಟಿ ಮಾಡಲಾಗುತ್ತಿದೆ. ಪ್ರತಿ ಡೋಸ್​ಗೆ ಸರ್ಕಾರ 660 ರೂ.ಗಳ ಲಾಭ ಪಡೆಯುತ್ತಿದ್ದು, ಈ ರೀತಿಯಾಗಿ ಮೊಹಾಲಿಯಲ್ಲಿ 35,000 ಡೋಸ್​ಗಳನ್ನು ಮಾರಿ, ಸರ್ಕಾರ ಒಂದೇ ದಿನಕ್ಕೆ 2 ಕೋಟಿ ಲಾಭ ಮಾಡಿಕೊಂಡಿದೆ ಎಂದಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಬಿ.ಎಸ್​.ಸಿಧು ಅವರಿಗೆ ಲಸಿಕೆಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂದಿದ್ದು, ಆರೋಪದ ಬಗ್ಗೆ ತನಿಖೆಯಾಗಲಿದೆ ಎಂದಿದ್ದಾರೆ. “ನನಗೆ ಲಸಿಕೆಗಳ ಮೇಲೆ ಯಾವುದೇ ಹಿಡಿತವಿಲ್ಲ. ನಾನು ಕರೊನಾ ಚಿಕಿತ್ಸೆ, ಟೆಸ್ಟಿಂಗ್​, ಸ್ಯಾಂಪ್ಲಿಂಗ್ ಮತ್ತು ಲಸಿಕಾ ಶಿಬಿರಗಳನ್ನು ಮಾತ್ರ ನೋಡಿಕೊಳ್ಳುತ್ತೇನೆ. ನಾವು ಖಂಡಿತವಾಗಿ ತನಿಖೆ ಮಾಡಿಸುತ್ತೇವೆ” ಎಂದು ಸಿಧು ಹೇಳಿದ್ದಾಗಿ ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ: ಜಿರಳೆಯನ್ನು ಪಶು ಆಸ್ಪತ್ರೆಗೆ ಕರೆದುತಂದ ಮಹಾನುಭಾವ!

    ಬಿಜೆಪಿ ಕೂಡ ಪಂಜಾಬ್​ ಸರ್ಕಾರದ ವಿರುದ್ಧ ಕಟುಟೀಕೆ ಆರಂಭಿಸಿದ್ದು, ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಅವರು, “ರಾಹುಲ್​ ಗಾಂಧಿ ಮೊದಲು ತಮ್ಮ ರಾಜ್ಯದ ಬಗ್ಗೆ ಗಮನ ಹರಿಸಿ ನಂತರ ಬೇರೆಯವರಿಗೆ ಭಾಷಣ ನೀಡಬೇಕು. ಪಂಜಾಬ್​ಗೆ 1.40 ಲಕ್ಷ ಡೋಸ್​ ಕೋವಾಕ್ಸಿನ್​ಅನ್ನು ಒದಗಿಸಲಾಗಿದೆ. ಅದನ್ನು ಅವರು 1000 ರೂ. ಬೆಲೆಯಲ್ಲಿ 20 ಖಾಸಗಿ ಆಸ್ಪತ್ರೆಗಳಿಗೆ ನೀಡಿಬಿಟ್ಟಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

    ಮಧ್ಯಪ್ರದೇಶದಲ್ಲಿ 3,000 ಕಿರಿಯ ವೈದ್ಯರ ರಾಜೀನಾಮೆ

    ವುಹಾನ್ ಲ್ಯಾಬಿಂದ ವೈರಸ್​ ಲೀಕಾಗಿತ್ತೆಂದು ನಾನು ಸರಿಯಾಗೇ ಹೇಳಿದ್ದೆ : ಟ್ರಂಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts