More

    ಡುಂಡಿರಾಜ್ ಅಂಕಣ; ಸಾಧನೆಯ ಶಿಖರ ಮುಟ್ಟಲು ಸೋಲುಗಳೇ ಮೆಟ್ಟಿಲು 

    ನನ್ನ ನಾಲ್ಕು ವರ್ಷದ ಮೊಮ್ಮಗಳು ದಿವಿಜಾ ಕಳೆದ ವಾರವಿಡೀ ನಮ್ಮ ಮನೆಯಲ್ಲಿದ್ದಳು. ಆಕೆ ಬಂದರೆ ನನ್ನ ಸಂಪೂರ್ಣ ಸಮಯವನ್ನು ಅವಳ ಜತೆ ಆಡಲು ಮೀಸಲಿಡಬೇಕು. ಅಪ್ಪ, ಅಮ್ಮ, ಅಜ್ಜಿ ಮನೆಯಲ್ಲೇ ಇದ್ದರೂ ಆಡುವುದಕ್ಕೆ ಅವಳು ನನ್ನನ್ನೇ ಕರೆಯುತ್ತಾಳೆ.

    ಡುಂಡಿರಾಜ್ ಅಂಕಣ; ಸಾಧನೆಯ ಶಿಖರ ಮುಟ್ಟಲು ಸೋಲುಗಳೇ ಮೆಟ್ಟಿಲು ಇದರ ಹಿಂದೆ ಅವಳ ಅಜ್ಜಿ ಅಂದರೆ ನನ್ನ ಹೆಂಡತಿಯ ಪಿತೂರಿ ಇರಬಹುದೆಂಬ ಅನುಮಾನ ನನಗಿದೆ. ಉದ್ಯೋಗದಿಂದ ನಿವೃತ್ತನಾಗಿರುವ ಅಜ್ಜನಿಗೆ ಏನೂ ಕೆಲಸವಿಲ್ಲ. ಆಡಲು ಅವರೇ ಸೂಕ್ತ ವ್ಯಕ್ತಿ ಎಂದು ಅಜ್ಜಿ ಆಕೆಗೆ ಹೇಳಿರಬೇಕು. ಹೀಗಾಗಿ ನನಗೆ ಓದಲಿಕ್ಕಿದೆ, ಬರೆಯಲಿಕ್ಕುಂಟು, ಮೈ ಕೈ ನೋವು, ನೀನು ಒಬ್ಬಳೇ ಆಡಿಕೋ ಅಂದರೆ ಅವಳು ಕೇಳುವುದೇ ಇಲ್ಲ. ಬಾ ಆಡೋಣ ಎಂದು ಕೈ ಹಿಡಿದು ಎಳೆಯುತ್ತಾಳೆ. ತಾತ ಅಟಕ್ಕೆ ಬರೋದಿಲ್ಲ ಅಂತ ಅಜ್ಜಿಯ ಹತ್ತಿರ ದೂರು ಕೊಡುತ್ತಾಳೆ. ನನ್ ಜತೆ ಆಟ ಆಡದಿದ್ರೆ ಇನ್ನೊಂದ್ಸಲ ನಿಂ ಮನೆಗೇ ಬರೋದಿಲ್ಲ ಎಂದು ಬೆದರಿಕೆ ಹಾಕುತ್ತಾಳೆ.

    ನಿಜ ಹೇಳಬೇಕೆಂದರೆ ನನಗೂ ಅವಳ ಜತೆ ಆಡುವುದು ಖುಷಿಯ ಸಂಗತಿ. ಸಣ್ಣ ಸಣ್ಣ ಸಂಗತಿಗಳ ಬಗ್ಗೆ ಮಕ್ಕಳು ತೋರಿಸುವ ಕುತೂಹಲ, ಕೇಳುವ ಪ್ರಶ್ನೆಗಳು ಮಜವಾಗಿರುತ್ತವೆ. ಒಮ್ಮೆ ಬೆಳಗಿನ ಹೊತ್ತು ಆಕಾಶದಲ್ಲಿ ಚಂದ್ರನನ್ನು ನೋಡಿ ದಿವಿಜಾ ಪುಟ್ಟಿಗೆ ಆಶ್ಚರ್ಯ. ‘ಅಜ್ಜಾ ಅಲ್ನೋಡು ಇನ್ನೂ ರಾತ್ರಿಯಾಗಿಲ್ಲ. ಚಂದ್ರ ಯಾಕೆ ಬಂದ?’ ಅಂತ ಕೇಳಿದಳು. ನನಗೆ ತಕ್ಷಣ ಏನು ಹೇಳುವುದೆಂದು ತಿಳಿಯಲಿಲ್ಲ. ‘ಅವನಿಗೆ ಸೂರ್ಯ ಇರೋದು ಗೊತ್ತಿಲ್ಲ. ಗೊತ್ತಾದ ತಕ್ಷಣ ಹೋಗ್ತಾನೆ’ ಎಂದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡೆ.

    ಮೊನ್ನೆ ಒಂದು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಹೋಗಬೇಕಿತ್ತು. ದಿವಿಜಾ ನೀನು ಹೋಗಬಾರದು ಎಂದು ಹಟ ಮಾಡತೊಡಗಿದಳು. ಅವಳಿಗೆ ಒಂದು ಆಮಿಷ ಒಡ್ಡಿದೆ. ಭಾಷಣಕ್ಕೆ ಹೋದ್ರೆ ನನಗೆ ಸನ್ಮಾನ ಮಾಡಿ ಹಣ್ಣಿನ ಬುಟ್ಟಿ ಕೊಡ್ತಾರೆ. ಅದನ್ನೆಲ್ಲ ನಿನಗೇ ಕೊಡ್ತೀನಿ ಅಂದೆ. ತಕ್ಷಣ ಆಕೆ ಹಾಗಾದ್ರೆ ಹೋಗು. ಕಪ್ಪು ದ್ರಾಕ್ಷಿ ಹಣ್ಣು ತರ್ಬೇಕು ಅಂತ ಷರತ್ತು ಹಾಕಿ ಅನುಮತಿ ಕೊಟ್ಟಳು. ಅವಳ ಮುಗ್ಧತೆಯನ್ನು ಕಂಡು ನಗು ಬಂತು.

    ದಿವಿಜಳ ಜೊತೆ ಆಡುವಾಗ ನಾನು ಗಮನಿಸಿದ ಒಂದು ಸಂಗತಿ ಮಾತ್ರ ನನ್ನನ್ನು ಚಿಂತೆಗೆ ಈಡು ಮಾಡಿದೆ. ಅದೆಂದರೆ ಎಲ್ಲಾ ಆಟಗಳಲ್ಲೂ ಅವಳೇ ಗೆಲ್ಲಬೇಕು. ಅವಳೇ ಫಸ್ಟ್ ಬರಬೇಕು. ಒಮ್ಮೆ ಟೆರೇಸ್ ಮೇಲೆ ಅವಳ ಜತೆ ಓಟದ ಸ್ಪರ್ಧೆಯಲ್ಲಿ ನಾನು ಯಾವುದೋ ಗುಂಗಿನಲ್ಲಿ ವೇಗವಾಗಿ ಓಡಿ ಅವಳಿಗಿಂತ ಮೊದಲು ಗುರಿ ತಲುಪಿದೆ. ದಿವಿಜಳಿಗೆ ತಾನು ಸೋತೆ ಎಂದು ಅಳು, ಕೋಪ ಒಟ್ಟಿಗೇ ಬಂತು. ನಿನ್ ಜತೆ ಆಡೋಲ್ಲ ಠೂ ಎಂದು ಮೂಲೆಯಲ್ಲಿ ಕುಳಿತು ಬಿಟ್ಟಳು. ಆಟದಲ್ಲಿ ಯಾರಾದರೊಬ್ಬರು ಸೋಲಲೇಬೇಕು. ಯಾವಾಗಲೂ ಗೆಲ್ಲಲು ಸಾಧ್ಯವಿಲ್ಲ ಎಂದು ಅವಳನ್ನು ಕಷ್ಟಪಟ್ಟು ಸಮಾಧಾನಪಡಿಸಿದೆ.

    ದಿವಿಜಾ ಇನ್ನೂ ನಾಲ್ಕು ವರ್ಷದ ಮಗು. ಅವಳಿಗೆ ಸೋಲನ್ನು ನಗುನಗುತ್ತ ಸ್ವೀಕರಿಸಬೇಕು ಎಂದು ತಿಳಿದುಕೊಳ್ಳುವುದು ಕಷ್ಟ. ಆಶ್ಚರ್ಯದ ಸಂಗತಿಯೆಂದರೆ ಈಗೀಗ ದೊಡ್ಡವರಿಗೂ ಅದು ಅರ್ಥವಾಗುತ್ತಿಲ್ಲ. ಜಂಟಲ್​ವೆುನ್ಸ್ ಗೇಮ್ ಅನ್ನಿಸಿಕೊಂಡಿರುವ ಕ್ರಿಕೆಟ್​ನಲ್ಲಿಯೂ ಗೆದ್ದವರು ಸೋತವರನ್ನು ಮೂದಲಿಸುತ್ತಾರೆ. ಭಾರತ ಮತ್ತು ಪಾಕಿಸ್ಥಾನದ ನಡುವೆ ಕ್ರಿಕೆಟ್ ಮ್ಯಾಚ್ ನಡೆದರೆ ಎರಡು ದೇಶಗಳ ಮಧ್ಯೆ ಯುದ್ಧ ನಡೆಯುತ್ತಿದೆ ಅನ್ನುವ ವಾತಾವರಣ ಸೃಷ್ಟಿಯಾಗುತ್ತದೆ. ಭಾರತ ಗೆದ್ದರೆ ಪಾಕಿಸ್ಥಾನದವರು ಸಿಟ್ಟಿನಿಂದ ಟಿವಿಯನ್ನು ಎಸೆದು ಪುಡಿ ಪುಡಿ ಮಾಡುತ್ತಾರೆ. ಭಾರತದ ಅಭಿಮಾನಿಗಳು ಎಷ್ಟೋ ವಾಸಿ. ಪಾಕ್ ವಿರುದ್ಧ ಇಂಡಿಯಾ ಸೋತಾಗ ಟಿವಿಯ ಬದಲು ಬರೀ ರಿಮೋಟ್ ಎಸೆಯುತ್ತಾರೆ. ಯಾಕೆ ನಾವು ಯಾವಾಗಲೂ ಗೆಲ್ಲಲೇಬೇಕೆಂದು ಹಠ ಮಾಡುತ್ತೇವೆ? ಯಾಕೆ ನಮಗೆ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ?

    ಪಾಕ್ ವಿರುದ್ಧ ಭಾರತ

    ಸೋತು ಹೋಯಿತು ಅಂತ

    ರಿಮೋಟ್ ಎಸೆಯುವಷ್ಟು ಕೋಪಾನಾ?

    ಮುಂದಿನ ಪಂದ್ಯದಲ್ಲಿ

    ಗೆಲ್ಲಬಹುದು

    ಸೋಲೇ ಗೆಲುವಿನ ಸೋಪಾನ!

    ಸಾಧನೆಯ ಶಿಖರವನ್ನು ಮುಟ್ಟಲು ಸೋಲುಗಳೇ ಮೆಟ್ಟಿಲು ಎಂಬುದನ್ನು ನಾವು ಮರೆಯುತ್ತಿದ್ದೇವೆಯೇ? ಹೌದು ಅನ್ನಿಸುತ್ತಿದೆ. ಈಗ ಯಾರಿಗೂ ಒಂದೊಂದೇ ಮೆಟ್ಟಿಲು ಹತ್ತಿ ಮೇಲೇರುವ ತಾಳ್ಮೆ ಇಲ್ಲ. ಎಲ್ಲರಿಗೂ ದಿಢೀರ್ ಯಶಸ್ಸು ಬೇಕು. ಒಂದನೇ ಮಹಡಿ ಹತ್ತಬೇಕಾದರೂ ಲಿಫ್ಟ್ ಇದೆಯಾ? ಎಂದು ಕೇಳುತ್ತಾರೆ. ಮೆಟ್ರೋ ಸ್ಟೇಶನ್​ಗಳಲ್ಲಿ ಲಿಫ್ಟ್ ಹಿರಿಯ ನಾಗರಿಕರಿಗೆ ಎಂದು ಬರೆದಿದ್ದರೂ ಅದರಲ್ಲಿ ಕಿರಿಯರೇ ತುಂಬಿರುತ್ತಾರೆ.

    ಆಟದಲ್ಲಾಗಲೀ ಅಥವಾ ಬದುಕಿನಲ್ಲಾಗಲೀ ನಿರಂತರವಾಗಿ ಗೆಲ್ಲುವುದು ಸಾಧ್ಯವಿಲ್ಲ. ಗೆದ್ದಾಗ ಅತಿಯಾಗಿ ಸಂಭ್ರಮಿಸಬಾರದು. ಸೋತಾಗ ನೊಂದು ಕೊಳ್ಳದೇ ಸೋಲಿಗೆ ಕಾರಣವೇನೆಂದು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದೆಲ್ಲ ಉಪದೇಶ ಮಾಡುವವರು ಬೇಕಾದಷ್ಟು ಜನ ಸಿಗುತ್ತಾರೆ. ಆದರೆ ವಾಸ್ತವದಲ್ಲಿ ಆಗುತ್ತಿರುವುದೇ ಬೇರೆ. ಗೆದ್ದವರಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯ ಸಲ್ಲುತ್ತಿದೆ. ಸೋತವರನ್ನು ಕೇಳುವವರೇ ಇಲ್ಲ. ನಮ್ಮ ಕಡೆ ಗೆದ್ದ ಎತ್ತಿನ ಬಾಲ ಹಿಡಿಯುವುದು ಎಂಬ ಗಾದೆಯೇ ಉಂಟು. ಗೆದ್ದವರಿಗೆ ಎಲ್ಲರೂ ಬಹುಪರಾಕ್ ಅನ್ನುತ್ತಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಗೆದ್ದವರದೇ ಗುಣಗಾನ. ನಾವು ಜಯದ ಪಕ್ಷಪಾತಿಗಳು.

    ಜಯ, ವಿಜಯ, ಅಜಿತ್, ಅಜಯ್, ಜಯಲಕ್ಷ್ಮಿ, ಜಯರಾಮ ಮುಂತಾದ ಹೆಸರುಗಳನ್ನು ಗಮನಿಸಿ. ಹೆಸರಿನಲ್ಲಿ ಸೋಲು ಇರುವವರು ಯಾರಾದರೂ ಇದ್ದಾರಾ? ಬಿಳಿಗಿರಿರಂಗನ ಬೆಟ್ಟ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿರುವ ಬುಡಕಟ್ಟು ಜನಾಂಗದವರನ್ನು ಸೋಲಿಗರು ಅನ್ನುತ್ತಾರೆ. ಆದರೆ ಅವರಿಗೂ ಸೋಲಿಗೂ ಸಂಬಂಧವಿಲ್ಲ. ನೀವು ಗೆದ್ದಾಗ ಸಂಭ್ರಮಿಸಲು, ನಿಮ್ಮ ಗೆಲುವಿನ ಪ್ರತಿಫಲವನ್ನು ಹಂಚಿಕೊಳ್ಳಲು ಎಲ್ಲರೂ ಮುಂದೆ ಬರುತ್ತಾರೆ. ಸೋತಾಗ ಸಂತೈಸಲು ಬರುವವರು ತೀರಾ ಕಡಿಮೆ. ನಿಮ್ಮ ಗೆಲುವಿನಲ್ಲಿ ಪಾಲುದಾರರಾಗಲು ಬೇಕಾದಷ್ಟು ಜನರು ಸಿಗುತ್ತಾರೆ. ಆದರೆ ಸೋಲಿಗೆ ನೀವೊಬ್ಬರೇ ಮಾಲಿಕರು. ಸೋಲ್ ಪೊ›ಪ್ರೈಟರ್! ಗೆದ್ದಾಗ ಹಿಪ್ ಹಿಪ್ ಹುರ್ರೇ ಎಂದು ಎಲ್ಲರೂ ಒಟ್ಟಾಗಿ ಸಮೂಹ ಗೀತೆ ಹಾಡುತ್ತೇವೆ. ಸೋತಾಗ ನಮ್ಮ ಗೋಳಿನ ಗೀತೆಗೆ ದನಿಗೂಡಿಸಲು ಹಾಡಲು ಯಾರೂ ಬರುವುದಿಲ್ಲ. ಸೋಲು ಯಾವಾಗಲೂ ಸೋಲೋ!

    ಚುನಾವಣೆಯಲ್ಲಿ ನಮ್ಮ ನಾಯಕರು ಗೆದ್ದಾಗ ಅವರ ಹಿಂಬಾಲಕರು ಯಾವ ರೀತಿಯಲ್ಲಿ ವಿಜಯೋತ್ಸವ ನಡೆಸುತ್ತಾರೆ ಎಂಬುದನ್ನು ನೀವು ನೋಡಿರಬಹುದು. ನೂರಾರು ಮೀಟರ್ ಉದ್ದದ ಪಟಾಕಿ ಮಾಲೆಯನ್ನು ಸಿಡಿಸುವುದು, ಗೆದ್ದವರ ಆಳೆತ್ತರದ ಕಟೌಟ್ ನಿಲ್ಲಿಸಿ ಅದಕ್ಕೆ ಕ್ಷೀರಾಭಿಷೇಕ ಮಾಡುವುದು, ಕ್ವಿಂಟಲ್​ಗಟ್ಟಲೆ ತೂಗುವ ಸೇಬು ಹಣ್ಣಿನ ಹಾರ ಹಾಕುವುದು, ಕರ್ಕಶ ಸಂಗೀತ ಹಾಕಿಕೊಂಡು ರಸ್ತೆಯಲ್ಲಿ ನರ್ತಿಸುವುದು ಇತ್ಯಾದಿ ಮಾಡಿದರೆ ಸಾಲದು. ಸೋತ ಅಭ್ಯರ್ಥಿಗಳ ಬೆಂಬಲಿಗರನ್ನು ಹಂಗಿಸಿ, ಅವರ ಜತೆ ಕಾಲು ಕೆರೆದು ಜಗಳ ಮಾಡಿದರೆ ಮಾತ್ರ ಗೆದ್ದವರ ಅಭಿಮಾನಿಗಳಿಗೆ ಸಮಾಧಾನವಾಗುತ್ತದೆ.

    ಸೋತವರೂ ತಮ್ಮ ಸೋಲನ್ನು ಸಮಚಿತ್ತದಿಂದ ಸ್ವೀಕರಿಸುವುದಿಲ್ಲ. ಸೋಲಿನ ಸುಳಿವು ಸಿಗುತ್ತಿದ್ದ ಹಾಗೇ ಯಾರಿಗೂ ಗೊತ್ತಾಗದಂತೆ ಎಣಿಕೆ ಕೇಂದ್ರದಿಂದ ಮಾಯವಾಗುತ್ತಾರೆ. ತಮ್ಮ ಸೋಲಿಗೆ ಏನು ಕಾರಣವಿರಬಹುದೆಂದು ಸೋಲ್ ಸರ್ಚಿಂಗ್ ಮಾಡುವುದಿಲ್ಲ. ಕುಣಿಯಲಾಗದವರು ನೆಲ ಡೊಂಕು ಅಂದ ಹಾಗೆ ಸೋಲಿಗೆ ಏನಾದರೊಂದು ಕುಂಟು ನೆಪ ಹುಡುಕುತ್ತಾರೆ. ಎದುರಾಳಿ ಜಾತಿ, ಹೆಂಡ, ಹಣ ಮತ್ತು ತೋಳ್ಬಲದಿಂದ ಗೆದ್ದರು ಎನ್ನುವುದು ಸೋತವರು ಹೇಳುವ ಸಾಮಾನ್ಯ ಸಬೂಬು. ಇತ್ತೀಚಿನ ವರ್ಷಗಳಲ್ಲಿ ಸೋತವರಿಗೆ ಇನ್ನೊಂದು ಒಳ್ಳೆಯ ನೆವನ ಸಿಕ್ಕಿದೆ. ಅದು ಏನು ಎಂದು ತಿಳಿಯಲು ನೀವು ಈ ಹನಿಗವನ ಓದಬೇಕು:

    ಜಾತಿ ಲೆಕ್ಕಾಚಾರ

    ಹೆಂಗಸರಿಗೆ ಕುಕ್ಕರು

    ಗಂಡಸರಿಗೆ ಲಿಕ್ಕರು

    ಗೆಲ್ಲಲು ತರತರದ ತಂತ್ರ

    ಆದರೂ ಸೋತರೆ

    ಕೊನೆಗೆ ದೂರುತ್ತಾರೆ-

    ತಿರುಚಿದ್ದಾರೆ ಮತಯಂತ್ರ!

    ಇದು ಬಿಜೆಪಿ ವಿರುದ್ಧ ಸೋತವರು ಮಾತ್ರ ಹೇಳಬಹುದಾದ ನೆಪ.

    ನಮ್ಮ ಬಾಲ್ಯದಲ್ಲಿ ಓದು ಕೂಡಾ ಒಂದು ಆಟವಾಗಿತ್ತು. ಫೇಲಾದವರು ಹೆಚ್ಚೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ವಯಸ್ಸಿನಲ್ಲಿ ದೊಡ್ಡವರೆಂದು ಅವರಿಗೆ ಉಳಿದ ಮಕ್ಕಳು ಗೌರವ ಕೊಡುತ್ತಿದ್ದರು. ಕಡಿಮೆ ಅಂಕ ಪಡೆದವರು ನಮ್ಮದು ಗಾಂಧಿ ಕ್ಲಾಸು ಎಂದು ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುತ್ತಿದ್ದರು. ಈಗ ಹಾಗಲ್ಲ. ವಿದ್ಯಾಭ್ಯಾಸವೆಂದರೆ ಒಂದು ಯುದ್ಧದ ಹಾಗೆ. ಮಕ್ಕಳು ಅತ್ಯಧಿಕ ಅಂಕ ಗಳಿಸಿದರೆ ಗೆಲುವು. ಅಂಕ ಕಡಿಮೆಯಾದರೆ ಅದು ಸೋಲು ಎಂಬ ಅಭಿಪ್ರಾಯವನ್ನು ಶಿಕ್ಷಣ ಸಂಸ್ಥೆಗಳು ಪೋಷಕರ ಮನಸ್ಸಿನಲ್ಲಿ ತುಂಬಿಸಿವೆ.

    ಎಲ್ಲರ ಕೈಗೆಟಕುವ ಸಾಮಾಜಿಕ ಮಾಧ್ಯಮಗಳಿಂದಾಗಿ ಸಣ್ಣ ಗೆಲುವನ್ನು ದೊಡ್ಡದೆಂಬಂತೆ ಬಿಂಬಿಸುವುದು ಸುಲಭವಾಗಿದೆ. ಕಡಿಮೆ ಅಂಕ ಪಡೆಯುವುದು ಅಥವಾ ಫೇಲಾಗುವುದು ಅಪರಾಧವಲ್ಲ ಎಂದು ಮಕ್ಕಳಿಗೆ ಯಾರೂ ಹೇಳುವುದಿಲ್ಲ. ಹೀಗಾಗಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಫಲಿತಾಂಶ ಬಂದಾಗ ಸೋಲನ್ನು ಅರಗಿಸಿಕೊಳ್ಳಲಾಗದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.

    ಸದಾ ಗೆಲ್ಲುತ್ತಲೇ ಇರಬೇಕು. ಸೋಲುವುದು ಅಪಮಾನ ಎಂಬ ಧೋರಣೆಯನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿದರೆ ಅದು ದೊಡ್ಡವರಾದ ಮೇಲೆಯೂ ಮುಂದುವರಿಯುತ್ತದೆ. ಉದ್ಯೋಗದಲ್ಲಿ ಭಡ್ತಿ ಸಿಗದಿದ್ದರೆ, ವ್ಯವಹಾರದಲ್ಲಿ ನಷ್ಟವಾದರೆ ಅದು ದೊಡ್ಡ ಸೋಲು ಎಂದು ಭಾವಿಸಿ ಹತಾಶರಾಗುತ್ತಾರೆ. ಇದೊಂದು ತಾತ್ಕಾಲಿಕ ಹಿನ್ನಡೆ. ಮರಳಿ ಯತ್ನ ಮಾಡೋಣ ಎಂದು ಯೋಚಿಸುವುದಿಲ್ಲ.

    ಪ್ರೇಮಿಗಳ ಲೋಕದಲ್ಲಿ ಸೋಲು ಒಪ್ಪಿಕೊಂಡರೆ ಲಾಭವಿದೆ. ಪ್ರೇಯಸಿಯ ಹತ್ತಿರ ಪ್ರಿಯಕರ ನಾನು ನಿನ್ನ ಚೆಲುವಿಗೆ ಮನಸೋತಿದ್ದೇನೆ ಅಂದರೆ ಆಕೆಗೆ ಖುಷಿಯೋ ಖುಷಿ. ಅದೇ ರೀತಿ ಹುಡುಗಿಯರೂ ಹುಡುಗರ ರೂಪ, ಗುಣ, ಜೀವನ ಶೈಲಿಗೆ ಮನಸೋತು ಅವನನ್ನು ಪ್ರೇಮಿಸುತ್ತಾರೆ. ಇಲ್ಲಿ ಸೋಲೇ ಗೆಲುವಾಗುತ್ತದೆ. ಗಂಡು ಹೆಣ್ಣಿನ ಸ್ನೇಹ ಪ್ರೇಮವಾಗಿ ಬದಲಾಗಬೇಕಾದರೆ ಅವರಲ್ಲಿ ಯಾರಾದರೊಬ್ಬರು ನಾನು ನಿನಗೆ ಸೋತಿದ್ದೇನೆ ಎಂದು ಹೇಳಬೇಕು. ಸಾಮಾನ್ಯವಾಗಿ ಮೊದಲು ಹೀಗೆ ಹೇಳುವವರು ಗಂಡಸರು.

    ಈ ಗಂಡಸರ

    ಹಣೆಬರಹವೇ ಇಷ್ಟು

    ಹೆಣ್ಣಿನ ಚೆಲುವಿಗೆ

    ಮನ ಸೋಲುತ್ತಾರೆ

    ಮದುವೆಯಾದ ಮೇಲೆ ಪ್ರತಿ

    ದಿನ ಸೋಲುತ್ತಾರೆ!

    ದಾಂಪತ್ಯದಲ್ಲೂ ಅಷ್ಟೇ. ಇಬ್ಬರೂ ನಾನೇ ಗೆಲ್ಲಬೇಕೆಂದು ಜಿದ್ದಿಗೆ ಬಿದ್ದು ಜಗಳವಾಡಿದರೆ ದಾಂಪತ್ಯ ಸೋಲುತ್ತದೆ.

    ಒಬ್ಬರು ಸೋತರೆ ಮಾತ್ರ ಇನ್ನೊಬ್ಬರು ಗೆಲ್ಲಲು ಸಾಧ್ಯ. ಸೋಲುವ ಭಯದಲ್ಲಿ ಯಾರೂ ಸ್ಪರ್ಧೆಯಲ್ಲಿ ಭಾಗವಹಿಸದಿದ್ದರೆ ಯಾರಿಗೂ ಗೆಲ್ಲಲು ಆಗುವುದಿಲ್ಲ. ಆದುದರಿಂದ ಆಟದಲ್ಲಿ ಪಾಲ್ಗೊಂಡ ಎಲ್ಲರನ್ನೂ ಅಭಿನಂದಿಸಬೇಕು. ಸೋಲನ್ನು ಯಾವಾಗಲೂ ವೀರೋಚಿತ ಅನ್ನೋಣ. ಹೀನಾಯ ಸೋಲು ಎಂದು ಜರೆೆಯುವುದು ಬೇಡ. ಏಕೆಂದರೆ ಸೋಲ್ಜರ್ ಎಂಬ ಶಬ್ದದಲ್ಲೇ ಸೋಲಿದೆ! ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಬದುಕುವುದನ್ನು ಕಲಿಯೋಣ. ನಮ್ಮ ಮಕ್ಕಳಿಗೆ ಕಲಿಸೋಣ. ಏಕೆಂದರೆ ಸೋಲೇ ಗೆಲುವಿನ ಸೋಪಾನ.

    ಮುಗಿಸುವ ಮುನ್ನ:

    ಹಳೆಯ ಕಹಿ ನೆನಪುಗಳ

    ಒಣ ಎಲೆಗಳನ್ನೆಲ್ಲ

    ಕಿತ್ತೊಗೆದು ನಿಂತಿವೆ ಮರಗಳು

    ಹೊಸ ಇಸವಿ ಬಂದರೂ

    ಮರೆತಿಲ್ಲ ನಾವು

    ಗತವರ್ಷದ ಸೋಲು, ಗೋಳು! 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts