More

  ಡಿ.1ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ವಿಶ್ವಕರ್ಮ ಸಮುದಾಯದಿಂದ ಪ್ರತಿಭಟನೆ

  ಬೆಂಗಳೂರು: ಎಚ್.ಕಾಂತರಾಜ ನಡೆಸಿದ್ದ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ, ಶುಕ್ರವಾರ (ಡಿ.1) ಮಧ್ಯಾಹ್ನ 12ಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಆಯೋಜಿಸಿದೆ.

  ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ, ನಮ್ಮ ಸಮುದಾಯದ ಪ್ರಮುಖ ಸ್ವಾಮೀಜಿಗಳು ಸೇರಿ 3 ಸಾವಿರ ಮಂದಿ ಆಗಮಿಸುವ ನಿರೀಕ್ಷೆ ಇದೆ. ಪ್ರತಿಭಟನೆ ಮೂಲಕ ವರದಿ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. 2015ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜ ನೇತೃತ್ವದಲ್ಲಿ ಶೈಕ್ಷಣಿಕ, ಸಾಮಾಜಿಕ ಒಳಗೊಂಡ ಜಾತಿಗಣತಿ ಸಮೀಕ್ಷೆ ನಡೆಸಲಾಗಿತ್ತು. ಕೂಡಲೇ ಈ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಬಹಿರಂಗಗೊಳಿಸಬೇಕು ಎಂದರು.

  ವರದಿ ಬಿಡುಗಡೆಯಾದರೆ ಮಾತ್ರ ನಮ್ಮ ಸಮುದಾಯದ ನೈಜ ಜನಸಂಖ್ಯೆ ತಿಳಿಯಲಿದೆ. ಇದರಿಂದಾಗಿ ಸಾಮಾಜಿಕ, ಶೈಕ್ಷಣಿಕವಾಗಿ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ಪಡೆಯಲು ಅನುಕೂಲವಾಗಲಿದೆ. 32 ವರ್ಷಗಳ ಹಿಂದಿನ ವರದಿ ಆಧಾರದಲ್ಲಿ ಸೌಲಭ್ಯ ಪಡೆಯಲಾಗುತ್ತಿದೆ. ಆದರೆ, ನಮಗೆ ಸಿಗಬೇಕಿದ್ದ ಸೌಲಭ್ಯಗಳು ಸರಿಯಾಗಿ ಸಿಗದೆ ವಂಚಿತರಾಗಿದ್ದೇವೆ. ಈಗಿನ ವರದಿ ವೈಜ್ಞಾನಿಕವಾಗಿರಲಿ ಅಥವಾ ಅವೈಜ್ಞಾನಿಕವಾಗಿರಲಿ ಒಟ್ಟಿನಲ್ಲಿ ವರದಿ ಬಿಡುಗಡೆ ಆಗಲೇಬೇಕು. ವರದಿ ಬಹಿರಂಗವಾದ ಬಳಿಕ ಅದರೊಳಗಿನ ಸತ್ಯಾಸತ್ಯತೆ ತಿಳಿದುಕೊಂಡು ಚರ್ಚೆ ನಡೆಸುವುದು ಸೂಕ್ತ. ವರದಿ ಬಿಡುಗಡೆ ಮುನ್ನವೇ ಅನಗತ್ಯವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

  ಇದನ್ನೂ ಓದಿ:ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಜಾಗ ಗುರುತಿಸಿ: ತುಷಾರ್ ಗಿರಿನಾಥ್ ಸೂಚನೆ

  ಸಂವಿಧಾನದ ಪ್ರಕಾರ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಯಬೇಕಾದರೆ ಆಯಾ ಸಮಾಜದ ಜನಸಂಖ್ಯೆ ಆಯಾ ಸಮುದಾಯಗಳಿಗೆ ತಿಳಿಯುವುದು ಮುಖ್ಯ ಹಕ್ಕಾಗಿದೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ವರದಿ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ವಿಶ್ವಕರ್ಮ ಸಮಾಜ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಸಿಎಂಗೆ ಮನವಿ ಸಲ್ಲಿಸುತ್ತೇನೆ. ವರದಿ ಬಿಡುಗಡೆ ಸಂಬಂಧ ಸಿಎಂ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ನಮ್ಮ ಬೆಂಬಲ ಇರುತ್ತದೆ ಎಂದು ಕೆ.ಪಿ. ನಂಜುಂಡಿ ಹೇಳಿದರು. ವಿಶ್ವಕರ್ಮ ಸಮುದಾಯದ ಪ್ರಮುಖ ಮುಖಂಡರಾದ ಲೋಕನಾಥ್ ಆಚಾರ್, ಕೃಷ್ಣಾಚಾರ್, ಲೋಹಿತ್, ಶ್ರೀಧರ್ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts