More

    ಪಟ್ಟು ಬಿಡದ ಗ್ರಾಮಸ್ಥರು!

    ಮುಳಗುಂದ: ಪ್ರತ್ಯೇಕ ಗ್ರಾಮ ಪಂಚಾಯಿತಿ ಸ್ಥಾನಮಾನ ನೀಡದಿದ್ದರೆ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಆಗ್ರಹಿಸಿ ಸೋಮವಾರ ಸಮೀಪದ ನೀಲಗುಂದ ಗ್ರಾಮಸ್ಥರು ಚಿಂಚಲಿ ಗ್ರಾಪಂ ಪಿಡಿಒ ಎಸ್.ಎಸ್. ತೊಂಡಿಹಾಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹಾಗೂ ಗದಗ ತಾಪಂ ಇಒ ಎಚ್.ಎಸ್. ಜಿನಗಾ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನ ನಡೆಸಿದರು.

    ಆದರೆ, ಅಧಿಕಾರಿಗಳ ಮನವಿಗೆ ನೀಲಗುಂದ ಗ್ರಾಮಸ್ಥರು ಜಗ್ಗಲಿಲ್ಲ. ‘ಚಿಂಚಲಿ ಗ್ರಾಪಂನಲ್ಲಿ ಬಡವರ ಯಾವುದೇ ಕೆಲಸ ಆಗುತ್ತಿಲ್ಲ. ಇಲ್ಲಿ ಒಂದು ಸಮುದಾಯದವರಿಂದ ಗೂಂಡಾಗಿರಿ ನಡೆಯತ್ತಿದೆ. ಇಲ್ಲಿ ಪಿಡಿಒ ಇದ್ದರೆ, ನೆಟ್​ವರ್ಕ್ ಇರುವದಿಲ್ಲ. ನೆಟ್​ವರ್ಕ್ ಇದ್ದಾಗ ಪಿಡಿಒ ಇರುವದಿಲ್ಲ. ಹೀಗಾಗಿ ಗ್ರಾಮದ ಯಾವುದೇ ಕೆಲಸ ಆಗುತ್ತಿಲ್ಲ. ಈ ಗ್ರಾಪಂನಲ್ಲಿ ಹತ್ತಾರು ಜನ ಪಿಡಿಒಗಳು ಬಂದು ಹೋಗಿದ್ದಾರೆ. ನಮಗೆ ಪ್ರತ್ಯೇಕ ಗ್ರಾಪಂ ಬೇಕೇ ಬೇಕು. ಅಲ್ಲಿಯವರೆಗೆ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ’ ಎಂದು ಪಟ್ಟು ಹಿಡಿದರು.

    ಪ್ರತ್ಯೇಕ ಗ್ರಾಪಂ ಸಾಧ್ಯವಾಗದಿದ್ದರೆ ಚಿಂಚಲಿ ಗ್ರಾಪಂ ಕಾರ್ಯಾಲಯವನ್ನು ನೀಲಗುಂದ ಗ್ರಾಮಕ್ಕೆ ಸ್ಥಳಾಂತರಿಸಬೇಕು. ಇಲ್ಲಿ ಸುಸಜ್ಜಿತ ಕಟ್ಟಡವಿದೆ. ತಕ್ಷಣ ಈ ಪ್ರಕ್ರಿಯೆ ನಡೆಯಬೇಕು. ಇಲ್ಲವಾದಲ್ಲಿ ಚುನಾವಣೆ ಬಹಿಷ್ಕಾರ ಮಾಡಿಯೇ ತೀರುತ್ತೇವೆ ಎಂದು ಬೆದರಿಕೆ ಹಾಕಿದರು. ಇದೇ ವೇಳೆ ನೀಲಗುಂದ ಗ್ರಾಮಕ್ಕೆ ಪ್ರತ್ಯೇಕ ಗ್ರಾಪಂ ಸ್ಥಾನಮಾನ ನೀಡುವಂತೆ ಗ್ರಾಮಸ್ಥರು ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.

    ಗದಗ ತಾಲೂಕು ಕಂದಾಯ ನಿರೀಕ್ಷಕ ಎಸ್.ಎಸ್. ಪಾಟೀಲ, ಚಿಂಚಲಿ ಪಿಡಿಒ ಎಸ್.ಎಸ್. ತೊಂಡಿಹಾಳ, ಗ್ರಾಮ ಲೆಕ್ಕಾಧಿಕಾರಿ ಶರಣಪ್ಪ ಹುಯಿಲ್ಗೋಳ, ಕುಬೇರಡ್ಡಿ ಬಂಗಾರಿ, ಶಂಕ್ರಪ್ಪ ಅದರಗುಂಚಿ, ಚನ್ನಪ್ಪ ತಿರ್ಲಾಪೂರ, ಶಿವಪ್ಪ ಕೋಳಿವಾಡ, ಬಸವರಾಜ ಭಜಂತ್ರಿ, ಪ್ರಭು ಅಂಗಡಿ, ಬಸವರಾಜ ಜಕ್ಕಮ್ಮನವರ, ಮಲ್ಲಪ್ಪ ಬಾಲರಡ್ಡಿ, ವಿನಾಯಕ ಬಂಗಾರಿ, ಶೇಖಪ್ಪ ಕಾಟೊಳ್ಳಿ, ಮಹಾದೇವಪ್ಪ ಚಿಕ್ಕಗಸಿ, ಮಾನಪ್ಪ ಬಡಿಗೇರ, ಯಲ್ಲಪ್ಪ ಕುರ್ತಕೋಟಿ, ಪ್ರವೀಣ ಬಂಗಾರಿ, ನವೀನ ಬಂಗಾರಿ, ಬಂಡೆಪ್ಪ ಕಂಪ್ಲಿ, ಹನುಮಪ್ಪ ವಗ್ಗನವರ ಸೇರಿದಂತೆ ಪ್ರತ್ಯೇಕ ಗ್ರಾಪಂ ಹೋರಾಟ ಸಮಿತಿ ಸದಸ್ಯರು ಹಾಗೂ ನೂರಾರು ಜನ ಗ್ರಾಮಸ್ಥರು ಉಪಸ್ಥಿತರಿದ್ದರು.

    ಪ್ರತ್ಯೇಕ ಗ್ರಾಪಂ ಮಾಡಲು 5000 ಕ್ಕಿಂತ ಹೆಚ್ಚಿನ ಜನಸಂಖ್ಯೆಯಿರಬೇಕು. 2011ರ ಜನಗಣತಿ ಪ್ರಕಾರ ಗ್ರಾಮದಲ್ಲಿ 3000 ಜನಸಂಖ್ಯೆಯಿದ್ದು, ಕಾನೂನಿನ ತೊಡಕು ಉಂಟಾಗುತ್ತದೆ. ಗ್ರಾಮದ ಜನಸಂಖ್ಯೆ ಸರ್ವೆ ಮಾಡಿಸುತ್ತೇವೆ. ನಂತರ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಚುನಾವಣೆ ಬಹಿಷ್ಕಾರದಿಂದ ಯಾವುದೇ ಲಾಭವಿಲ್ಲ.
    | ಶ್ರೀನಿವಾಸಮೂರ್ತಿ ಕುಲಕರ್ಣಿ, ಗದಗ ತಹಸೀಲ್ದಾರ್

    ಗ್ರಾಪಂ ಕಾರ್ಯಾಲಯ ಸ್ಥಳಾಂತರಿಸಲು ಬಲವಾದ ಅಪರಾಧ ಪ್ರಕರಣಗಳು ಇರಬೇಕು. ಅಂತಹ ಯಾವದೇ ಪ್ರಕರಣಗಳು ಈ ಹಿಂದೆ ದಾಖಲಾಗಿಲ್ಲ. ಹೀಗಾಗಿ ಮೇಲಧಿಕಾರಿಗಳ ಸಲಹೆಯ ಮೇರೆಗೆ ಮುಂದಿನ ಕ್ರಮ ಜರುಗಿಸುತ್ತೇವೆ.
    | ಎಚ್.ಎಸ್. ಜಿನಗಾ, ಗದಗ ತಾಪಂ ಕಾರ್ಯ ನಿರ್ವಹಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts