More

    ರಸ್ತೆ ಕಾಮಗಾರಿ ಕೈಗೊಳ್ಳದಿದ್ದರೆ ಪ್ರತಿಭಟನೆ

    ಮುದ್ದೇಬಿಹಾಳ: ಪಟ್ಟಣದ ಇಂದಿರಾವೃತ್ತದಿಂದ ಮಹಿಬೂಬನಗರ ಮಾರ್ಗವಾಗಿ ನಾಲತವಾಡಕ್ಕೆ ತೆರಳುವ ಮುಖ್ಯ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು, ವಾರದೊಳಗೆ ಪೂರ್ಣಗೊಳಿಸದಿದ್ದರೆ ಫೆ. 2ರಂದು ಕವಡಿಮಟ್ಟಿ ಗ್ರಾಮಕ್ಕೆ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುತ್ತದೆ ಎಂದು ಮಹಿಬೂಬನಗರ ಬಡಾವಣೆಯ ನಿವಾಸಿಗಳು ಗುರುವಾರ ತಹಸೀಲ್ದಾರ್ ಬಲರಾಮ ಕಟ್ಟೀಮನಿ ಅವರಿಗೆ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಹಿಟ್ನಳ್ಳಿ ಕಾಲೇಜ್ ನಲ್ಲಿ ಮೂರು ದಿನದ ಕೃಷಿ ಮೇಳ, ಎಂದಿನಿಂದ ಆರಂಭ ಗೋತ್ತಾ?

    ಬಡಾವಣೆಯ ಮುಖಂಡ ಜಿ.ವೈ. ದಫೇದಾರ ಮಾತನಾಡಿ, ಅಪೂರ್ಣವಾಗಿದ್ದ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕಳೆದ ವರ್ಷ ಮೇ ಮತ್ತು ಜುಲೈ ತಿಂಗಳಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಆಗ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಭರವಸೆ ನೀಡಿದ್ದರು.

    ಆದರೆ ಕಾಟಾಚಾರಕ್ಕೆ ಅರ್ಧಂಬರ್ಧ ಡಾಂಬರು ಹಾಕಿ ಹೋಗಲಾಗಿದೆ. ಇದುವರೆಗೂ ಅದನ್ನು ಪೂರ್ಣಗೊಳಿಸಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದೆ.

    ರಸ್ತೆ ವಿಭಜಕದಲ್ಲಿ ಗಿಡಗಳನ್ನು ಹಚ್ಚಿದ್ದು, ಗ್ರಿಲ್ ಅಳವಡಿಸದೆ ಮುಳ್ಳುಕಂಟಿ ಜಡಿದು ಸಮಸ್ಯೆಗೆ ಕಾರಣವಾಗಿದೆ. ಶಿರೋಳ ಸಂಪರ್ಕಿಸುವ ರಸ್ತೆ ಕ್ರಾಸ್‌ನಲ್ಲಿ ಚರಂಡಿಗೆ ತಗ್ಗು ತೋಡಿ ಹಾಗೆ ಬಿಡಲಾಗಿದೆ. ಇಲ್ಲಿ ಯಾವಾಗ ಯಾವ ಅಪಾಯ ಕಾದಿದೆಯೋ ಗೊತ್ತಿಲ್ಲ ಎಂದು ದೂರಿದರು.

    ರಸ್ತೆಗೆ ಒಂದೇ ಲೇಯರ್ ಡಾಂಬರು ಹಾಕಿ ಅಪೂರ್ಣಗೊಳಿಸಿದ್ದರಿಂದ ಅಪಘಾತಗಳು ಸಂಭವಿಸತೊಡಗಿವೆ. ಹಲವರು ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚರಂಡಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ.

    ಒಂದು ವಾರದಲ್ಲಿ ಎಲ್ಲ ಅವ್ಯವಸ್ಥೆ ಸರಿಪಡಿಸಿ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

    ಬಡಾವಣೆಯ ನಿವಾಸಿಗಳಾದ ಅಲ್ಲಾಭಕ್ಷ ಟಕ್ಕಳಕಿ, ಮಹ್ಮದ್ ನಾಗರಾಳ, ಶಬ್ಬೀರ ಕಲ್ಮನಿ, ಮಹಿಬೂಬ ಸಾತಿಹಾಳ, ಖಾದರಬಾಷಾ ಢವಳಗಿ, ಆಸೀಫ ಹಳ್ಳೂರ, ಬಂದೇನವಾಜ ನಾಯ್ಕೋಡಿ, ಯಾಸೀನ ಕಾನ್ಯಾಳ, ರಿಯಾಜ್ ನಾಯ್ಕೋಡಿ, ಮುರ್ತುಜ ಕಲ್ಮನಿ, ಮಹ್ಮದಯುಸೂಫ್ ಹಿರೇಮನಿ, ಬಾಬಾಪಟೇಲ ಗುಡ್ನಾಳ ಮತ್ತಿತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

    ಮನವಿ ಸ್ವೀಕರಿಸಿದ ತಹಸೀಲ್ದಾರ್ ಬಲರಾಮ ಕಟ್ಟೀಮನಿ ಸಂಬಂಧಿಸಿದ ಅಧಿಕಾರಿಗಳನ್ನು ಕರೆಯಿಸಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸುವುದಾಗಿ ಭರವಸೆ ನೀಡಿದರು. ರಸ್ತೆಯ ಉಸ್ತುವಾರಿ ಹೊಂದಿರುವ ಪಿಡಬ್ಲುೃಡಿ ಎಇಇ ಎಸ್.ಜಿ. ಶಿವನಗುತ್ತಿ ಅವರಿಗೂ ಪ್ರತ್ಯೇಕ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts