More

    ಕರೊನಾ ಚಿಕಿತ್ಸೆಗೆ ನೆರವಾಗಲು ದಾದಿಯರಿಗೆ ವಿಶೇಷ ತರಬೇತಿ ನೀಡಿ

    ಗದಗ: ಸಂಭವನೀಯ ಕರೊನಾ ಸೋಂಕಿನ 3ನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ, ಜಿಲ್ಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಿದಲ್ಲಿ ಚಿಕಿತ್ಸೆಗೆ ನೆರವಾಗಲು ದಾದಿಯರಿಗೆ ವಿಶೇಷ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕರೊನಾ ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಮಕ್ಕಳಿಗೆ ಚಿಕಿತ್ಸೆ ನೀಡುವುದು ಹಾಗೂ ಆರೈಕೆ ಮಾಡುವುದು ಕಷ್ಟಕರ. ತುಂಬಾ ಸೂಕ್ಷ್ಮವಾಗಿ ಸೂಕ್ತ ತರಬೇತಿಯೊಂದಿಗೆ ಚಿಕಿತ್ಸೆ ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ಪರಿಣತರಿಂದ ಮಕ್ಕಳ ಚಿಕಿತ್ಸೆ ಬಗ್ಗೆ ದಾದಿಯರಿಗೆ ತರಬೇತಿ ನೀಡಿ ಅವರನ್ನು ಬಳಸಿಕೊಳ್ಳಬೇಕು. ಅಲ್ಲದೆ, ಆಶಾ, ಎಎನ್​ಎಂಗಳಿಗೂ ಪ್ರತ್ಯೇಕ ತರಬೇತಿ ನೀಡಬೇಕು ಎಂದರು.
    ಈಗಾಗಲೇ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ತಲುಪಿಸಲಾಗಿದೆ. ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡು ಅಗತ್ಯಕ್ಕೆ ತಕ್ಕಂತೆ ಬಳಸಬೇಕು ಎಂದರು.
    ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 270 ಮಕ್ಕಳ ತಂದೆ-ತಾಯಿಗಳಿಗೆ ಕರೊನಾ ಲಸಿಕೆ ಶೀಘ್ರವಾಗಿ ಹಾಕಿಸಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಅಪೌಷ್ಟಿಕ ಮಕ್ಕಳ ಸರ್ವೆ ಕಾರ್ಯ ಪೂರ್ಣಗೊಳಿಸಬೇಕು. ಅಂಗನವಾಡಿ ಸಹಾಯಕಿಯರಿಗೆ ತರಬೇತಿ ಆಯೋಜಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಲೇಜ್ ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ಲಸಿಕೆ ನೀಡಿದ ನಂತರ ಕಾಲೇಜ್ ಆರಂಭಿಸಲು ಸರ್ಕಾರ ತಿಳಿಸಿದೆ. ಅವರಿಗೆ ಲಸಿಕೆ ಕೊಡಿಸುವ ಕಾರ್ಯವನ್ನು ತಹಸೀಲ್ದಾರರು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಅಂದಾಜು 1500 ಗ್ರಾಪಂ ಸದಸ್ಯರು, 250 ಸ್ಥಳೀಯ ಸಂಸ್ಥೆಗಳ ಸದಸ್ಯರಿದ್ದು, ಅವರಿಗೆ ಶೀಘ್ರ ಲಸಿಕೆ ಕೊಡಿಸಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮುಂದಾಗಬೇಕು ಎಂದರು.
    ಕರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾದ ಜಿಲ್ಲೆಯ ಕಾರ್ವಿುಕರಿಗೆ ವಿತರಿಸಲು 40 ಸಾವಿರ ಆಹಾರ ಕಿಟ್​ಗಳು ಬಂದಿದ್ದು, ಅವುಗಳನ್ನು ಅರ್ಹರಿಗೆ ವಿತರಿಸಲು ತಹಸೀಲ್ದಾರರು ಕರೊನಾ ಸೋಂಕಿನ ಮಾರ್ಗಸೂಚಿಗಳ ಪಾಲನೆಯೊಂದಿಗೆ ಹಂಚಿಕೆ ಮಾಡಬೇಕು ಎಂದರು.
    ಈಗಾಗಲೇ ತಾಲೂಕು ಆಸ್ಪತ್ರೆಯಲ್ಲಿನ ಆಕ್ಸಿಜನ್ ವ್ಯವಸ್ಥೆ ಹಾಗೂ ಸಿಲಿಂಡರ್ ಪೂರೈಸುವ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಅಗತ್ಯ ಸಂದರ್ಭದಲ್ಲಿ ವ್ಯತ್ಯಯ ಆಗದಂತೆ ಪೂರೈಸಲು ಕ್ರಮ ವಹಿಸಬೇಕು. ಆರೈಕೆ ಕೇಂದ್ರಗಳಲ್ಲಿ ಸರಿಯಾದ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
    ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಮಾತನಾಡಿ, ಕರೊನಾ ಕಡಿಮೆಯಾಗಿದೆ ಎಂದು ಮಾರ್ಗಸೂಚಿಗಳ ಪಾಲನೆ ಬಿಡಬಾರದು. ನಿರಂತರವಾಗಿ ಮಾಸ್ಕ್ ಧರಿಸಬೇಕು, ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಮೇಲಧಿಕಾರಿಗಳು ಮೇಲುಸ್ತುವಾರಿ ಮಾಡುತ್ತಿರಬೇಕು ಎಂದರು.
    ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶ ಕುಮಾರ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿಎಚ್​ಒ ಡಾ. ಸತೀಶ ಬಸರೀಗಿಡದ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ತಹಸೀಲ್ದಾರ್ ಶ್ರೀನಿವಾಸಮೂರ್ತಿ, ಎಚ್.ಎಸ್. ಜಿನಗಾ, ಡಾ. ಎಸ್.ಎಸ್. ನೀಲಗುಂದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts