More

    8ನೇ ಸ್ಥಾನ ಕಾಯ್ದುಕೊಂಡ ಶಿವಮೊಗ್ಗ ಜಿಲ್ಲೆ

    ಶಿವಮೊಗ್ಗ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಗೆ ಶೇ.88.58 ಫಲಿತಾಂಶ ಲಭಿಸಿದೆ. ರಾಜ್ಯದಲ್ಲಿ 8ನೇ ಸ್ಥಾನ ಪಡೆದಿರುವ ಜಿಲ್ಲೆಗೆ ಮೂವರು ವಿದ್ಯಾರ್ಥಿಗಳು ರ‌್ಯಾಂಕ್ ಪಡೆಯುವ ಮೂಲಕ ಹಿರಿಮೆ ಹೆಚ್ಚಿಸಿದ್ದಾರೆ. ಸಾಧನೆ ಮಾಡಿರುವ ಮೂವರು ವಿದ್ಯಾರ್ಥಿಗಳೂ ಮಧ್ಯಮ ವರ್ಗದಿಂದ ಬಂದವರು ಎಂಬುದು ಇನ್ನೊಂದು ವಿಶೇಷ.

    ವಾಣಿಜ್ಯ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ರ‌್ಯಾಂಕ್ ಪಡೆದಿರುವ ಎಂ.ಎಸ್.ಪವನ್ ತಂದೆ ಮಂಜುನಾಥ್ ಕುಮದ್ವತಿ ಬಿ.ಇಡಿ ಕಾಲೇಜಿನಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಅನಿತಾ ಗೃಹಿಣಿ. ಪವನ್ ಯಾವುದೇ ತರಬೇತಿ ಪಡೆಯದೇ ಸ್ವಂತ ಪರಿಶ್ರಮದಿಂದ ಈ ಸಾಧನೆ ಮಾಡಿರುವುದು ಎಲ್ಲರ ಗಮನಸೆಳೆದಿದೆ.
    ವಿಜ್ಞಾನ ವಿಭಾಗದಲ್ಲಿ 595 ಅಂಕದೊಂದಿಗೆ ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆದ ಶಿವಮೊಗ್ಗದ ಪೇಸ್ ಪಿಯು ಕಾಲೇಜಿನ ವಿದ್ಯಾರ್ಥಿ ಕೆ.ವೈ.ಸಾತ್ವಿಕ್ ಮೂಲತಃ ಹೊಸನಗರ ತಾಲೂಕು ಕೋಡೂರು ಗ್ರಾಮದವರು. ತಂದೆ ಯೋಗೇಶ್ ಕೃಷಿಕರು, ತಾಯಿ ಅಪರ್ಣಾ ಗೃಹಿಣಿ. ಅಪ್ಪಟ ಗ್ರಾಮೀಣ ಪ್ರತಿಭೆಯ ಮುಡಿಗೆ ರ‌್ಯಾಂಕ್ ಗರಿ ಲಭಿಸಿದೆ.
    ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್, ವಕೀಲೆ ಎಚ್.ಎಂ.ಪೂರ್ಣಿಮಾ ಅವರ ಪುತ್ರಿ ಕೆ.ಸಿ.ಚುಕ್ಕಿ ಡಿವಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ. ಈಕೆ 593 ಅಂಕ ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆದಿದ್ದಾಳೆ. ಎಂ.ಎಸ್.ಪವನ್, ಕೆ.ವೈ.ಸಾತ್ವಿಕ್ ಹಾಗೂ ಕೆ.ಸಿ.ಚುಕ್ಕಿ ಜಿಲ್ಲೆಗೆ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ.
    2023ರಲ್ಲೂ 8ನೇ ಸ್ಥಾನದಲ್ಲಿದ್ದ ಜಿಲ್ಲೆಗೆ ಶೇ.83.13 ಫಲಿತಾಂಶ ಲಭಿಸಿತ್ತು. 2022ರಲ್ಲಿ ಶೇ.70.13 ಫಲಿತಾಂಶ ಲಭಿಸಿತ್ತು. ಕಳೆದ ಮೂರು ವರ್ಷಗಳಿಂದ ಫಲಿತಾಂಶದಲ್ಲಿ ಏರಿಕೆಯಾಗುತ್ತಿರುವುದು ಸಮಾಧಾನದ ಸಂಗತಿಯಾಗಿದೆ. ಈ ವರ್ಷ ಜಿಲ್ಲೆಯ 36 ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ 18,970 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವ ಅರ್ಹತೆ ಪಡೆದಿದ್ದರು. ಈ ಪೈಕಿ 16,711 ರೆಗ್ಯುಲರ್ ವಿದ್ಯಾರ್ಥಿಗಳು, 1,451 ರಿಪೀಟರ್ ಮತ್ತು 808 ಖಾಸಗಿ ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts