More

    ಹಿಟ್ನಳ್ಳಿ ಕಾಲೇಜ್‌ನಲ್ಲಿ ಮೂರು ದಿನದ ಕೃಷಿ ಮೇಳ, ಎಂದಿನಿಂದ ಆರಂಭ ಗೊತ್ತಾ?

    ವಿಜಯಪುರ: ಮಹಾಮಾರಿ ಕರೊನಾ ಹಾಗೂ ಪೂಜ್ಯ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ‘ಕೃಷಿ ಮೇಳ’ವನ್ನು ಈ ಬಾರಿ ಅದ್ದೂರಿಯಾಗಿ ಆಯೋಜಿಸಲು ತೀರ್ಮಾನಿಸಿದ್ದು, ಜ. 21 ರಿಂದ 23ರವರೆಗೆ ನಡೆಯಲಿರುವ ಮೇಳಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ ಎಂದು ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ.ಭೀಮಪ್ಪ ಎ ಹೇಳಿದರು.

    ‘ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ’ ಘೋಷವಾಕ್ಯದಡಿ ಈ ಬಾರಿ ಕೃಷಿ ಮೇಳ ಆಯೋಜಿಸಲಾಗಿದೆ. ಈಗಾಗಲೇ ಮಹಾವಿದ್ಯಾಲಯದ ಎದುರಿನ ವಿಶಾಲ ಮೈದಾನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸುಮಾರು 8 ಲಕ್ಷ ವೆಚ್ಚದಲ್ಲಿ ಮೇಳ ಆಯೋಜಿಸಲಾಗುತ್ತಿದ್ದು, ಸದ್ಯ 6 ಲಕ್ಷ ರೂಪಾಯಿ ಅನುದಾನ ಲಭ್ಯವಿದೆ. ಹೆಚ್ಚುವರಿ ಅನುದಾನಕ್ಕಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ನಬಾರ್ಡ್ ಹಾಗೂ ಕೃಷಿ ಇಲಾಖೆಗೆ ಕೋರಲಾಗಿದೆ. ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಕೃಷಿ ಮಹಾವಿದ್ಯಾಲಯ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ನಡೆಯಲಿರುವ ಈ ಮೇಳದಲ್ಲಿ ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿ ಜೊತೆಗೆ ಬೃಹತ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಆಧುನಿಕ ಬೇಸಾಯ ಕ್ರಮಗಳ ಕುರಿತಂತೆ ಕಾಲ ಕಾಲಕ್ಕೆ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಆಗುತ್ತಿರುವ ನಿರಂತರ ಸಂಶೋಧನೆಗಳ ಫಲಿತಾಂಶಗಳನ್ನು ರೈತರಿಗೆ ತಲುಪಿಸುವುದು ಈ ಮೇಳದ ಉದ್ದೇಶವಾಗಿದೆ ಎಂದರು.

    ಉದ್ಘಾಟನೆ ವಿವರ

    ಜ. 21 ರಂದು ಬೆಳಗ್ಗೆ 11ಕ್ಕೆ ಕೃಷಿ ಸಚಿವ ಎಚ್.ಚೆಲುವರಾಯಸ್ವಾಮಿ ಮೇಳ ಉದ್ಘಾಟಿಸುವರು. ನಾಗಠಾಣ ಶಾಸಕ ವಿಠಲ ಕಟಕದೊಂಡ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಕೃಷಿ ವಸ್ತು ಪ್ರದರ್ಶನ ಉದ್ಘಾಟಿಸುವರು. ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸುವರು. ಧಾರವಾಡ ಕೃಷಿ ವಿವಿ ಕುಲಪತಿ ಡಾ.ಪಿ.ಎಲ್. ಪಾಟೀಲ ಹಾಗೂ ಮತ್ತಿತರ ಗಣ್ಯರು, ಶಾಸಕರು, ವಿಪ ಸದಸ್ಯರು ಉಪಸ್ಥಿತರಿರುವರು ಎಂದು ಡಾ.ಭೀಮಪ್ಪ ತಿಳಿಸಿದರು.
    ಮಾರಾಟ ಮಳಿಗೆಗಳು:
    ಮಳಿಗೆಗಳ ಮೂಲಕವೂ ಮೇಳಕ್ಕೆ ಆದಾಯ ಸಂಗ್ರಹಿಸಲಾಗುತ್ತಿದ್ದು ಸುಮಾರು 125 ಮಳಿಗೆ ಸ್ಥಾಪಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಳಿಸಲಾಗಿದೆ. ಗಾಯಿ ಎಂಬುವವರಿಗೆ ಟೆಂಡರ್ ಆಗಿದೆ. ಅಂದಾಜು 5 ಲಕ್ಷ ರೂ.ವೆಚ್ಚದಲ್ಲಿ ಮಳಿಗೆ ಸ್ಥಾಪಿಸಲಾಗುತ್ತಿದ್ದು, ಪ್ರತಿಯೊಂದು ಮಳಿಗೆಗಳಿಗೂ ದರ ನಿಗದಿಗೊಳಿಸಲಾಗಿದೆ. ಕೃಷಿ ಪರಿಕರ ಮಾರಾಟ ಮಳಿಗೆ, ಸಿರಿಧಾನ್ಯ, ಕೃಷಿ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮಳಿಗೆ, ವಿವಿಧ ಸಂಶೋಧನಾ ಕೇಂದ್ರಗಳ ಮಳಿಗೆ, ಬೃಹತ್ ಜಲಾನಯನ ಅಭಿವೃದ್ಧಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುವುದು. ಕೃಷಿ ಸಲಹಾ ಕೇಂದ್ರ ಸ್ಥಾಪಿಸಲಾಗುವುದು. ಪ್ರತಿ ದಿನ ಮಧ್ಯಾಹ್ನ ವಿಶೇಷ ಉಪನ್ಯಾಸ, ವಿಚಾರ ವಿನಿಮಯ ಗೋಷ್ಠಿ ಏರ್ಪಡಿಸಲಾಗುವುದು. ಸಾಧಕ ರೈತರಿಂದ ಮಾಹಿತಿ ಒದಗಿಸಲಾಗುವುದು ಎಂದರು.

    ಮಾಹಿತಿ ವಿನಿಮಯ

    ಡಾ.ಅಶೋಕ ಎಸ್.ಸಜ್ಜನ ಮಾತನಾಡಿ, ಕೃಷಿಯಲ್ಲಾದ ನೂತನ ಸಂಶೋಧನೆಗಳು, ಪ್ರಾತ್ಯಕ್ಷಿಕೆಗಳು, ಯಂತ್ರೋಪಕರಣಗಳ ಪರಿಚಯ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ತಜ್ಞರೊಂದಿಗೆ ಚರ್ಚೆ, ಪ್ರಯೋಗ ತಾಕುಗಳ ಭೇಟಿ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೀಟನಾಶಕಗಳ ಸಿಂಪರಣೆಗಾಗಿ ‘ಡ್ರೋನ್’ ಬಳಕೆ, ಸೌರಚಾಲಿತ ಮತ್ತು ಕಡಿಮೆ ತೂಕದ ಡಿಸೈಲ್ ಪಂಪ್‌ಸೆಟ್‌ನಿಂದ ನೀರೆತ್ತುವುದು, ಸ್ವಯಂ ಚಾಲಿತ ಸೂಕ್ಷ್ಮ ನೀರಾವರಿ ಪದ್ಧತಿ, ಕೃಷಿ ಹವಾಮಾನ ಶಾಸ್ತ್ರ, ಒಣಬೇಸಾಯ ತಂತ್ರಜ್ಞಾನ, ಹಿಂಗಾರಿ ಜೋಳದ ತಳಿಯ ಅಭಿವೃದ್ಧಿ, ಮಳೆ ನೀರು ಕೊಯ್ಲು, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಎರೆಹುಳು ತಂತ್ರಜ್ಞಾನ, ಸಾವಯವ ಕೃಷಿ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಪಶುಸಂಗೋಪನೆ, ಬೀಜೋತ್ಪಾದನೆ ಹಾಗೂ ಬೀಜ ಸಂಸ್ಕೃರಣೆ, ಗೃಹ ವಿಜ್ಞಾನ ಮುಂತಾದವುಗಳ ಕುರಿತು ಮಾಹಿತಿ ನೀಡಲಾಗುವುದು ಎಂದರು.

    ಪ್ರಚಾರ ಸಮಿತಿ ಅಧ್ಯಕ್ಷ ಡಾ.ಆರ್.ಬಿ. ಬೆಳ್ಳಿ ಮಾತನಾಡಿ, ಕೃಷಿ ಮೇಳದಲ್ಲಿ ಪ್ರತಿ ದಿನ ಗೋಷ್ಠಿಗಳು ನಡೆಯಲಿದ್ದು, ಮೊದಲ ದಿನ ಹವಾಮಾನ ವೈಪರೀತ್ಯದ ಪರಿಣಾಮಗಳು ಮತ್ತು ನಿರ್ವಹಣೆ, ಬರವ ನಿರ್ವಹಣೆಗಾಗಿ ಕೃಷಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಹಾಗೂ ರೈತರಿಂದ ರೈತರಿಗಾಗಿ ಪ್ರಶಸ್ತಿ ವಿಜೇತ ರೈತರಿಂದ ಅನುಭವ ಹಂಚಿಕೆ ಕಾರ್ಯಕ್ರಮ ಇರಲಿದೆ. ಎರಡನೇ ದಿನ ಸುಸ್ಥಿರ ಕೃಷಿಗಾಗಿ ಉಪಸಬುಗಳು ಮತ್ತು ರೈತರಿಂದ ರೈತರಿಗಾಗಿ ಕಾರ್ಯಕ್ರಮ ಇರಲಿದೆ. ಮೂರನೇ ದಿನ ಮಾರಾಟಗಾರರು ಹಾಗೂ ಖರೀದಿದಾರರ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು.

    ಹಿರಿಯ ವಿಜ್ಞಾನಿ ಡಾ.ಪೋದ್ದಾರ್ ಮಾತನಾಡಿ, ಒಣಬೇಸಾಯ ತಾಂತ್ರಿಕತೆ, ಕೃಷಿ ಹೊಂಡ, ಮಣ್ಣು ಮತ್ತು ನೀರು ಸಂರಕ್ಷಣೆ ಕ್ರಮಗಳು, ಮಳೆ ನೀರು ಕೊಯ್ಲು ಮತ್ತು ಮರುಪೂರಣ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ಸಮಗ್ರ ಬೇಸಾಯ ಮಾಡುವ ಕುರಿತಂತೆ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಸಂಶೋಧನೆಗಳು ಸರ್ಕಾರದ ಯೋಜನೆಗಳಾಗಿರುವುದು ಹೆಗ್ಗಳಿಕೆ. ಬರುವ ದಿನಗಳಲ್ಲಿ ಇನ್ನಷ್ಟು ಸಂಶೋಧನೆಗಳನ್ನು ಪರಿಚಿಸಲಾಗುವುದು. ಕೃಷಿ ಮೇಳದಲ್ಲಿ ನವೀಣ ತಳಿಗಳು ಹಾಗೂ ಉತ್ಪಾದನಾ ತಾಂತ್ರಿಕೆಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗವುದು ಎಂದರು.
    ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಹಿರಿಯ ವಿಜ್ಞಾನಿಗಳು ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts