More

    ಶಾಂತಿಯುತ ಮತದಾನಕ್ಕೆ ಅಗತ್ಯ ಸಿದ್ಧತೆ

    ಚಿಕ್ಕಮಗಳೂರು: ರೋಚಕ ಹಣಹಣಿ ಹಾಗೂ ಸರಳ ಸಜ್ಜನ ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆಯುತ್ತಿರುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಮತದಾನ ಇಂದು ನಡೆಯಲಿದೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಕ್ಷೇತ್ರದ ಚುನಾವಣೆಯಲ್ಲಿ ನಾಳೆ ಎಲ್ಲರ ಭವಿಷ್ಯ ನಿರ್ಧಾರವಾಗಲಿದೆ.

    ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಏ. 26ರಂದು ಬೆಳಗ್ಗೆ ಏಳು ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಸಂಜೆ 6ಗಂಟೆವರೆಗೆ ನಡೆಯಲಿದೆ. ಮತದಾನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುವ ಸಾಧ್ಯತೆಯಿದೆ.
    ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1842 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮತದಾನದ ಪ್ರಮಾಣ ಶೇಕಡವಾರು ಹೆಚ್ಚಾಗಲಿ ಎಂಬ ಕಾರಣಕ್ಕೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದ್ದು, ಮತದಾನ ಮಾಡಲು ಅರ್ಹತೆ ಹೊಂದಿರುವ ಪ್ರತಿಯೊಬ್ಬರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
    ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಗುರುವಾರ ನಗರದ ಐಡಿಎಸ್ ಜಿ ಕಾಲೇಜಿನಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಚುನಾವಣಾ ಸಿಬ್ಬಂದಿಗೆ ಕೊನೆ ಹಂತದ ತರಬೇತಿ ನೀಡಲಾಯಿತು. ಬಳಿಕ ವಿವಿಪ್ಯಾಟ್ ಹಾಗೂ ಇವಿಎಂ ಗಳೊಂದಿಗೆ ಚುನಾವಣಾ ಸಿಬ್ಬಂದಿ ತಮಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳಿದರು.

    ಮಹಿಳಾ ಮತದಾರರೇ ಹೆಚ್ಚಿರುವ ಕ್ಷೇತ್ರ
    ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಮಹಿಳಾ ಮತದಾರರೇ ಹೆಚ್ಚಾಗಿರುವ ಕ್ಷೇತ್ರ ಎನ್ನುವುದು ವಿಶೇಷ. ಈ ಕ್ಷೇತ್ರದಲ್ಲಿ ಒಟ್ಟು 15,85,162 ಮತದಾರರಿದ್ದಾರೆ. ಇವರಲ್ಲಿ ಪುರುಷ ಮತದಾರರ ಸಂಖ್ಯೆ 7,68,215 ಇದ್ದರೆ, ಮಹಿಳಾ ಮತದಾರರ ಸಂಖ್ಯೆ ಬರೋಬ್ಬರಿ 8,16,910 ಇದ್ದಾರೆ. ಇನ್ನುಳಿದಂತೆ ತ್ರಿಲಿಂಗಿ ಮತದಾರರು 37 ಜನರಿದ್ದಾರೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿರುವುದು ವಿಶೇಷವಾಗಿದೆ.

    4500 ಸಿಬ್ಬಂದಿ ನಿಯೋಜನೆ
    ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳು ಹಾಗೂ ಹಾಸನ ಲೋಕಸಭಾ ಕ್ಷೇತ್ರಕ್ಕೊಳಪಡುವ ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾರ್ಯನಿರ್ವಹಿಸಲು ಚಿಕ್ಕಮಗಳೂರು ಜಿಲ್ಲೆಯಲ್ಲಿ 4500 ಸಿಬ್ಬಂದಿ ನಿಯೋಜಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 1229 ಮತಗಟ್ಟೆಗಳಿದ್ದು, ಇಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಮತಗಟ್ಟೆಗೆ ಶೇ. 125ರಂತೆ ವಿದ್ಯುನ್ಮಾನ ಮತಯಂತ್ರ ಮತ್ತು ಶೇ. 115ರಷ್ಟು ವಿವಿ ಪ್ಯಾಟ್ ಗಳನ್ನು ಕಳುಹಿಸಿಕೊಡಲಾಗಿದೆ. ಚುನಾವಣೆ ಆರಂಭಕ್ಕೂ ಮೊದಲೇ ಬೂತ್ ಗಳಲ್ಲಿ ಚುನಾವಣಾ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರಗಳನ್ನು ಅಳವಡಿಸಿ ಜೊತೆಗೆ ಅವುಗಳ ಪರೀಕ್ಷೆ ನಡೆಸಿ ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಡಲಿದ್ದಾರೆ.

    ಬಿಗಿ ಬಂದೋಬಸ್ತ್
    ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚುನಾವಣಾ ಭದ್ರತೆಗಾಗಿ 2,000ಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು ಇನ್ನೂ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರ ಮೀಸಲು ಪಡೆ ಹಾಗೂ ಕೇಂದ್ರ ಮಹಿಳಾ ಮೀಸಲಾಪಡೆಯ ಸಿಬ್ಬಂದಿ ನಿಯೋಜಿಸಲಾಗಿದೆ.
    ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಕೇಂದ್ರ ಮೀಸಲು ಪಡೆಯ ಎರಡು ತಂಡ ಹಾಗೂ ಕೇಂದ್ರ ಮಹಿಳಾ ಮೀಸಲು ಪಡೆಯ ಒಂದು ತಂಡ ಜೊತೆಗೆ 8 ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಅಗತ್ಯವಿರುವ ಕಡೆ ಹೋಂ ಗಾರ್ಡ್ ನಿಯೋಜನೆ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts