More

    ಕೇಂದ್ರ ಸರ್ಕಾರದ ಜತೆ ಐತಿಹಾಸಿಕ ಶಾಂತಿ ಒಪ್ಪಂದ; ಶಸ್ತ್ರ ತೊರೆದ ಯುಎನ್​ಎಲ್​ಎಫ್​ ಬಂಡುಕೋರರು

    ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರದಲ್ಲಿ ಅನೇಕ ತಿಂಗಳುಗಳಿಂದ ನಿರಂತರವಾಗಿ ಹಿಂಸಾಚಾರ ಮುಂದುವರಿದಿದೆ. ಮೀಸಲಾತಿ ವಿವಾದ ಹಿನ್ನೆಲೆಯಲ್ಲಿ ಎರಡು ಪ್ರಮುಖ ಸಮುದಾಯಗಳ ನಡುವೆ ತಲೆದೋರಿದ ಬಿಕ್ಕಟ್ಟಿನಲ್ಲಿ ಅನೇಕ ಕಡೆಗಳಲ್ಲಿ ಹಿಂಸಾಚಾರ ತಲೆದೋರಿ ಸಾವು-ನೋವುಗಳು ಕೂಡ ಸಂಭವಿಸಿವೆ. ಪರಿಸ್ಥಿತಿ ಈಗಲೂ ತಿಳಿಗೊಂಡಿಲ್ಲವಾದರೂ ಬುಧವಾರ ಉತ್ತಮ ಬೆಳವಣಿಗೆಯೊಂದು ನಡೆದಿದೆ.

    ಕೇಂದ್ರ ಸರ್ಕಾರದ ಜತೆ ಮಣಿಪುರದ ಬಂಡುಕೋರರ ಗುಂಪಾದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.

    ಕೇಂದ್ರ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಯುಎನ್‌ಎಲ್‌ಎಫ್ ಸಹಿ ಹಾಕಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಕ್ಸ್‌ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದಾರೆ.

    “ಮಣಿಪುರದ ಅತ್ಯಂತ ಹಳೆಯ, ಕಣಿವೆ ಮೂಲದ ಸಶಸ್ತ್ರ ಗುಂಪು UNLF ಹಿಂಸಾಚಾರವನ್ನು ತ್ಯಜಿಸಲು ಮತ್ತು ಮುಖ್ಯವಾಹಿನಿಗೆ ಸೇರಲು ಒಪ್ಪಿಕೊಂಡಿದೆ. ನಾನು ಅವರನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಗಳಿಗೆ ಸ್ವಾಗತಿಸುತ್ತೇನೆ. ಶಾಂತಿ ಮತ್ತು ಪ್ರಗತಿಯ ಹಾದಿಯ ಅವರ ಪ್ರಯಾಣದಲ್ಲಿ ಶುಭ ಹಾರೈಸುತ್ತೇನೆ” ಎಂದು ಅವರು ಪೋಸ್ಟ್​ನಲ್ಲಿ ಹೇಳಿದ್ದಾರೆ.

    ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಯುಎನ್‌ಎಲ್‌ಎಫ್ ಕಾರ್ಯಕರ್ತರು ತಮ್ಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸುವ ವೀಡಿಯೊವನ್ನು ಕೂಡ ಅಮಿತ್ ಶಾ ಹಂಚಿಕೊಂಡಿದ್ದಾರೆ.

    ಯುಎನ್‌ಎಲ್‌ಎಫ್‌ನ ಅಧ್ಯಕ್ಷ ಲಾಮ್‌ಜಿಂಗ್‌ಬಾ ಖುಂಡೊಂಗ್‌ಬಾಮ್ ಅವರು ಕೂಡ “ನಾವು ಇಂದು ಭಾರತ ಸರ್ಕಾರದೊಂದಿಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ” ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಮೇ 3ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡ ನಂತರ ಕಣಿವೆ ಮೂಲದ ನಿಷೇಧಿತ ಈ ಸಂಘಟನೆಯು ಮೊದಲ ಬಾರಿಗೆ ಸರ್ಕಾರದೊಂದಿಗೆ ಶಾಂತಿ ಮಾತುಕತೆ ಕೈಗೊಂಡಿದೆ.

    ನವೆಂಬರ್ 13 ರಂದು, ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿಯಲ್ಲಿ ಎಂಟು ಮೈತೆಯಿ (“Meitei) ಉಗ್ರಗಾಮಿ ಸಂಘಟನೆಗಳ” ಮೇಲೆ ಅಸ್ತಿತ್ವದಲ್ಲಿರುವ ನಿಷೇಧವನ್ನು ವಿಸ್ತರಿಸಿತ್ತು. ಅಲ್ಲದೆ, ಇವುಗಳನ್ನು “ಕಾನೂನುಬಾಹಿರ ಸಂಘಗಳು” ಎಂದು ಘೋಷಿಸಿತ್ತು. ಈ ನಿಷೇಧಿತ ಗುಂಪುಗಳಲ್ಲಿ ಯುಎನ್‌ಎಲ್‌ಎಫ್ ಕೂಡ ಸೇರಿತ್ತು.

    ಇದಾದ ಕೆಲವು ದಿನಗಳ ನಂತರ ನವೆಂಬರ್ 26 ರಂದು, ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ರಾಜ್ಯ ಸರ್ಕಾರವು ಯುಎನ್‌ಎಲ್‌ಎಫ್‌ ಜತೆ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಹಾದಿಯಲ್ಲಿದೆ ಎಂದು ಘೋಷಿಸಿದ್ದರು.

    ಮಣಿಪುರದ ಮೈತೆಯಿ ಉಗ್ರಗಾಮಿ ಗುಂಪುಗಳ ಮೇಲೆ ನಿಷೇಧವನ್ನು ಜಾರಿಗೊಳಿಸಲು ಸಾಕಷ್ಟು ಆಧಾರವಿದೆಯೇ ಮತ್ತು ನಿರ್ಬಂಧಗಳನ್ನು ಮುಂದುವರಿಸಬೇಕೆ ಎಂದು ನಿರ್ಧರಿಸಲು ನ್ಯಾಯಮಂಡಳಿ ರಚಿಸುವುದಾಗಿ ಮಂಗಳವಾರ ಗೃಹ ಸಚಿವಾಲಯವು ಘೋಷಿಸಿದೆ. ಈ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ನ್ಯಾಯಮಂಡಳಿಯು ಗುವಾಹತಿ ಹೈಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕುಮಾರ್ ಮೇಧಿ ಅವರನ್ನು ಒಳಗೊಂಡಿದ್ದು, ಗುಂಪುಗಳನ್ನು “ಕಾನೂನುಬಾಹಿರ ಸಂಘಟನೆಗಳು” ಎಂದು ಘೋಷಿಸಲು ಮತ್ತು ಅವುಗಳನ್ನು ನಿಷೇಧಿಸಲು ಸಾಕಷ್ಟು ಕಾರಣವಿದೆಯೇ ಎಂಬುದನ್ನು ಪರಿಶೀಲಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts