More

    ಕಮಲ ಪಕ್ಷಕ್ಕೆ ನೂತನ ಸಾರಥಿ ಅರುಣಕುಮಾರ ಪೂಜಾರ; ‘ಲೋಕ’ ಸಮರ ಗೆಲ್ಲುವ ಸವಾಲು

    | ಕೇಶವಮೂರ್ತಿ ವಿ.ಬಿ. ಹಾವೇರಿ

    ರಾಣೆಬೆನ್ನೂರ ಕ್ಷೇತ್ರದ ಮಾಜಿ ಶಾಸಕ, ಯುವ ನಾಯಕ ಅರುಣಕುಮಾರ ಪೂಜಾರ ಅವರ ಹೆಗಲಿಗೆ ಯಾಲಕ್ಕಿ ನಾಡಿನ ಬಿಜೆಪಿ ಜಿಲ್ಲಾಧ್ಯಕ್ಷ ಪಟ್ಟ ಒಲಿದಿದೆ. ಈ ಮೂಲಕ ಕೇಸರಿ ಪಡೆ ನೂತನ ಜಿಲ್ಲಾಧ್ಯಕ್ಷರಿಗೆ ಜಿಲ್ಲೆಯಲ್ಲಿ ಅರುಣೋದಯದ ಟಾಸ್ಕ್ ನೀಡಿದೆ.

    ಆರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಕಾಣದಿದ್ದರೂ ಅಂತಿಮ ಕ್ಷಣದಲ್ಲಿ ಭಾರಿ ಕಸರತ್ತು ನಡೆಯಿತು. ಲಿಂಗಾಯತರು, ಹಿಂದುಳಿದ ವರ್ಗ, ದಲಿತ, ಹಿರಿಯರು, ಯುವಕರು, ಎಂಬಿತ್ಯಾದಿ ಲೆಕ್ಕಾಚಾರಗಳು ನಡೆದಿದ್ದವು. ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣನವರ, ಭೋಜರಾಜ ಕರೂದಿ, ಜಗದೀಶ ಬಸೇಗೆಣ್ಣಿ, ಕೃಷ್ಣಾ ಈಳಗೇರ, ವೆಂಕಟೇಶ ನಾರಾಯಣಿ, ಪ್ರಭು ಹಿಟ್ನಳ್ಳಿ ಸೇರಿದಂತೆ 32 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಕೊನೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಹಾಗೂ ಅರುಣಕುಮಾರ ಹೆಸರು ಕೇಳಿ ಬಂದಿತ್ತು.

    ರಾಜ್ಯ ಉಪಾಧ್ಯಕ್ಷ ಸ್ಥಾನ ರಾಣೆಬೆನ್ನೂರಿನ ಡಾ. ಬಸವರಾಜ ಕೇಲಗಾರ ಅವರಿಗೆ ದೊರೆತಿತ್ತು. ಹಾಗಾಗಿ, ಜಿಲ್ಲಾಧ್ಯಕ್ಷ ಸ್ಥಾನ ಬೇರೆ ತಾಲೂಕಿಗೆ ನೀಡುತ್ತಾರೆ ಎನ್ನಲಾಗಿತ್ತು. ಅಂತಿಮವಾಗಿ ಅರುಣಕುಮಾರ ಕೇಸರಿ ಪಡೆಯ ಜಿಲ್ಲೆಯ ಸಾರಥ್ಯ ವಹಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಸೋಲು ಕಂಡಿರುವ ಬಿಜೆಪಿಗೆ ಮತ್ತೆ ಬಲ ಹೆಚ್ಚಿಸಿಕೊಳ್ಳಬೇಕಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಾಗಿರುವ ಕ್ಷೇತ್ರವನ್ನು ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿ ಹೊಸ ಜಿಲ್ಲಾಧ್ಯಕ್ಷರ ಹೆಗಲೇರಿದೆ.

    2020ರಲ್ಲಿ ರಾಣೆಬೆನ್ನೂರ ಶಾಸಕ ಆರ್. ಶಂಕರ ಕಾಂಗ್ರೆಸ್​ಗೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಆರ್. ಶಂಕರ ಸೋಲುವ ಆತಂಕದಿಂದ ಪಕ್ಷ ಅರುಣಕುಮಾರಗೆ ಟಿಕೆಟ್ ನೀಡಿತ್ತು. ನಿರೀಕ್ಷೆಯಂತೆ ಅರುಣಕುಮಾರ ಗೆಲುವು ಸಾಧಿಸಿ ಶಾಸಕರಾಗಿದ್ದರು. ತಮ್ಮ ಅವಧಿಯಲ್ಲಿ ಕ್ಷೇೕತ್ರದಲ್ಲಿ ಹಲವು ಯೋಜನೆ, ಕಾಮಗಾರಿಗಳನ್ನು ಜಾರಿಗೊಳಿಸಿದ್ದಾರೆ. ಆದರೆ, ಕ್ಷೇತ್ರದಲ್ಲಿ ಚುನಾವಣೆ ಸಂದರ್ಭದಲ್ಲಿ ಸ್ವಪಕ್ಷದವರಿಂದಲೇ ಕೆಲ ಅಪಸ್ವರಗಳು ಕೇಳಿ ಬಂದಿದ್ದವು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಕೃಪಾಕಟಾಕ್ಷ, ಬಲಿಷ್ಟ ಲಿಂಗಾಯತ ಪಂಚಮಸಾಲಿ ಸಮುದಾಯದ ಬೆಂಬಲದ ಕಾರಣಕ್ಕೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅರುಣಕುಮಾರ ಅವರನ್ನೇ ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

    ವಿಧಾನಸಭೆ ಚುನಾವಣೆಯ ಸೋಲಿನ ಕಹಿ ಮರೆತು ಜಿಲ್ಲೆಯಲ್ಲಿ ಪಕ್ಷದ ಬಲವರ್ಧಿಸುವ ಜವಾಬ್ದಾರಿ ಅರುಣಕುಮಾರ ಮೇಲಿದೆ. ಯಾವುದೇ ಅಭಿಪ್ರಾಯಭೇದ ಇದ್ದರೂ ಮರೆತು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಹೊಣೆಗಾರಿಕೆ ಅವರ ಮೇಲಿದೆ. ಅರುಣಕುಮಾರ ಅವರ ಆಯ್ಕೆಯನ್ನು ಬಹುತೇಕ ಎಲ್ಲರೂ ಸ್ವಾಗತಿಸಿದ್ದಾರೆ. ಯಾರೂ ಆಕ್ಷೇಪ ಎತ್ತಿಲ್ಲ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಹುಶಃ ಇದು ಪಕ್ಷಕ್ಕೆ ವರದಾನವಾಗಲಿದೆ.

    ಭಿನ್ನಾಭಿಪ್ರಾಯಕ್ಕೆ ತೆರೆ ಎಳೆಯಬಲ್ಲರೆ?

    ಹಾವೇರಿ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳು ಹಾವೇರಿ ಜಿಲ್ಲೆಗೆ ಸೇರಿದ್ದರೆ, ಮೂರು ಕ್ಷೇತ್ರಗಳು ಗದಗ ಜಿಲ್ಲೆಗೆ ಸೇರುತ್ತವೆ. ಹಾಗಾಗಿ, ಲೋಕಸಭೆ ಚುನಾವಣೆಯ ಬಹುದೊಡ್ಡ ಜವಾಬ್ದಾರಿ ಹಾವೇರಿ ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷರ ಮೇಲೆ ಇರುತ್ತದೆ. ಆದರೆ, ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿದೆ. ಅರುಣಕುಮಾರ ಸಹ ಸೋತವರೇ. ಈ ಸೋಲಿನಿಂದ ಚೇತರಿಸಿಕೊಂಡು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆಲುವಿನ ನಗೆ ಬೀರಬೇಕಿದೆ. ಇದಕ್ಕಾಗಿ, ಪಕ್ಷದ ಒಳಗಡೆ ಇರುವ ಭಿನ್ನಾಭಿಪ್ರಾಯ, ಅಸಮಾಧಾನ, ಬೇಸರಗಳಿಗೆ ತೆರೆ ಎಳೆದು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಿದೆ.

    ಶೀಘ್ರ ಜಿಲ್ಲಾ ತಂಡ ಅಂತಿಮ

    ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇತರ ನಾಯಕರ ಜತೆಗೆ ರ್ಚಚಿಸಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಇತರ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು. ಮೂರು ದಿನದೊಳಗೆ ಪಟ್ಟಿ ಸಿದ್ಧಪಡಿಸಿ ರಾಜ್ಯಾಧ್ಯಕ್ಷರಿಗೆ ಕಳುಹಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಪಕ್ಷದ ಹಿರಿಯರು ನನ್ನನ್ನು ಗುರುತಿಸಿ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಜಿಲ್ಲೆಯ ಎಲ್ಲ ಮುಖಂಡರ ಮಾರ್ಗದರ್ಶನ, ಸಹಕಾರದಲ್ಲಿ ಪಕ್ಷವನ್ನು ಬಲಿಷ್ಟವಾಗಿ ಸಂಘಟಿಸುತ್ತೇನೆ. ಮೊದಲು ನನ್ನ ಕ್ಷೇತ್ರದ ಕೆಲ ಸಣ್ಣಪುಟ್ಟ ಸಮಸ್ಯೆ ಬಗೆಹರಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಒಗ್ಗಟ್ಟಿನಿಂದ ಲೋಕಸಭೆಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. 2028ರಲ್ಲಿ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಮತ್ತೆ ಕಮಲ ಅರಳಿಸುವ ಗುರಿಯೊಂದಿಗೆ ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಲಿದ್ದೇವೆ.

    | ಅರುಣಕುಮಾರ ಪೂಜಾರ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts