More

    ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಜಾಗ ಗುರುತಿಸಿ: ತುಷಾರ್ ಗಿರಿನಾಥ್ ಸೂಚನೆ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಯಾ ವಲಯಗಳಲ್ಲಿ ಸಾರ್ವಜನಿಕ ಶೌಚಗೃಹ ಸ್ಥಾಪಿಸುವ ಸಂಬಂಧ ಸ್ಥಳಗಳನ್ನು ಗುರುತಿಸಿ ಪಟ್ಟಿ ನೀಡುವಂತೆ ವಲಯ ಆಯುಕ್ತರುಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದ್ದಾರೆ.

    ಪಾಲಿಕೆ ಕೇಂದ್ರ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದರು. ಜನದಟ್ಟಣೆ ಪ್ರದೇಶ, ಮಾರುಕಟ್ಟೆಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸುವ ಸಂಬಂಧ ತ್ವರಿತವಾಗಿ ಸ್ಥಳ ಗುರುತಿಸಿ ಪಟ್ಟಿ ನೀಡಬೇಕು. ನಗರದಲ್ಲಿ ಈಗಾಗಲೇ 255 ಸ್ಥಳಗಳಲ್ಲಿ ಶೌಚಗೃಹ ನಿರ್ಮಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ಇವುಗಳನ್ನು ನಿರ್ಮಿಸುವ ಸ್ಥಳ ವಿಶಾಲವಾಗಿರಬೇಕು. ನಗರದ ಕೇಂದ್ರ ಪ್ರದೇಶದಲ್ಲಿ ಹೆಚ್ಚಾಗಿ ನಿರ್ಮಿಸಬೇಕು. ನಗರದಲ್ಲಿರುವ ಒಟ್ಟು 393 ಸಾರ್ವಜನಿಕ ಶೌಚಗೃಹಗಳ ಪೈಕಿ 360 ಸಾರ್ವಜನಿಕ ಶೌಚಗೃಹ, 6 ಸಮುದಾಯ ಶೌಚಗೃಹ, 17 ಮಾಡ್ಯೂಲರ್ ಶೌಚಗೃಹ ಹಾಗೂ 10 ಪ್ರೀಕಾಸ್ಟ್ ಶೌಚಾಲಯಗಳಿವೆ ಎಂದರು.

    ಮಹಿಳೆಯರು ಸಂಚರಿಸುವ, ಓಡಾಡುವ ಸ್ಥಳಗಳನ್ನು ಗುರುತಿಸಿ ಹೆಚ್ಚಾಗಿ ಮಹಿಳಾ ಶೌಚಗೃಹ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಯಾವ್ಯಾವ ಪ್ರದೇಶಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ ಎಂಬುದನ್ನು ಗುರುತಿಸಬೇಕು ಎಂದು ಹೇಳಿದ ತುಷಾರ್ ಗಿರಿನಾಥ್, ನಗರದಲ್ಲಿ 229 ಇ- ಶೌಚಗೃಹಗಳಿದ್ದು, ಸೂಕ್ತ ನಿರ್ವಹಣೆ ಇಲ್ಲದ ಸ್ಥಗಿತಗೊಳಿಸಲಾಗಿದೆ. ಇವುಗಳ ನಿರ್ವಹಣೆಗೆ ಕೂಡಲೆ ಟೆಂಡರ್ ಕರೆಯಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ಇದನ್ನೂ ಓದಿ:ಕೇಂದ್ರ ಸರ್ಕಾರದ ಜತೆ ಐತಿಹಾಸಿಕ ಶಾಂತಿ ಒಪ್ಪಂದ; ಶಸ್ತ್ರ ತೊರೆದ ಯುಎನ್​ಎಲ್​ಎಫ್​ ಬಂಡುಕೋರರು

    ಬಸ್ ತಂಗುದಾಣಗಳ ಬಳಿ ಇ-ಶೌಚಗೃಹಗಳನ್ನು ಸ್ಥಾಪಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು. ಸಾಧ್ಯವಾದರೆ ಬಸ್ ತಂಗುದಾಣದಲ್ಲಿ ಇವುಗಳನ್ನು ಅಳವಡಿಸಬೇಕು. ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ಥಾಪಿಸಿರುವ ಶೌಚಗೃಹಗಳನ್ನು ಸಾರ್ವಜನಿಕರಿಗೆ ಉಪಯೋಗಿಸಲು ಅವಕಾಶ ಮಾಡಬೇಕು. ಈ ಸಂಬಂಧ ಕೂಡಲೇ ಆದೇಶ ಹೊರಡಿಸಲಾಗುವುದು ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು. ಘನತ್ಯಾಜ್ಯ ವಿಭಾಗದ ವಿಶೇಷ ಅಯುಕ್ತ ಡಾ. ಕೆ.ಹರೀಶ್ ಕುಮಾರ್, ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ರೆಡ್ಡಿ ಶಂಕರ ಬಾಬು, ವಲಯ ಆಯುಕ್ತರು, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ ಮತ್ತಿತರರಿದ್ದರು.

    ಸಮಿತಿ ರಚನೆ: ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಶೌಚಗೃಹ ನಿರ್ಮಿಸಲು, ನಿರ್ವಹಣೆ ಮಾಡುವ ಬಗ್ಗೆ ಯೋಜನೆ ರೂಪಿಸುವ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಪಾಲಿಕೆಯ ಘನತ್ಯಾಜ್ಯ, ಕಲ್ಯಾಣ, ಎಲ್ಲ ವಲಯ ಆಯುಕ್ತರುಗಳು ಹಾಗೂ ರಸ್ತೆ ಮೂಲಸೌಕರ್ಯ ವಿಭಾಗದ ಪ್ರಧಾನ ಅಭಿಯಂತರರು ಸಮಿತಿಯ ಸದಸ್ಯರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts