More

    ಬಾಳೆಲೆಯಲ್ಲಿ ಸಾರ್ವಜನಿಕರ ಮೆರವಣಿಗೆ

    ಗೋಣಿಕೊಪ್ಪ: ವಿದ್ಯುತ್ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಸಾರ್ವಜನಿಕರು ಬಾಳೆಲೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
    ಶ್ರೀರಾಮ ವೃತ್ತದಿಂದ ಸೆಸ್ಕ್ ಕಚೇರಿಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಸೆಸ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಬೇಜವಾಬ್ದಾರಿಯಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಸಮಸ್ಯೆಗೆ ಜೆಇ ಮನು ಅವರೇ ಕಾರಣ ಎಂದು ಆರೋಪಿಸಿದರು.
    ಪೊನ್ನಂಪೇಟೆ ಕೆಪಿಟಿಸಿಎಲ್ ಘಟಕದಿಂದ ಬಾಳೆಲೆ ಮಾರ್ಗಕ್ಕೆ ಅಳವಡಿಸಿರುವ 11 ಕೆವಿ ವಿದ್ಯುತ್ ಕೇಬಲ್ ಕಳಪೆಯಿಂದ ಕೂಡಿದೆ. 1.25 ಕೋಟಿ ರೂ. ಅನುದಾನದ ಈ ಯೋಜನೆ ಕಳಪೆಯಾಗಿರುವುದರಿಂದ ಬಾಳೆಲೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಲು ಆಗುತ್ತಿಲ್ಲ. ಈ ಯೋಜನೆಯನ್ನು ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

    ಇದೇ ವೇಳೆ ಬಾಳೆಲೆಯಲ್ಲಿ ಅಂಗಡಿ, ಮುಂಗಟ್ಟುಗಳನ್ನು ವರ್ತಕರು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಇದರಿಂದ ಸುಮಾರು 1 ಗಂಟೆ ಬಾಳೆಲೆ ಬಂದ್ ಆಗಿತ್ತು.

    ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರತ್ಯು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಪ್ರಮುಖರಾದ ಅಳಮೇಂಗಡ ಬೋಸ್ ಮಂದಣ್ಣ, ಆದೇಂಗಡ ವಿನು ಉತ್ತಪ್ಪ, ಮಾಚಂಗಡ ರೋಶನ್, ಸುಕೇಶ್, ಮಲ್ಚೀರ ಬೋಸ್, ಚೆರಿಯಪಂಡ ಕೇಸು, ನವೀನ್, ಅಜಯ್, ಬಾಳೆಲೆ, ನಿಟ್ಟೂರು, ಕಾರ್ಮಾಡು, ಸುಳುಗೋಡು, ಪೊನ್ನಪ್ಪಸಂತೆ, ಬಿಳೂರು, ರಾಜಾಪುರ ಭಾಗದ ಕೃಷಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ಇಂದು ಸಭೆ: ವಿದ್ಯುತ್ ಸಮಸ್ಯೆ ಪರಿಹಾರ ಸಂಬಂಧ ಮಂಗಳವಾರ (ಮಾ.3ರಂದು) ಬಾಳೆಲೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಾರ್ವಜನಿಕರ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಬಾಳೆಲೆ ಗ್ರಾಮ ಪಂಚಾಯಿತಿ ಸದಸ್ಯರು, ಸೆಸ್ಕ್ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಜಿಪಂ ಸದಸ್ಯ ಬಾನಂಡ ಪ್ರತ್ಯು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts