More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ್ರೂ ಫಲಿತಾಂಶ ಬಾರದೇ ಆತಂಕಗೊಂಡಿದ್ದ ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​!

    ಕಾರವಾರ: ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದರೂ ಎಲ್ಲರ ಜತೆಗೆ ಫಲಿತಾಂಶ ಬಾರದ ಕಾರಣ ಆತಂಕಗೊಂಡಿದ್ದ ಕಾರವಾರದ ಕೆಲ ವಿದ್ಯಾರ್ಥಿಗಳಿಗೆ ಈಗ ಸಮಾಧಾನವಾಗಿದೆ. ಎಸ್​ಎಸ್​ಎಲ್​ಸಿ ಪರೀಕ್ಷಾ ಮಂಡಳಿ ಜಿಲ್ಲೆಯ 140 ವಿದ್ಯಾರ್ಥಿಗಳ ಫಲಿತಾಂಶವನ್ನು ಸರಿಪಡಿಸಿ ಬಿಡುಗಡೆ ಮಾಡಿದೆ.

    ಉಳಗಾದ ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಬಾಳ್ನಿ, ಕೆರವಡಿ, ಹಳಗಾ ಪ್ರೌಢಶಾಲೆಗಳ 140 ವಿದ್ಯಾರ್ಥಿಗಳಲ್ಲಿ ಕೆಲವರು ಇಂಗ್ಲಿಷ್, ವಿಜ್ಞಾನ ಹಾಗೂ ಹಿಂದಿ ವಿಷಯದಲ್ಲಿ ಗೈರಾಗಿದ್ದಾರೆ ಎಂದು ಫಲಿತಾಂಶ ಈ ಹಿಂದೆ ಪ್ರಕಟವಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಜೊಯಿಡಾ ಭಾಗದ ಬುಡಕಟ್ಟು ಜನಾಂಗದವರಾಗಿದ್ದರು. ವಿದ್ಯಾರ್ಥಿಗಳ ಆಕ್ಷೇಪಣೆಯ ಮೇರೆಗೆ ಡಿಡಿಪಿಐ ಹರೀಶ ಗಾಂವಕರ್ ಪರೀಕ್ಷಾ ಮಂಡಳಿಗೆ ಪತ್ರ ಬರೆದಿದ್ದರು. ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರೂ ಈ ಸಂಬಂಧ ಪತ್ರ ಬರೆದಿದ್ದರು.

    ಹಳಗಾದ ಮಾಡರ್ನ್ ಸ್ಕೂಲ್ ಶೇ. 76 ರಷ್ಟು ಫಲಿತಾಂಶ ಪಡೆದುಕೊಂಡಿದೆ. 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ 17 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ತನ್ವಿ ದಿನಕರ ತಳೇಕರ್ ಶೇ. 88 ರಷ್ಟು ಅಂಕ ಪಡೆದು ಶಾಲೆಗೆ ಮೊದಲ ಸ್ಥಾನ ಪಡೆದಿದ್ದಾಳೆ. ಪ್ರಥಮ ಭಾಷೆ ಕನ್ನಡಕ್ಕೆ 125 ಕ್ಕೆ 125 ಅಂಕ ಪಡೆದಿದ್ದಾಳೆ. ಪ್ರಣಾಲಿ ಮಿರಾಶಿ ಶೇ. 82.41, ಮೇಘಾ ಮಿರಾಶಿ ಶೇ. 81.61 ರಷ್ಟು ಮೊದಲೆರಡು ಸ್ಥಾನ ಪಡೆದಿದ್ದಾರೆ.

    ಪ್ರಮಾಣಪತ್ರಕ್ಕೆ ನೂಕು ನುಗ್ಗಲು: ಎಸ್​ಎಸ್​ಎಲ್​ಸಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಈಗ ಪಿಯು, ಡಿಪ್ಲೊಮಾ, ಐಟಿಐ ದಾಖಲಾತಿಗೆ ವಿದ್ಯಾರ್ಥಿಗಳು, ಪಾಲಕರ ಸರತಿ ಕಂಡುಬರುತ್ತಿದೆ. ತಹಸೀಲ್ದಾರ್ ಕಚೇರಿ, ಬಾಪೂಜಿ ಕೇಂದ್ರಗಳ ಎದುರು ಜನ ಸಾಮಾಜಿಕ ಅಂತರ ಮರೆತು, ರಹವಾಸಿ ಪ್ರಮಾಣಪತ್ರ, ಜಾತಿ, ಆದಾಯ ಪ್ರಮಾಣಪತ್ರ ಪಡೆಯಲು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಅಧ್ಯಯನ ಪ್ರಮಾಣಪತ್ರಕ್ಕೆ ಬಿಇಒ ಅವರ ಸಹಿ ಪಡೆಯಲು ಕಾರವಾರ ಬಿಇಒ ಕಚೇರಿಯ ಎದುರು ಮಂಗಳವಾರ ಪಾಲಕರು, ವಿದ್ಯಾರ್ಥಿಗಳ ನೂಕು ನುಗ್ಗಲು ಇತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts