More

    ಪುರಸಭೆ ಎದುರು ದಿಢೀರ್ ಪ್ರತಿಭಟನೆ

    ಬ್ಯಾಡಗಿ: ಬಡವರಿಗೆ ನಿವೇಶನ ಹಂಚಿಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಪಟ್ಟಣದ ಪುರಸಭೆ ಎದುರು ಗುರುವಾರ ನೂರಾರು ಬಡವರು ದಿಢೀರ್ ಜಮಾಯಿಸಿ ಪ್ರತಿಭಟನೆ ನಡೆಸಿದರು.

    ಭ್ರಷ್ಟಾಚಾರ ವಿರೋಧಿ ಜನಾಂದೋಲನ ಸಮಿತಿ ನ್ಯಾಸದ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣನವರ ಮಾತನಾಡಿ, 2 ತಿಂಗಳ ಹಿಂದೆ ಬಡವರಿಗೆ ನಿವೇಶನ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಮೂರು ದಿನಗಳ ಕಾಲ ಉಪವಾಸ ಧರಣಿ ನಡೆಸಲಾಗಿತ್ತು. ಆಗ ಉಪವಿಭಾಗಾಧಿಕಾರಿ, ಮುಂದಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ಹಕ್ಕುಪತ್ರ ವಿತರಿಸಲು ಸೂಚಿಸುವುದಾಗಿ ತಿಳಿಸಿದ್ದರು. 4 ವರ್ಷಗಳಿಂದ ಬಡವರಿಗೆ ನಿವೇಶನ ಹಂಚಿಕೆಗೆ ವಿನಾಕಾರಣ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ತೆರೇದಹಳ್ಳಿ ಬಳಿಯ 10 ಎಕರೆ ಜಾಗದಲ್ಲಿ 407 ನಿವೇಶನವಿದ್ದು, ಕೂಡಲೆ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

    ಭ್ರಷ್ಟಾಚಾರ ವಿರೋಧಿ ಜನಾಂದೋಲನ ಸಮಿತಿ ನ್ಯಾಸದ ಜಿಲ್ಲಾಧ್ಯಕ್ಷೆ ಪರೀಧಾಬಾನು ನದಿಮುಲ್ಲಾ ಮಾತನಾಡಿ, ನಿವೇಶನ ಹಕ್ಕುಪತ್ರಕ್ಕಾಗಿ ಹಲವು ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ, ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಉಪವಿಭಾಗಾಧಿಕಾರಿಗಳು ಬಡವರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

    ನಿವೇಶನ ಹಂಚಿಕೆ ನಿರ್ಲಕ್ಷಿಸಿದರೆ ಪುರಸಭೆ ಮುಂದೆ ಬಡವರು ಧರಣಿ ಆರಂಭಿಸಲಿದ್ದಾರೆ ಎಂದು ಎಚ್ಚರಿಸಿದರು.

    ಮಹಾದೇವಕ್ಕ ಕಾರಿ, ಶಾಂತಮ್ಮ ಅರಳಿಕಟ್ಟಿ, ಸುಧಾ ಬೇವಿನಮರದ, ಸವಿತಾ ಕೆಂಗೊಂಡ, ಸೀಮಾ ಪಾರು, ರೇಣುಕಾ ಗಡಾದ, ಜಮೀನಾ ಕೋಲಕಾರ ಇದ್ದರು.

    ಹಕ್ಕುಪತ್ರ ವಿತರಣೆಗೆ ಕ್ರಮ

    ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಪುರಸಭೆ ಅಧ್ಯಕ್ಷೆ ಕವಿತಾ ಸೊಪ್ಪಿನಮಠ, ಜಿ ಪ್ಲಸ್ ಮಾದರಿಯಲ್ಲಿ 407 ನಿವೇಶನಗಳಲ್ಲಿ 811 ಮನೆ ನಿರ್ವಿುಸಿಕೊಡುವ ಪ್ರಸ್ತಾವನೆಯಿತ್ತು. ಆದರೆ, ಬಡವರು ವಂತಿಗೆ ಹಣ ತುಂಬಲು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ನಿವೇಶನ ನೀಡುವ ಚರ್ಚೆ ನಡೆದಿದೆ. ಮುಂದಿನ ವಾರದಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಪುರಸಭೆ ಸದಸ್ಯರು ಹಾಗೂ ಆಶ್ರಯ ಸಮಿತಿ ಸದಸ್ಯರ ಸಭೆ ಏರ್ಪಡಿಸಿ, ಅರ್ಹ ಬಡವರಿಗೆ ನಿವೇಶನ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts