More

    ಸುಳ್ಳುಸುದ್ದಿಗೆ ಶಿಕ್ಷೆ ಗ್ಯಾರಂಟಿ

    |ರುದ್ರಣ್ಣ ಹರ್ತಿಕೋಟೆ ಬೆಂಗಳೂರು
    ಸುಳ್ಳು ಸುದ್ದಿಗಳ ಮೂಲಕ ಸಮಾಜದಲ್ಲಿ ದ್ವೇಷ ಹರಡುವವರ ಹೆಡೆಮುರಿ ಕಟ್ಟಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಸುಳ್ಳು, ನಕಲಿ ಹಾಗೂ ದಾರಿ ತಪ್ಪಿಸುವ ಸುದ್ದಿಗಳನ್ನು ಹರಡಲಾಗುತ್ತಿದೆ. ಆ ಮೂಲಕ ಸರ್ಕಾರದ ಬಗ್ಗೆ ತಪು್ಪ ಸಂದೇಶ ರವಾನೆ ಮಾಡುವ ಕೆಲಸ ಮಾಡಲಾಗುತ್ತಿದೆ. ಇಂತಹ ಸುದ್ದಿಗಳಿಗೆ ಕಾನೂನು ಮೂಲಕವೇ ಬ್ರೇಕ್ ಹಾಕಲು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

    ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ನಕಲಿ ಪೋಸ್ಟ್​ಗಳ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಗಟ್ಟುವ ಉದ್ದೇಶದಿಂದಲೇ ಫ್ಯಾಕ್ಟ್ ಚೆಕ್ ಘಟಕವನ್ನು ತೆರೆಯಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

    ದೇಶದಲ್ಲಿ ಸರ್ಕಾರದ ಕಡೆಯಿಂದ ಸುಳ್ಳು ಸುದ್ದಿಗಳ ಪತ್ತೆ ಕಾರ್ಯ ನಡೆಯುತ್ತಿರುವುದು ಕೇವಲ ಶೇ.18.5 ರಷ್ಟು ಮಾತ್ರ. ರಾಜ್ಯದಲ್ಲಿ ಇದು ಇನ್ನೂ ಕಡಿಮೆ ಇದೆ. ಶೇ.60 ರಷ್ಟು ಜನತೆ ಸುಳ್ಳು ಸುದ್ದಿಗಳನ್ನು ನಂಬಿ, ಅದನ್ನೇ ಇತರರಿಗೂ ಹರಡುತ್ತಾರೆ ಎಂಬುದು ಅಧ್ಯಯನವೊಂದರ ಮಾಹಿತಿಯಾಗಿದೆ.

    ಎರಡು ಇಲಾಖೆಗೆ ಜವಾಬ್ದಾರಿ: ಫ್ಯಾಕ್ಟ್ ಚೆಕ್ ಘಟಕವನ್ನು ಸ್ಥಾಪಿಸುವುದರಿಂದ ಹಿಡಿದು ಸುಳ್ಳು ಸುದ್ದಿ ಪೋಸ್ಟ್ ಮಾಡುವವರು ಹಾಗೂ ಹಂಚಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಗೃಹ ಇಲಾಖೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ನೀಡಿದ್ದಾರೆ. ಇಲಾಖೆಗಳ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಡಾ. ಜಿ. ಪರಮೇಶ್ವರ್ ಇತ್ತೀಚೆಗೆ ಅಧಿಕಾರಿಗಳು ಮತ್ತು ತಜ್ಞರ ಸಭೆ ನಡೆಸಿ ಎರಡು ಇಲಾಖೆಗಳ ಹೊಣೆಗಾರಿಕೆ ಕುರಿತು ಕಾರ್ಯತಂತ್ರ ರೂಪಿಸಿದ್ದಾರೆ.

    ಮುಂದಿನ ವಾರ ಅಂತಿಮ: ಮುಂದಿನ ವಾರ ಸಚಿವರಾದ ಪರಮೇಶ್ವರ್ ಮತ್ತು ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ ಫ್ಯಾಕ್ಟ್​ಚೆಕ್ ಘಟಕ ಸ್ಥಾಪನೆ ಸೇರಿದಂತೆ ನಿಯಮಾವಳಿಗಳನ್ನು ಅಂತಿಮ ಮಾಡಲಿದ್ದಾರೆ.

    ಅಧಿಕಾರಿಗಳಿಗೆ ಜವಾಬ್ದಾರಿ: ಸರ್ಕಾರ ಪ್ರತ್ಯೇಕವಾದ ಘಟಕವನ್ನೇ ತೆರೆದು ರಾಜ್ಯ ಮಟ್ಟದಲ್ಲಿ ಐಪಿಎಸ್ ಅಧಿಕಾರಿಯೊಬ್ಬರನ್ನು ಇದರ ಉಸ್ತುವಾರಿಯಾಗಿ ನೇಮಕ ಮಾಡಲಾಗುತ್ತದೆ. ನಗರ ಪ್ರದೇಶದಲ್ಲಿ ಡಿಸಿಪಿಗಳು ಹಾಗೂ ಗ್ರಾಮೀಣ ಭಾಗದಲ್ಲಿ ಡಿವೈಎಸ್​ಪಿಗಳು ಮೇಲ್ವಿಚಾರಕರಾಗಿ ಕೆಲಸ ಮಾಡಲಿದ್ದಾರೆ.

    ಶಿಕ್ಷೆ ಏನು?: ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ದಂಡ, ಜೈಲು ಸೇರಿ ವಿವಿಧ ಶಿಕ್ಷೆಗಳನ್ನು ನೀಡಲು ಆದೇಶಿಸಿದೆ. ಅದರ ಜತೆಗೆ ಐಪಿಸಿಯಲ್ಲಿರುವ ವಿವಿಧ ಕಲಂಗಳನ್ನು ಬಳಸಿಕೊಂಡು ಶಿಕ್ಷೆ ನೀಡಲಾಗುತ್ತದೆ. ಪ್ರತ್ಯೇಕವಾದ ಕಾನೂನನ್ನೇ ಮಾಡಬೇಕಾ ಎಂಬ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತಿದೆ. ಆದರೆ ತಕ್ಷಣಕ್ಕೆ ಕಾರ್ಯಕಾರಿ ಆದೇಶವೊಂದರ ಮೂಲಕ ಜಾರಿಗೆ ನೀಡಲಾಗುತ್ತದೆ.

     ಫ್ಯಾಕ್ಟ್​ಚೆಕ್ ಹೇಗೆ?

    ಸರ್ಕಾರ ಪ್ರತ್ಯೇಕವಾದ ಫ್ಯಾಕ್ಟ್ ಚೆಕ್ ಘಟಕವನ್ನು ತೆರೆಯಲಿದೆ. ಅದರ ಜತೆಗೆ ಈಗ ಫ್ಯಾಕ್ಟ್​ಚೆಕ್ ಮಾಡುತ್ತಿರುವ ಆಲ್ಟ್ ನ್ಯೂಸ್, ಬೂಮ್ ಲೈವ್, ಈ ದಿನ, ಲಾಜಿಕಲಿ ಮೊದಲಾದ ಏಜೆನ್ಸಿಗಳ ನೆರವು ಪಡೆಯಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡು ರೀತಿಯ ಸುಳ್ಳು ಸುದ್ದಿಗಳ ದಾಳಿ ನಡೆಯುತ್ತದೆ. ಅದರಲ್ಲಿ ವೈಯಕ್ತಿಕವಾಗಿ ತೇಜೋವಧೆ ಮಾಡುವುದು ಒಂದಾದರೆ, ಇನ್ನೊಂದು ಸರ್ಕಾರದ ವಿರುದ್ಧ ಮಾಡುವುದು. ಇಲ್ಲಿ ಎರಡೂ ರೀತಿಯ ಪರಿಶೀಲನೆ ನಡೆಯಲಿದೆ. ವೈಯಕ್ತಿಕ ತೇಜೋವಧೆಯಲ್ಲಿಯೂ ಸರ್ಕಾರವನ್ನು ಎಳೆದು ತಂದಿದ್ದರೆ, ಇನ್ನೊಂದು ಸಂಪೂರ್ಣವಾಗಿ ಸರ್ಕಾರವನ್ನೇ ಗುರಿಯಾಗಿಸಿ ಟೀಕೆ ಮಾಡುವ ಮೂಲಕ ಕೋಮುಭಾವನೆ ಕೆರಳಿಸುವಂತಿದ್ದರೆ ಅಂತಹ ಪೋಸ್ಟ್​ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

    ಫ್ಯಾಕ್ಟ್ ಚೆಕ್ ಘಟಕದ ಹೆಸರು

    ಫ್ಯಾಕ್ಟ್​ಚೆಕ್ ಬ್ಯೂರೋ ಆಫ್ ಕರ್ನಾಟಕ (ಎಫ್​ಸಿಬಿ-ಕೆ), ಕರ್ನಾಟಕ ಫ್ಯಾಕ್ಟ್​ಚೆಕ್ ಸೆಲ್ (ಕೆಎಫ್​ಸಿಸಿ), ಮಿಸ್ ಇನ್​ಫಾಮೇಷನ್ ಕೋಬ್ಯಾಟ್ ಸೆಲ್ (ಎಂಸಿಸಿ) ಮತ್ತು ಮಿಸ್ ಇನ್​ಫಾಮೇಷನ್ ಪ್ರಿವೆಂಟಿವ್ ಸೆಲ್ (ಎಂಪಿಸಿ) ಎಂಬುದರಲ್ಲಿ ಯಾವುದಾದರೂ ಒಂದನ್ನು ಇಡಲಾಗುತ್ತದೆ.

    ಯಾವ ಇಲಾಖೆಯ ಜವಾಬ್ದಾರಿ ಏನು?

    1. ಐಟಿ ಬಿಟಿ ಇಲಾಖೆ
    • ಫ್ಯಾಕ್ಟ್ ಚೆಕ್ ಮಾಡುವ ಏಜೆನ್ಸಿಗಳನ್ನು ಗುರುತಿಸುವುದು
    • ದಾರಿ ತಪ್ಪಿಸುವ ಮಾಹಿತಿಯ ಸುದ್ದಿಗಳನ್ನು ಗುರುತಿಸುವುದು
    • ಸ್ಪಷ್ಟನೆ ನೀಡುವುದು
    • ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸುವುದು
    • ಸಾಮಾಜಿಕವಾಗಿ ತಪು್ಪ ಮಾಹಿತಿ ಹರಡದಂತೆ ಎಚ್ಚರವಹಿಸುವುದು
    1.  ಗೃಹ ಇಲಾಖೆ
    •  ಪ್ರತ್ಯೇಕವಾದ ಪೊಲೀಸ್ ಘಟಕ ತೆರೆಯುವುದು
    • ಜಾಲತಾಣಗಳ ಮೇಲೆ ನಿಗಾ
    • ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವ, ತಪು್ಪ ಮಾಹಿತಿಯ ಸುದ್ದಿಗಳನ್ನು ಗುರುತಿಸುವುದು
    • ಸಾರ್ವಜನಿಕವಾಗಿ ಇಂತಹ ಸುದ್ದಿ ಹರಡದಂತೆ ಜಾಗೃತಿ ಮೂಡಿಸುವುದು
    • ತಪು್ಪ ಮಾಡಿದವರಿಗೆ ಕಾಲಮಿತಿಯಲ್ಲಿ ಶಿಕ್ಷೆ
    • ಪ್ರತಿ ಸೈಬರ್ ಠಾಣೆಯಲ್ಲಿ ಸಾರ್ವಜನಿಕ ದೂರು ಘಟಕ ಸ್ಥಾಪನೆ

    ನಕಲಿ, ಸುಳ್ಳು ಮತ್ತು ದಾರಿ ತಪ್ಪಿಸುವ ಸುದ್ದಿಗಳಿಗೆ ಕಡಿವಾಣ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ. ಮುಂದಿನ ವಾರದಲ್ಲಿ ಸಿಎಂ ಅವರೊಂದಿಗೆ ಚರ್ಚೆ ನಡೆಸಲಿದ್ದೇವೆ. ಸರ್ಕಾರದ ಬಗ್ಗೆ ತಪು್ಪ ಅಭಿಪ್ರಾಯ ಮೂಡಬಾರದು ಎಂಬುದು ಒಟ್ಟಾರೆ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಪ್ರತ್ಯೇಕ ಕಾನೂನು ಅಗತ್ಯವಿದ್ದರೆ ರೂಪಿಸಲಾಗುವುದು.

    | ಪ್ರಿಯಾಂಕ್ ಖರ್ಗೆ ಐಟಿ,ಬಿಟಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts