More

    ಕಾಂತರಾಜ್ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

    ಶಿವಮೊಗ್ಗ: ಎಚ್.ಕಾಂತರಾಜ್ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ, ಹಿಂದುಳಿತ ಜನಜಾಗೃತಿ ವೇದಿಕೆ ಹಾಗೂ ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಜಾಗೃತಿ ವೇದಿಕೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

    ಹಿಂದುಳಿದ ವರ್ಗದವರಿಗೆ ನೀಡುತ್ತಿರುವ ಮೀಸಲಾತಿ ಭಿಕ್ಷೆಯಲ್ಲ. ಅದು ಸಂವಿಧಾನಬದ್ಧ ಹಕ್ಕು ಎನ್ನುವುದು ಸ್ಪಷ್ಟವಾಗಿದೆ. ಭಾರತದಲ್ಲಿ ಶ್ರೇಣಿಕೃತ ಜಾತಿ ಪದ್ಧತಿ ಇದೆ. ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಲು ಮತ್ತು ಆಯಾ ಜಾತಿಗಳಿಗೆ ವಿಶೇಷ ಸವಲತ್ತು, ಹಣಕಾಸಿನ ನೆರವು, ಯೋಜನೆಗಳನ್ನು ನೀಡಲು ಅಂಕಿ-ಅಂಶಗಳು ಅವಶ್ಯಕವಾಗಿವೆ. ಇದು ತಿಳಿಯಬೇಕಾದರೆ ಸರ್ಕಾರವೇ ನೇಮಿಸಿದ್ದ ಕಾಂತರಾಜ್ ಅವರು ನೀಡಿರುವ ವರದಿಯನ್ನು ಸ್ವೀಕರಿಸಿ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
    ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸವಲತ್ತುಗಳಿಗೆ ಅಂಕಿ-ಅಂಶ ಅವಶ್ಯಕ ಎನ್ನುವ ನಿಟ್ಟಿನಲ್ಲಿ ಎಲ್.ಜಿ.ಹಾವನೂರು, ಟಿ.ವೆಂಕಟಸ್ವಾಮಿ, ಚಿನ್ನಪ್ಪರೆಡ್ಡಿ ಆಯೋಗದ ವರದಿಗಳು ಸಿದ್ಧಗೊಂಡವು. ಈ ದಾರಿಯಲ್ಲಿ ಕಾಂತರಾಜ್ ಆಯೋಗದ ವರದಿಯೂ ಸಾಗಿದ್ದು 2014ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೇಮಕ ಮಾಡಿತ್ತು. ಹಿರಿಯ ವಕೀಲರೂ ಆದ ಕಾಂತರಾಜ್ ಅವರು ಆಯೋಗದ ಅಧ್ಯಕ್ಷರಾಗಿ 5 ವರ್ಷ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ 55 ಮಾನದಂಡಗಳನ್ನು ಅಳವಡಿಸಿ ಸಮಗ್ರ ವರದಿಯನ್ನು ಸಿದ್ಧಪಡಿಸಿದ್ದಾರೆ. ಆದರೆ 2018ರ ವಿಧಾನಸಭೆ ಚುನಾವಣೆಯಿಂದಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿಲ್ಲ. ಅಲ್ಲಿಂದ ಇಲ್ಲಿವರೆಗೂ ವರದಿ ಸ್ವೀಕರಿಸಲು ಸರ್ಕಾರ ಸಿದ್ಧವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
    ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ 180 ಕೋಟಿ ರೂ. ವೆಚ್ಚ ಮಾಡಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ಎಲ್ಲ ಜಾತಿಗಳ ಹಿಂದುಳಿದವರ ಸಮಗ್ರ ವರದಿ ಸಿದ್ಧಪಡಿಸಿದ್ದು ತಕ್ಷಣವೇ ಬಿಡುಗಡೆ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಕಾಂತರಾಜ್ ಬಳಿಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಾಶ್ವತ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಅವರು ಈ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಮೀನಮೇಷ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ರಾಜ್ಯದ ಎಲ್ಲ ಜಾತಿಗಳ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿದರು.
    ವೇದಿಕೆ ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ತೀ.ನ.ಶ್ರೀನಿವಾಸ್, ವಿ.ರಾಜು, ಪ್ರೊ. ಎಚ್.ಕಲ್ಲನ, ಎನ್.ಉಮಾಪತಿ, ಕೆ.ಜಿ.ವೆಂಕಟೇಶ್, ಎಸ್.ಬಿ.ಅಶೋಕ್‌ಕುಮಾರ್, ಮೋಹನ್, ಆರ್.ಟಿ.ನಟರಾಜ್, ಜನಮೇಜಿರಾವ್, ಎಚ್.ಎಂ.ರಂಗನಾಥ, ಪ್ರೊ. ಡಿ.ಆರ್.ಉಮೇಶ್, ರಾಜಮ್ಮ, ಯಶೋದಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts