More

    ಅರಣ್ಯಶಾಸ್ತ್ರ ಪದವಿ ಪರಿಗಣಿಸುವಂತೆ ಒತ್ತಾಯಿಸಿ ಪ್ರತಿಭಟನೆ

    ಶಿವಮೊಗ್ಗ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್), ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಮತ್ತು ಉಪ ವಲಯ ಅರಣ್ಯಾಧಿಕಾರಿ(ಡಿವೈಆರ್‌ಎಫ್‌ಒ) ಹುದ್ದೆಗಳ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಪದವಿಯನ್ನಷ್ಟೇ ಪರಿಗಣಿಸುವಂತೆ ಹಾಗೂ ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಸಲ್ಲಿಸಿರುವ 6ನೇ ಆಡಳಿತ ಸುಧಾರಣೆ ವರದಿ ಅಧ್ಯಾಯ 4ರ ಅಧಿಸೂಚನೆ ಕೈಬಿಡುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ಅರಣ್ಯ ಪದವೀಧರರು ಮತ್ತು ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ನಗರದ ಸೈನ್ಸ್ ಮೈದಾನದಿಂದ ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಸೀನಪ್ಪ ಶೆಟ್ಟಿ ವೃತ್ತ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಮತ್ತು ಪದವೀಧರರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
    ವೃತ್ತಿಪರ ಪದವೀಧರರ ಸಾಮರ್ಥ್ಯ ಮತ್ತು ಅಗತ್ಯವನ್ನು ಅರಿತು ರಾಜ್ಯ ಸರ್ಕಾರ 2003ರಲ್ಲಿ ಎಸಿಎಫ್, ಆರ್‌ಎಫ್‌ಒ ಹುದ್ದೆಗಳಿಗೆ ಶೇ.50 ಮೀಸಲಾತಿ ಒದಗಿಸಿದೆ. ಆದರೆ ಅದನ್ನು 2012ರಲ್ಲಿ ಆರ್‌ಎಫ್‌ಒ ಹುದ್ದೆಗೆ ಶೇ.75 ಹೆಚ್ಚಿಸಲಾಗಿದೆ. ಕರ್ನಾಟಕ ಅರಣ್ಯ ಇಲಾಖೆಯ ಸೇವೆಗಳ ನಿಯಮಗಳು, ಬಿಎಸ್ಸಿ ಅರಣ್ಯ ಶಾಸ್ತ್ರ, ಪದವೀಧರರಿಗೆ ವಲಯ ಅರಣ್ಯ ಅಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಮೊದಲೇ 75ರಷ್ಟಿದ್ದ ಮೀಸಲಾತಿಯನ್ನು ಶೇ.50ಕ್ಕೆ ಕಡಿತಗೊಳಿಸಿರುವುದು ಅನ್ಯಾಯದ ಸಂಗತಿ ಎಂದು ಕಿಡಿಕಾರಿದರು.
    ನಾವೆಲ್ಲ ಅರಣ್ಯ ಪವೀಧರರಾಗಿದ್ದು ಕೇವಲ ಅರಣ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡಿದ್ದು ಬೇರೆ ಇಲಾಖೆ ಮತ್ತು ಖಾಸಗಿ ಇಲಾಖೆಗಳಲ್ಲಿ ಅವಕಾಶಗಳು ಕಡಿಮೆ ಇರಲಿವೆ. ಹಾಗಾಗಿ ಎಸಿಎಫ್, ಆರ್‌ಎಫ್‌ಒ ಮತ್ತು ಡಿವೈಆರ್‌ಎಫ್‌ಒ ಹುದ್ದೆಗಳಿಗೆ ಬಿಎಸ್ಸಿ ಅರಣ್ಯ ಪದವೀಧರರನ್ನೇ ನೇರ ನೇಮಕಾತಿ ಮಾಡಿಕೊಳ್ಳಬೇಕು. ಈ ಮೂಲಕ ವಿಶೇಷ ಪರಿಣಿತಿ ಹೊಂದಿರುವ ಪದವೀಧರರ ಜ್ಞಾನ ಮತ್ತು ಅನುಭವವನ್ನು ರಚನಾತ್ಮಕವಾಗಿ ಬಳಸಿಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.
    ಅರಣ್ಯ ಇಲಾಖೆಯ ಗ್ರೂಪ್ ಎ, ಬಿ, ಸಿ ವೃಂದದ ಹುದ್ದೆಗಳಿಗೆ ಬಿಎಸ್ಸಿ (ಅರಣ್ಯಶಾಸ್ತ್ರ) ಪದವೀಧರರನ್ನ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಿ ನ್ಯಾಯ ಒದಗಿಸಿಕೊಡಬೇಕಿದೆ. ಅಲ್ಲದೆ, ವಿಜಯಭಾಸ್ಕರ್ ಅವರು ಸಲ್ಲಿಸಿರುವ ಶಿಫಾರಸ್ಸು ಅವೈಜ್ಞಾನಿಕವಾಗಿದ್ದು ಅದನ್ನು ಕೈಬಿಡುವಂತೆ ಮನವಿ ಮಾಡಿದರು. ಸಂಘದ ಸದಸ್ಯರಾದ ಅನೂಪ್, ಲಹರಿ, ಅಂಕುಶ್, ಬಿ.ಎಸ್.ನಂದು, ಮೋನಿಕಾ, ಸಹನಾ, ಎಸ್.ಎನ್.ಮಾರುತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts