More

    ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

    ನಂಜನಗೂಡು: ಹೆಡಿಯಾಲ ಹಾಗೂ ಓಂಕಾರ್ ಅರಣ್ಯ ಪ್ರದೇಶ ವ್ಯಾಪ್ತಿಯ ಕಾಡುಪ್ರಾಣಿಗಳಿಂದ ನಂಜನಗೂಡು ಹಾಗೂ ಸರಗೂರು ತಾಲೂಕಿನ ಗಡಿಯಂಚಿನ ಗ್ರಾಮಗಳ ರೈತರು ಹೈರಾಣಾಗಿದ್ದು, ಕಾಡುಪ್ರಾಣಿಗಳ ಉಪಟಳಕ್ಕೆ ಕಡಿವಾಣ ಹಾಕುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

    ತಾಲೂಕಿನ ಹೆಡಿಯಾಲ ವಲಯ ಅರಣ್ಯ ಇಲಾಖೆ ಸಮೀಪ ಸಮಾವೇಶಗೊಂಡ ನಂಜನಗೂಡು ಹಾಗೂ ಸರಗೂರು ಭಾಗದ ರೈತರು ಇಲಾಖೆ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಾಡು ಪ್ರಾಣಿಗಳಿಂದ ನಷ್ಟಕ್ಕೆ ಒಳಗಾದ ಬೆಳೆಗೆೆ ಪುಡಿಗಾಸಿನ ಪರಿಹಾರವನ್ನು ಅರಣ್ಯ ಇಲಾಖೆ ನೀಡುತ್ತಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕಾಡುಪ್ರಾಣಿ ಮತ್ತು ಮಾನವ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ. ಸಾಕಷ್ಟು ರೈತರು ಹುಲಿ, ಚಿರತೆ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ಹಾದನೂರು ಒಡೆಯನಪುರ ಗ್ರಾಮದ ರೈತ ಹುಲಿಗೆ ಬಲಿಯಾದರು. ಆದರೆ ಇದುವರೆಗೂ ಅರಣ್ಯ ಇಲಾಖೆ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಮುಂದಾಗಿಲ್ಲ ಎಂದು ಆಪಾದಿಸಿದರು.

    ರೈತರಿಗೆ ಬೆಳೆ ಪರಿಹಾರದ ಹಣವನ್ನು ಸಕಾಲದಲ್ಲಿ ನೀಡುತ್ತಿಲ್ಲ. ಕಾಡಿನಿಂದ ನಾಡಿಗೆ ಬರುವ ಕಾಡುಪ್ರಾಣಿಗಳನ್ನು ತಡೆಯಲು ವ್ಯವಸ್ಥಿತವಾದ ಕ್ರಮ ಕೈಗೊಂಡಿಲ್ಲ. ಅನಧಿಕೃತವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಾಕಷ್ಟು ಪ್ರಮುಖ ಸ್ಥಳಗಳಲ್ಲಿ ಅಕ್ರಮ ರೆಸಾರ್ಟ್‌ಗಳು ತಲೆ ಎತ್ತುತ್ತಿವೆ. ಆದರೆ ಅವುಗಳ ನಿಯಂತ್ರಿಸುವ ಬದಲು ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

    ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲೆಯಾಗಿರುವುದರಿಂದ ಜಿಲ್ಲಾಡಳಿತ ಎಚ್ಚೆತ್ತು ಕೂಡಲೇ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷಕ್ಕೆ ತೆರೆ ಎಳೆಯಬೇಕು. ರೈತರು ಅನುಭವಿಸುತ್ತಿರುವ ಸಾಕಷ್ಟು ಸಮಸ್ಯೆಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.

    ಸ್ಥಳಕ್ಕೆ ಆಗಮಿಸಿದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕ್ಷೇತ್ರದ ನಿರ್ದೇಶಕ ರಮೇಶ್‌ಕುಮಾರ್ ಪ್ರತಿಭಟನಾಕಾರರ ಅಹವಾಲು ಆಲಿಸಿ ಮಾತನಾಡಿ, ಕಾಡಂಚಿನ ಪ್ರದೇಶಗಳಿಗೆ ಆನೆಗಳು ಬರದಂತೆ ತಡೆಯಲು ಹೆಡಿಯಾಲ ಹಾಗೂ ಓಂಕಾರ್ ವಲಯ ಅರಣ್ಯ ಪ್ರದೇಶದ ಗಡಿ ಪ್ರದೇಶದಲ್ಲಿ 24 ಕಿ.ಮೀ. ರೈಲ್ವೆ ಕಂಬಿಯ ಬ್ಯಾರಿಕೇಡ್ ಅಳವಡಿಸಲಾಗಿದೆ. ಆನೆಗಳು ನಾಡಿಗೆ ಲಗ್ಗೆಯಿಟ್ಟಾಗ ತಕ್ಷಣ ಕಾಡಿಗೆ ಸೇರಿಸಲು ಪ್ರತ್ಯೇಕ ಟಾಸ್ಕ್‌ಫೋರ್ಸ್ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಎಸಿಎಫ್ ಪರಮೇಶ್, ವಲಯ ಅರಣ್ಯಾಧಿಕಾರಿಗಳಾದ ನಾರಾಯಣ, ನಿವೇದಿತಾ ಮತ್ತಿತರರು ಹಾಜರಿದ್ದರು.

    ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ನೇತ್ರಾವತಿ, ಶಿರಮಳ್ಳಿ ಸಿದ್ದಪ್ಪ, ಸಿಂಗೇಗೌಡ, ಪ್ರಕಾಶ್, ಮಹಾಲಿಂಗು, ಸರಗೂರು ಮತ್ತು ಹೆಡಿಯಾಲ ಸುತ್ತಮುತ್ತಲ ನೂರಾರು ರೈತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts