More

    ಪೂನಾದಿಂದ ಕಾಲ್ನಡಿಗೆ ಪಯಣ – ಬೆಂಚಲದೊಡ್ಡಿ ತಾಂಡಾದ ಕೂಲಿಕಾರರ ಅಳಲು

    ಲಿಂಗಸುಗೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಬಂದ್ ಆಗಿದ್ದು, ಮಹಾರಾಷ್ಟ್ರದ ಪೂನಾ ನಗರಕ್ಕೆ ದುಡಿಯಲು ತೆರಳಿದ್ದ ತಾಲೂಕಿನ ಬೆಂಚಲದೊಡ್ಡಿ ತಾಂಡಾದ ಕೂಲಿಕಾರರು ಕಾಲ್ನಡಿಗೆಯಲ್ಲಿ ಮಕ್ಕಳು, ಮಹಿಳೆಯರೊಂದಿಗೆ ಗ್ರಾಮಕ್ಕೆ ಹಿಂದಿರುಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಗರ ಪ್ರದೇಶಗಳಿಗೆ ಗುಳೆ ಹೋದ ತಾಲೂಕಿನ ನಾನಾ ಗ್ರಾಮ, ತಾಂಡಾ, ದೊಡ್ಡಿಗಳ ಜನತೆ ಮರಳಿ ತವರಿಗೆ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇವರಂತೆಯೇ ತಾಲೂಕಿನ ಬೆಂಚಲದೊಡ್ಡಿ ತಾಂಡಾದ ಬಂಜಾರ ಸಮುದಾಯದ ಮಹಿಳೆಯರು, ಮಕ್ಕಳು ಸೇರಿ 60 ಜನರ ತಂಡ ಪೂನಾ ನಗರದಿಂದ ಲಿಂಗಸುಗೂರಿನತ್ತ ಪ್ರಯಾಣ ಬೆಳೆಸಿದ್ದು, ಈಗಾಗಲೇ ಸೊಲ್ಲಾಪುರ ಸಮೀಪದಲ್ಲಿರುವುದಾಗಿ ತಿಳಿದು ಬಂದಿದೆ.

    ಮಹಾರಾಷ್ಟ್ರದಲ್ಲಿ ಕರೊನಾ ವೈರಸ್ ಸೋಂಕು ಪೀಡಿತ ಶಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಿನ ವ್ಯಾಪಾರೋದ್ಯಮ ಸಂಪೂರ್ಣ ಬಂದ್ ಆಗಿದ್ದರಿಂದ ದುಡಿಯಲು ತೆರಳಿದ ತಾಂಡಾದ ಜನತೆ ಊರು ಸೇರಬೇಕಾಗಿದೆ. ಆದರೆ ಸಾರಿಗೆ ವ್ಯವಸ್ಥೆ ಸ್ಥಗಿತವಾಗಿದ್ದರಿಂದ ಅನಿವಾರ್ಯವಾಗಿ ಗಂಟು ಮೂಟೆ ಹೊತ್ತು 250 ಕಿಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದು, ಇನ್ನೂ 450 ಕಿಮೀ. ಸಂಚರಿಸಬೇಕಾಗಿದೆ. ಮಾರ್ಗಮಧ್ಯ ಮಾರುಕಟ್ಟೆ ಬಂದ್ ಆಗಿದ್ದರಿಂದ ಊಟ, ಕುಡಿಯುವ ನೀರಿಗೂ ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ನಮಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಸ್ವಗ್ರಾಮಕ್ಕೆ ಕರೆತರುವಂತೆ ಜೆಡಿಎಸ್ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಸಿದ್ದುಬಂಡಿಗೆ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.

    ನಡೆದು ಬರುತ್ತಿರುವವರ ಜತೆ ನಿರಂತರ ಸಂಪರ್ಕದಲ್ಲಿರುವೆ. ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಿ, ಸ್ವಗ್ರಾಮಕ್ಕೆ ಕರೆ ತರುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ ಎಂದು ಸಿದ್ದುಬಂಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts