More

    ಪಿಯು ಉತ್ತರ ಪತ್ರಿಕೆ ಮೌಲ್ಯಮಾಪನ ಆರಂಭ

    ಬೆಳಗಾವಿ: ನಗರದ ಐದು ಕೇಂದ್ರಗಳಲ್ಲಿ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದೆ. 261 ಉಪ ಮುಖ್ಯ ಮೌಲ್ಯಮಾಪಕರನ್ನು ಡಿ-ಕೋಡಿಂಗ್ ಕೆಲಸಕ್ಕೆ ನಿಯೋಜಿಸಲಾಗಿತ್ತು. ಈ ಪೈಕಿ 50 ಉಪನ್ಯಾಸಕರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು.

    ಆರಂಭದಲ್ಲಿ ಎರಡು ದಿನಗಳ ಕಾಲ ಉತ್ತರ ಪತ್ರಿಕೆಗಳನ್ನು ಡಿ-ಕೋಡಿಂಗ್ ಮಾಡಲಾಗುತ್ತದೆ. ಶುಕ್ರವಾರದಿಂದ ಅಧಿಕೃತವಾಗಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶುರುವಾಗಲಿದ್ದು, ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ 1,979 ಉಪನ್ಯಾಸಕರು ಸಹಾಯಕ ಮೌಲ್ಯಮಾಪಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳ ಉಪನ್ಯಾಸಕರು ಸೇವೆಗೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಅವರನ್ನು ಮನವೊಲಿಸಿ ಕರೆತರಲು ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ.

    ‘ಜಿಲ್ಲಾಡಳಿತದ ನೆರವಿನೊಂದಿಗೆ ಉಪನ್ಯಾಸಕರಿಗೆ ಸಾರಿಗೆ, ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದೇವೆ. ಹಾಗಾಗಿ ಪ್ರತಿಯೊಬ್ಬರೂ ಸೇವೆಗೆ ಹಾಜರಾಗಬೇಕು. ನಿಗದಿತ ಅವಧಿಯೊಳಗೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕರಿಸಬೇಕು’ ಎಂದು ಬೆಳಗಾವಿ ಡಿಡಿಪಿಯು ರಾಜಶೇಖರ ಪಟ್ಟಣಶೆಟ್ಟಿ ಕೋರಿದ್ದಾರೆ.

    ಸರ್ಕಾರಿ ನಿಯಮಾನುಸಾರ ನಾವು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾಗಿಯಾಗಲು ಸಿದ್ಧರಿದ್ದೇವೆ. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಂದ ಬರುವವರಿಗೆ ಊಟ ಮತ್ತು ವಸತಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಆದ್ಯತೆ ಮೇರೆಗೆ, ಆ ಸಮಸ್ಯೆಯನ್ನು ಬಗೆಹರಿಸಬೇಕು. ಯಾವುದೇ ಗೊಂದಲ ತಲೆದೋರದಂತೆ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು.
    | ರವಿಶಂಕರ ಮಠ, ಪ.ಪೂ. ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ

    ಪ್ರತಿ ಕೇಂದ್ರದಲ್ಲಿ ಉಪನ್ಯಾಸಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯದ ದೃಷ್ಟಿಯಿಂದ ವೈದ್ಯರ ತಂಡ ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
    |ರಾಜಶೇಖರ ಪಟ್ಟಣಶೆಟ್ಟಿ ಡಿಡಿಪಿಯು ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts