More

    ಭೌತಿಕ ತರಗತಿ ಆರಂಭಕ್ಕೆ ಮುನ್ನುಡಿ, ಉಡುಪಿಯಲ್ಲಿ 9ರಿಂದ 12, ದ.ಕ.ದಲ್ಲಿ ದ್ವಿತೀಯ ಪಿಯು ಮಾತ್ರ

    ಮಂಗಳೂರು/ಉಡುಪಿ: ಹಲವು ತಿಂಗಳುಗಳ ಬಳಿಕ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭೌತಿಕ ತರಗತಿಗಳಿಗೆ ಬುಧವಾರ ಚಾಲನೆ ಸಿಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿತೀಯ ಪಿಯು ಹಾಗೂ ಉಡುಪಿ ಜಿಲ್ಲೆಯಲ್ಲಿ 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ಭೌತಿಕ ತರಗತಿಗಳು ಬುಧವಾರ ಆರಂಭಗೊಳ್ಳುತ್ತಿವೆ.

    ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಈ ಹಿಂದೆಯೇ ಪಿಯು ತರಗತಿಗಳು ಆರಂಭವಾಗಿವೆ. ಸರಾಸರಿ ಪಾಸಿಟಿವಿಟಿ ದರ ಶೇ.2ಕ್ಕಿಂತ ಅಧಿಕ ಇದ್ದ ಕಾರಣ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ದ್ವಿತೀಯ ಪಿಯು ಭೌತಿಕ ತರಗತಿ ವಿಳಂಬವಾಗಿತ್ತು.

    ದ.ಕ. ಜಿಲ್ಲಾಧಿಕಾರಿ ಹೊರಡಿಸಿದ ಮಾರ್ಗಸೂಚಿ ಪ್ರಕಾರ ತರಗತಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಈಗಾಗಲೇ ಎಲ್ಲ ಕಾಲೇಜು ಪ್ರಾಂಶುಪಾಲರಿಗೆ ನಿರ್ದೇಶಿಸಲಾಗಿದೆ ಎಂದು ಪದವಿಪೂರ್ವ ಕಾಲೇಜು ಉಪ ನಿರ್ದೇಶಕ ಜಯಣ್ಣ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ದ.ಕ. ಜಿಲ್ಲೆಯಲ್ಲಿ 53 ಸರ್ಕಾರಿ, 31 ಅನುದಾನಿತ, 2 ಬಿಸಿಎಂ, ಅನುದಾನ ರಹಿತ 103 ಪಿಯು ಕಾಲೇಜುಗಳು ಹಾಗೂ 12 ಪಿಯು ಇರುವ ಪದವಿ ಕಾಲೇಜುಗಳಿವೆ. ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಪಿಯು ಕಾಲೇಜು 45, ಅನುದಾನ ರಹಿತ, ಖಾಸಗಿ ಕಾಲೇಜುಗಳು 60 ಸಹಿತ ಒಟ್ಟು 105 ಕಾಲೇಜುಗಳಿವೆ.

    ಉನ್ನತ ಶಿಕ್ಷಣ ಪಡೆಯಲು ದ್ವಿತೀಯ ಪಿಯು ಅಂಕಗಳು ಮಾನದಂಡವಾಗಿವೆ. ನೀಟ್, ಜೆಇಇ, ಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೂಡ ಪಿಯು ಅಂಕಗಳು ಮುಖ್ಯ. ಕಳೆದ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ನಡೆದಿಲ್ಲ. 2021-22ನೇ ಸಾಲಿನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಮೌಲ್ಯಾಂಕ ನಡೆಸಬೇಕಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಭೌತಿಕ ತರಗತಿಯನ್ನು ಪಾಳಿಯಲ್ಲಿ ಶೇ.50 ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ಆರಂಭಿಸಲು ಅವಕಾಶ ನೀಡಲಾಗಿದೆ. ಲಾಕ್‌ಡೌನ್ ಬಳಿಕ ಕಳೆದ ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿ ದ್ವಿತೀಯ ಪಿಯು ಭೌತಿಕ ತರಗತಿಗಳು ಆರಂಭಿಸಲಾಗಿತ್ತು. ಮತ್ತೆ ಕೋವಿಡ್ ಸೋಂಕು ಪ್ರಮಾಣ ಅಧಿಕಗೊಂಡ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಭೌತಿಕ ತರಗತಿ ಸ್ಥಗಿತಗೊಳಿಸಲಾಗಿತ್ತು.

    ಇತರ ತರಗತಿ ತೀರ್ಮಾನ ಬಾಕಿ: ಸೆ.6ರಿಂದ 6ರಿಂದ 8ನೇ ತರಗತಿವರೆಗೆ ಶಾಲೆ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ, ಇದು ದ.ಕ. ಜಿಲ್ಲೆಗೆ ಅನ್ವಯಿಸುವುದಿಲ್ಲ. ಜಿಲ್ಲೆಯಲ್ಲಿ 6ರಿಂದ 8ನೇ ತರಗತಿ ತನಕದ ತರಗತಿಗಳನ್ನು ಆರಂಭಿಸುವ ಕುರಿತು ಈವರೆಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ. 9 ಮತ್ತು 10ನೇ ತರಗತಿ ಕೂಡ ಸದ್ಯ ಆರಂಭವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಮಾಲೋಚನೆ ನಡೆಸಿ ಪರಿಸ್ಥಿತಿ ಅವಲೋಕಿಸಿ ಜಿಲ್ಲಾಧಿಕಾರಿ ತೀರ್ಮಾನ ಪ್ರಕಟಿಸಬಹುದು ಎಂದು ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಮಲ್ಲೇಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

    ಉಡುಪಿಯಲ್ಲೂ ಶಾಲೆಗಳೂ ಆರಂಭ: ಕೋವಿಡ್ ಪಾಸಿಟಿವಿಟಿ ದರ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ 9 ಮತ್ತು ಹತ್ತನೇ ತರಗತಿ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ತರಗತಿಗಳು ಬುಧವಾರ ಆರಂಭವಾಗುತ್ತವೆ.

    ಪಿಯುಸಿ ವಿದ್ಯಾರ್ಥಿಗಳಿಗೆ ದಿನಕ್ಕೆ 5 ಗಂಟೆ ಅವಧಿಯಲ್ಲಿ ತರಗತಿಗಳು ನಡೆಯಲಿವೆ. ಪಿಯುಸಿಯಲ್ಲಿ ಒಂದು ತರಗತಿಯಲ್ಲಿ 100 ವಿದ್ಯಾರ್ಥಿಗಳಿಗಿಂತ ಹೆಚ್ಚು ವಿದ್ಯಾರ್ಥಿಗಳಿದ್ದಲ್ಲಿ ಶೇ.50 ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನದಂತೆ ತರಗತಿ ನಡೆಸಲು ಮತ್ತು ಮನೆಯಲ್ಲಿರುವ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪಾಠ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಡಿಡಿಪಿಯು ಮಾರುತಿ ತಿಳಿಸಿದ್ದಾರೆ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಎಂದಿನ ಸಮಯದಂತೆ ತರಗತಿಗಳು ಆರಂಭಗೊಂಡು ತರಗತಿಗಳು ನಡೆಯಲಿವೆ. ಆಹಾರ ಮತ್ತು ನೀರು ಮನೆಯಿಂದಲೆ ತರುವಂತೆ ವಿದ್ಯಾರ್ಥಿಗಳಿಗೆ ಹೇಳಲಾಗಿದೆ. ವ್ಯವಸ್ಥಿತ ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ಅಧಿಕಾರಿಗಳು, ಶಿಕ್ಷಕರು, ಖಾಸಗಿ ಶಾಲಾ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಎಸ್. ನಾಗೂರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts