More

    ಶಿವಾಜಿನಗರ ತಾಂಡಾ ನಿವಾಸಿಗಳಿಂದ ಪ್ರತಿಭಟನೆ

    ಬ್ಯಾಡಗಿ: ರಸ್ತೆಯ ಮೇಲಿನ ಮಣ್ಣಿನ ಗುಡ್ಡೆ ತೆರವುಗೊಳಿಸಿ ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ತಾಲೂಕಿನ ಶಿಡೇನೂರು ಗ್ರಾಮದ ಶಿವಾಜಿನಗರ ತಾಂಡಾ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

    ಶಿಡೇನೂರು ಗ್ರಾಮಕ್ಕೆ ಹೊಂದಿಕೊಂಡ ಶಿವಾಜಿನಗರ ತಾಂಡಾದ ಬಳಿ ಹೊಸ ಬಡಾವಣೆಗೆ ತೆರಳಲು ಸಿಸಿ ರಸ್ತೆ ನಿರ್ವಿುಸಲಾಗಿದೆ. ಆದರೆ, ರಸ್ತೆ ಜಾಗ ತಮಗೆ ಸೇರಿದೆ ಎಂದು ಹೊಲದ ಮಾಲೀಕರೊಬ್ಬರು ರಸ್ಥೆಯಲ್ಲಿ ಗುಂಡಿ ತೆಗೆದು ಮಣ್ಣಿನ ರಾಶಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

    ಶಿವಾಜಿ ನಗರ ತಾಂಡಾದಲ್ಲಿ 20 ವರ್ಷಗಳ ಹಿಂದೆ 50 ಕುಟುಂಬಗಳು ಮನೆ ನಿರ್ವಿುಸಿಕೊಂಡಿವೆ. ಇವರೆಲ್ಲರ ಓಡಾಟಕ್ಕೆ ಇದೊಂದೇ ರಸ್ತೆ ಮಾರ್ಗವಾಗಿದ್ದು, 10 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ವಿುಸಲಾಗಿದೆ. ಆದರೆ, ಈಗ ಆ ಜಾಗ ತನಗೆ ಸೇರಿದ್ದೆಂದು ರೈತರೊಬ್ಬರು ರಸ್ತೆಯಲ್ಲಿ ಜನ ಓಡಾಡದಂತೆ ಜೆಸಿಬಿಯಿಂದ ಗುರುವಾರ ಮಧ್ಯಾಹ್ನ ಗುಂಡಿ ತೋಡಿದ್ದಾರೆ. ಇದರಿಂದ ಗ್ರಾಮಕ್ಕೆ ವಾಹನಗಳು ಬಂದು ಹೋಗಲು ದಾರಿಯಲ್ಲದಂತಾಗಿದೆ. ಗುರುವಾರ ತಡರಾತ್ರಿ ಮಹಿಳೆಗೆ ಹೆರಿಗೆ ನೋವು ಶುರುವಾಗಿ ಆಸ್ಪತ್ರೆಗೆ ತೆರಳಲು ಪರದಾಡಿದ್ದಾರೆ. ಕೂಡಲೆ ನಮಗೆ ರಸ್ತೆ ನಿರ್ವಿುಸಿಕೊಡಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಬಳಿಕ ಪೋಲಿಸರು ಹಾಗೂ ಗ್ರಾಪಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಿಸಿದವರನ್ನು ಕರೆಸಿ ಮಾತುಕತೆಗೆ ಯತ್ನಿಸಿದರು ಆದರೆ, ಸಮಸ್ಯೆ ಬಗೆಹರಿಯಲಿಲ್ಲ.

    ನಿವಾಸಿಗಳಾದ ಸಂತೋಷ ಒಡ್ಡರ, ನೀಲವ್ವ ಒಡ್ಡಿಗೇರಿ, ಚನ್ನವ್ವ ಕಿತ್ತೂರು, ಸುಮಾ ಮಡಿವಾಳರ, ಶಂಭು ನಿಂಗನಗೌಡ್ರ, ರಾಘು ಮಡಿವಾಳರ ಇತರರಿದ್ದರು.

    ಗ್ರಾಮಸ್ಥರ ದೂರನ್ನಾಧರಿಸಿ ಮೇಲಧಿಕಾರಿ ಜತೆಗೆ ಮಾತನಾಡಲಾಗಿದೆ. ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ರಸ್ತೆ ತೆರವುಗೊಳಿಸಲು ಮೂಲ ಮಾಲೀಕರೊಂದಿಗೆ ಮಾತುಕತೆ ನಡೆಸಿ ಇತ್ಯರ್ಥಗೊಳಿಸಲಾಗುವುದು. ಶೀಘ್ರದಲ್ಲೇ ಹದ್ದುಬಸ್ತು ಕೈಗೊಂಡು ಜಾಗದ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು.
    | ಜಿ.ಜಿ. ನಾಯಕ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts