More

    ಎಸ್​ಬಿಐ ಬ್ಯಾಂಕ್ ಎದುರು ಪ್ರತಿಭಟನೆ

    ಸವಣೂರ: ಎಸ್​ಬಿಐ ಸ್ಥಳೀಯ ಶಾಖೆ ಅವ್ಯವಸ್ಥೆಯ ಆಗರವಾಗಿದ್ದು, ಬ್ಯಾಂಕ್ ಸಿಬ್ಬಂದಿ ಗ್ರಾಹಕರಿಗೆ ಸರಿಯಾಗಿ ಸ್ಪಂದಿಸದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಗುರುವಾರ ಎಪಿಎಂಸಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಪ್ರತಿಭಟನೆ ನಡೆಸಿ, ಶಾಖಾ ವ್ಯವಸ್ಥಾಪಕ ಗೌತಮ ಅವರಿಗೆ ಮನವಿ ಸಲ್ಲಿಸಿದರು.

    ಬ್ಯಾಂಕ್​ನಲ್ಲಿ ಮೂಲ ಸೌಲಭ್ಯಗಳಿಲ್ಲದ ಕಾರಣ ಗ್ರಾಹಕರಿಗೆ ತೊಂದರೆ ಉಂಟಾಗುತ್ತಿದೆ. ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯ ಹೊಂದಾಣಿಕೆ ಕೊರತೆಯಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಶಾಖೆ ವ್ಯವಸ್ಥಾಪಕರ ಆದೇಶಕ್ಕೆ ಸಿಬ್ಬಂದಿ ಮನ್ನಣೆ ನೀಡುತ್ತಿಲ್ಲ. ಗ್ರಾಹಕರನ್ನು ಪದೇಪದೆ ಅಲೆದಾಡಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಬ್ಯಾಂಕ್​ನಲ್ಲಿ ಕ್ಷೇತ್ರ ಅಧಿಕಾರಿ ಇಲ್ಲದ ಕಾರಣ ಗ್ರಾಹಕರಿಗೆ ವಿವಿಧ ಸಾಲ ಸೌಲಭ್ಯಗಳು ದೊರಕುತ್ತಿಲ್ಲ. ಸಿಬ್ಬಂದಿ ಕೊರತೆ ಹಾಗೂ ಪ್ರಸ್ತುತ ಇರುವ ಸಿಬ್ಬಂದಿಗೆ ತಾಂತ್ರಿಕ ಜ್ಞಾನದ ಕೊರತೆ ಇರುವುದರಿಂದ ಚೆಕ್ ವಿಲೇವಾರಿ ಹಾಗೂ ಆರ್​ಟಿಜಿಎಸ್ ಮಾಡಲು ಒಂದೂವರೆ ಗಂಟೆ ಸಮಯ ವ್ಯಯ ಮಾಡುತ್ತಿದ್ದಾರೆ. ಆದ್ದರಿಂದ, ಗ್ರಾಹಕರು ಸಂಜೆಯವರೆಗೂ ಸರದಿಯಲ್ಲಿ ನಿಲ್ಲುವಂತಾಗಿದೆ. ಕೂಡಲೆ ಗ್ರಾಹಕರ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.

    ಶಾಖೆಯಲ್ಲಿ ಇನ್ನೂ ಎರಡು ಕೌಂಟರ್ ತೆರೆಯಬೇಕು. ಅವಶ್ಯ ಸಿಬ್ಬಂದಿ ನೇಮಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕು. ಗ್ರಾಹಕರಿಗೆ ಸ್ಪಂದಿಸದ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ 15 ದಿನದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಶಾಖೆಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

    ಎಪಿಎಂಸಿ ದಲ್ಲಾಳಿಗಳಾದ ಶಂಭುಲಿಂಗಯ್ಯ ಸಾಲಿಮಠ, ಕುಮಾರ ಮಟಿಗಾರ, ಗ್ರಾಹಕರಾದ ಜೀಶಾನಖಾನ ಪಠಾಣ, ಬಾಹುದ್ದೀನ್ ಇನಾಮದಾರ, ಗಿರೀಶ ಮಟಿಗಾರ, ನರಸಿಂಹ ಪುಡೂರ, ಬಾಬು ಪರಾಶ, ನೂರಅಹ್ಮದ್, ಮಹ್ಮದ್ ರಫಿಕ್ ಬಳ್ಳಾರಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts