More

    ಹದಗೆಟ್ಟ ಮುಖ್ಯರಸ್ತೆಗಿಲ್ಲ ಮುಕ್ತಿ

    ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯ ಕೋಟ್ಯಂತರ ರೂ. ಅವಶ್ಯಕತೆ ಇಲ್ಲದಿದ್ದರೂ ಕಾಮಗಾರಿ ನಡೆಸಿ ಹಣ ಖರ್ಚಾಗಬೇಕೆಂದು ವ್ಯಯ ಮಾಡುತ್ತಿದ್ದು, ತುರ್ತು ಅವಶ್ಯಕತೆ ಇರುವಲ್ಲಿ ಕೆಲಸ ಮಾಡುತ್ತಿಲ್ಲ ಎನ್ನುವುದಕ್ಕೆ ಕಳೆದ ಎರಡು ವರ್ಷಗಳಿಂದ ಹದಗೆಟ್ಟು ಹೋಗಿರುವ ಪಂಪ್‌ವೆಲ್-ಕಂಕನಾಡಿ ಮುಖ್ಯ ರಸ್ತೆಯೇ ಸಾಕ್ಷಿ.
    ಬೆಂಗಳೂರು, ಮೈಸೂರು, ಕೇರಳ ಕಡೆಗಳಿಂದ ಬರುವ ವಾಹನಗಳು ಪಂಪ್‌ವೆಲ್-ಕಂಕನಾಡಿ ಮೂಲಕ ನಗರದೊಳಗೆ ಪ್ರವೇಶಿಸುತ್ತವೆ. ತಾಸಿಗೆ ಸಾವಿರಾರು ವಾಹನಗಳು ಸಂಚರಿಸುವ ನಗರದ ಪ್ರಮುಖ ರಸ್ತೆ ಕಳೆದ ಎರಡು ವರ್ಷಗಳಿಂದ ಗುಂಡಿಗಳಿಂದ ಕೂಡಿದ್ದರೂ, ತಾತ್ಕಾಲಿಕ ತೇಪೆ ಹಾಕಿಯೂ ಸರಿಪಡಿಸದೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಎರಡು ವರ್ಷದ ಹಿಂದೆ ಒಳಚರಂಡಿ ಕಾಮಗಾರಿ ನಿರ್ವಹಿಸುವಾಗ ರಸ್ತೆಯ ಮಧ್ಯ ಭಾಗವನ್ನು ಅಗೆಯಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಅಗೆದ ಮಣ್ಣು ಹಾಕಿ ಮುಚ್ಚಲಾಗಿದೆ. ವಾಹನಗಳು ಹೋಗುವಾಗ ಮಣ್ಣು ಎದ್ದು ಹೋಗಿದ್ದು, ಬಳಿಕ ಜಲ್ಲಿ ಹಾಕಲಾಗಿತ್ತು. ನಿರಂತರ ವಾಹನಗಳು ಸಂಚರಿಸುತ್ತಿರುವುದರಿಂದ ಆ ಜಲ್ಲಿಗಳು ಎದ್ದು ಹೋಗಿವೆ.

    ಅಪಾಯಕ್ಕೆ ಆಹ್ವಾನ: ಈ ರಸ್ತೆಯಲ್ಲಿ ಈಗಾಗಲೇ ಹಲವಾರು ಅಪಘಾತಗಳು ಸಂಭವಿಸಿವೆ. ದ್ವಿಚಕ್ರ ವಾಹನಗಳಿಗೆ ಈ ರಸ್ತೆ ಅಪಾಯಕಾರಿ. ವಾಹನಗಳು ಹೋಗುವಾಗ ರಸ್ತೆಯಲ್ಲಿ ಎದ್ದು ನಿಂತಿರುವ ಜಲ್ಲಿ ಕಲ್ಲುಗಳು ಚಕ್ರಗಳಿಗೆ ಸಿಲುಕಿ ಎಸೆಯಲ್ಪಡುತ್ತಿದ್ದು, ಇದರಿಂದ ಪಾದಚಾರಿಗಳಿಗೆ ಗಂಭೀರ ಸ್ವರೂಪದ ಗಾಯವಾಗುತ್ತಿದೆ.
    ವಾಹನ ದಟ್ಟಣೆ: ಎರಡು ರಾಷ್ಟ್ರೀಯ ಹೆದ್ದಾರಿಗಳಿಂದ ಬಂದ ವಾಹನಗಳು ಇದೇ ರಸ್ತೆಯಲ್ಲಿ ನಗರದೊಳಗೆ ಪ್ರವೇಶಿಸುತ್ತವೆ.ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ವಾಹನ ದಟ್ಟಣೆ ಉಂಟಾಗುತ್ತದೆ. ಪಂಪ್‌ವೆಲ್‌ನಿಂದ ಅಂಬೇಡ್ಕರ್ ವೃತ್ತಕ್ಕೆ ತಲುಪಲು ಕೆಲವೊಮ್ಮೆ ಅರ್ಧ, ಮುಕ್ಕಾಲು ತಾಸು ತೆಗೆದುಕೊಳ್ಳುತ್ತದೆ.

    ಪಂಪ್‌ವೆಲ್-ಕಂಕನಾಡಿ ರಸ್ತೆ ಸಮಸ್ಯೆ ಗಮನಕ್ಕೆ ಬಂದಿದೆ. ಪ್ರತಿದಿನ ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ರಸ್ತೆ ವಿಸ್ತರಣೆ ಕಾಮಗಾರಿ ನಡೆಯಲಿರುವುದರಿಂದ ಡಾಂಬರು ಕಾಮಗಾರಿ ನಡೆಸದೆ ಪೆಂಡಿಂಗ್ ಇಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗುವ ಕಾರಣದಿಂದ ಈ ರಸ್ತೆಗೆ ತಾತ್ಕಾಲಿಕ ತೇಪೆ ಹಾಕಲಾಗುವುದು.
    ಕಾವ್ಯಾ ನಟರಾಜ್ ಆಳ್ವ, ಮನಪಾ ಸದಸ್ಯೆ, ಶಿವಭಾಗ್

    ಪಂಪ್‌ವೆಲ್‌ನಿಂದ ಕಂಕನಾಡಿಗೆ ಬರುವ ರಸ್ತೆಯನ್ನು ಕೆಲವು ತಿಂಗಳ ಹಿಂದೆ ಒಳಚರಂಡಿಗೆ ಅಗೆದ ಸ್ಥಳದಲ್ಲಿ ಡಾಂಬರು ಹಾಕಿ ರಿಪೇರಿ ಮಾಡದೆ ಹಾಗೆಯೇ ಮಣ್ಣಿನಿಂದ ಮುಚ್ಚಿರುವುದರಿಂದ ಈಗ ಆ ಮಣ್ಣು ಎದ್ದು ಹೋಗಿ ಗುಂಡಿಯಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರ ವರ್ಗ ತಕ್ಷಣ ಸ್ಪಂದಿಸಿ ಆದಷ್ಟು ಶೀಘ್ರ ಅದನ್ನು ಸರಿಪಡಿಸಿ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು.
    ಕೆ.ಪಾಂಡುರಂಗ ಕುಕ್ಯಾನ್ ಕೋಡಿಕಲ್, ಸಾರ್ವಜನಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts