More

    ಗೋಡಿಹಾಳ ಗ್ರಾಮಕ್ಕೆ ಬಸ್ ಸೌಲಭ್ಯ ನೀಡಿ – ಬಸ್ ತಡೆದು ವಿದ್ಯಾರ್ಥಿನಿಯರ ಆಕ್ರೋಶ

    ಚಡಚಣ: ಸಮೀಪದ ಗೋಡಿಹಾಳ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರವೇ ನೇತೃತ್ವದಲ್ಲಿ ಗ್ರಾಮದ ವಿದ್ಯಾರ್ಥಿನಿಯರು ಪಟ್ಟಣದಲ್ಲಿ ಸೋಮವಾರ ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

    ಪಟ್ಟಣದ ಸಂಗಮೇಶ್ವರ ಬಾಲಕಿಯರ ಪ್ರೌಢಶಾಲೆಯಲ್ಲಿ 9 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗೋಡಿಹಾಳ ಗ್ರಾಮದ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ವಿವಿಧ ಘೋಷಣೆಗಳನ್ನು ಕೂಗುತ್ತ ಬಸ್ ನಿಲ್ದಾಣಕ್ಕೆ ತೆರಳಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.

    ಕರೊನಾ 1ನೇ ಅಲೆಯ ಲಾಕ್‌ಡೌನ್ ವೇಳೆ ಸ್ಥಗಿತಗೊಂಡಿದ್ದ ಬಸ್‌ಗಳು ಈವರೆಗೂ ಗ್ರಾಮಕ್ಕೆ ಬಂದಿಲ್ಲ. ಇದರಿಂದ ಶಾಲೆ-ಕಾಲೇಜ್‌ಗೆ ಹೋಗಲು ತೊಂದರೆಯಾಗಿದೆ. ಈ ಕುರಿತು ಘಟಕ ವ್ಯವಸ್ಥಾಪಕರಿಗೆ ಸಾಕಷ್ಟು ಸಲ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

    ಕರವೇ ಅಧ್ಯಕ್ಷ ಸುನೀಲ ಕ್ಷತ್ರಿ ಮಾತನಾಡಿ, ಗೋಡಿಹಾಳ ಗ್ರಾಮಕ್ಕೆ ಸರಿಯಾಗಿ ಬಸ್ ಬಿಡುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟುಹಿಡಿದರು.

    ಸ್ಥಳಕ್ಕೆ ಬಿಜೆಪಿ ಮಂಡಲ ಅಧ್ಯಕ್ಷ ರಾಮ ಅವಟಿ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆಯನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಅವರ ಗಮನಕ್ಕೆ ತಂದಾಗ ಕೂಡಲೇ ಅವರು ಸಾರಿಗೆ ನಿಗಮದ ವಿಭಾಗೀಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದರು. ಇನ್ನೆರಡು ದಿನಗಳಲ್ಲಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಿಕೊಡುವುದಾಗಿ ನಿಗಮದ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.

    ಕರವೇ ಸಂಘಟನೆಯ ವಿಠ್ಠಲ ಕ್ಷತ್ರಿ, ರಿಯಾಜ್ ಹಾದಿಮನಿ, ಅನೀಲ ಕಾಂಬಳೆ, ಅಶೋಕ ಕೋಳಿ, ಬಸು ಕೋಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts