More

    ಮಾ.3ರಂದು ಪಲ್ಸ್ ಪೋಲಿಯೋ ಅಭಿಯಾನ

    ಎನ್.ಆರ್.ಪುರ: ತಾಲೂಕಿನಲ್ಲಿ ಮಾ.3ರಂದು ಒಂದರಿಂದ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲು 96 ಬೂತ್‌ಗಳನ್ನು ಸ್ಥಾಪಿಸಲಾಗುವುದು ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ವಿಜಯಕುಮಾರ್ ತಿಳಿಸಿದರು.

    ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಹಾಗೂ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ದೇಶ ಪೋಲಿಯೋಮುಕ್ತ ಆಗಿದ್ದರಿಂದ ಕಳೆದ ವರ್ಷ ಅಭಿಯಾನ ಆಯೋಜಿಸಿರಲಿಲ್ಲ. ಆದರೆ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮರು ಚಾಲನೆ ನೀಡಿದೆ ಎಂದರು.
    ಮಾ.3ರಂದೇ ಶೇ.95ರಷ್ಟು ಗುರಿ ಸಾಧಿಸುವ ಉದ್ದೇಶವಿದೆ. ತಾಲೂಕಿನಲ್ಲಿ ಒಟ್ಟು 4414 ಮಕ್ಕಳಿವೆ. ಶೇ.100ರಷ್ಟು ಪ್ರಗತಿ ಸಾಧಿಸಲು ಶ್ರಮಿಸಲಾಗುವುದು. ಮಾ.4 ಮತ್ತು 5ರಂದು ಮನೆ ಮನೆಗೆ ಭೇಟಿ ನೀಡಿ ಹನಿ ಹಾಕಲಾಗುವುದು. ಕಾರ್ಯಕ್ರಮಕ್ಕೆ 22 ವಾಹನಗಳ ಅಗತ್ಯವಿದೆ. ಎಲ್ಲ ಇಲಾಖೆಗಳ ವಾಹನಗಳನ್ನು ಒದಗಿಸಲು ತಹಸೀಲ್ದಾರ್ ಅವರಿಂದ ಆದೇಶ ನೀಡಲಾಗುವುದು. ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
    ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಅಬ್ರಾಹಂ ಮಾತನಾಡಿ, ಬಸ್ ನಿಲ್ದಾಣದ ಆವರಣದಲ್ಲಿರುವ ಪಲ್ಸ್ ಪೋಲಿಯೋ ಬೂತ್ ಅನ್ನು ನಾವೇ ನಿರ್ವಹಣೆ ಮಾಡುತ್ತೇವೆ ಹಾಗೂ ಸಿಬ್ಬಂದಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಅಂದಿನ ಖರ್ಚನ್ನು ಸಂಸ್ಥೆಯೇ ಭರಿಸುತ್ತದೆ ಎಂದರು.
    ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಗೌಸ್ ಮೊಹಿಯುದ್ದೀನ್ ಮಾತನಾಡಿ, ಬಿಸಿಲಿನ ಪ್ರಖರತೆ ಹೆಚ್ಚಾಗಿರುವುದರಿಂದ ಕಾಡ್ಗಿಚ್ಚು ತಗುಲುವ ಸಾಧ್ಯತೆ ಅಧಿಕ. ಆನೆಗಳ ಹಾವಳಿಯೂ ಹೆಚ್ಚಾಗುತ್ತಿರುವುದರಿಂದ ನಮ್ಮ ಇಲಾಖೆ ವಾಹನಗಳಿಗೆ ಪಲ್ಸ್ ಪೋಲಿಯೋ ಅಭಿಯಾನದಿಂದ ರಿಯಾಯಿತಿ ನೀಡಬೇಕೆಂದು ಮನವಿ ಮಾಡಿದರು.
    ಜ್ವರ ಬಂದರೆ ಸ್ವಯಂ ಚಿಕಿತ್ಸೆ ಬೇಡ: ಮಂಗನ ಕಾಯಿಲೆ ಪ್ರಕರಣಗಳೂ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಕಾಡಿಗೆ ಹೋಗಬಾರದು. ಕಾಡಿಗೆ ಹೋಗುವವರು ಪೂರ್ಣ ಪ್ರಮಾಣದ ಬಟ್ಟೆ ಧರಿಸಬೇಕು ಎಂದು ಕಟ್ಟಿನಮನೆ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್ ಸಲಹೆ ನೀಡಿದರು. ಅತಿಸಾರ ಬೇಧಿ, ಜ್ವರ, ಮೈ-ಕೈ ನೋವು, ಕಣ್ಣು ಕೆಂಪಾಗುವುದು, ವಸಡು ಹಾಗೂ ಮೂಗಿನಲ್ಲಿ ರಕ್ತಸ್ರಾವ ಈ ರೋಗದ ಲಕ್ಷಣ. ಕಾಡಿಗೆ ಹೋಗುವಾಗ ಡಿಇಇಪಿಎ ತೈಲವನ್ನು ಮೈ-ಕೈಗೆ ಹಚ್ಚಿಕೊಂಡು ಹೋಗಬೇಕು ಎಂದರು. ಮಂಗನ ಕಾಯಿಲೆ ಸಾಂಕ್ರಾಮಿಕವಲ್ಲ. ಉಣುಗು ಕಚ್ಚುವುದರಿಂದ ಈ ಕಾಯಿಲೆ ಹರಡುತ್ತದೆ. ತಾಲೂಕಿನಲ್ಲಿ 4 ಕೆಎಫ್‌ಡಿ ಪ್ರಕರಣಗಳು ಪತ್ತೆಯಾಗಿವೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿದ್ದು, ಮೂವರು ಚೇತರಿಸಿಕೊಂಡಿದ್ದಾರೆ. ಒಬ್ಬರು ಆಸ್ಪತ್ರೆಯಲ್ಲಿದ್ದಾರೆ. ಜ್ವರ ಬಂದರೆ ತಾವೇ ಸ್ವತಃ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು, ವೈದ್ಯರ ಬಳಿ ಬಂದು ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
    ತಹಸೀಲ್ದಾರ್ ತನುಜಾ ಟಿ. ಸವದತ್ತಿ, ವೈದ್ಯ ಡಾ. ಭರತ್, ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಶ್, ರೋಟರಿ ಸಂಸ್ಥೆ ಅಧ್ಯಕ್ಷ ಕಿರಣ್, ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ಪೂರ್ಣೇಶ್, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಕ ದರ್ಶನ್, ಪವನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts