More

    ಚಿಕ್ಕತುಪ್ಪೂರು ನಿವಾಸಿಗಳ ಪ್ರತಿಭಟನೆ

    ಗುಂಡ್ಲುಪೇಟೆ: ತಮ್ಮ ಬಡಾವಣೆಗೆ ಕುಡಿಯುವ ನೀರು ಸರಬರಾಜು ನಿಲ್ಲಿಸುವ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ಎಸ್‌ಟಿ ವರ್ಗದ ನಿವಾಸಿಗಳು ಪ್ರತಿಭಟನೆ ನಡೆಸಿದರು.


    ಗುರುವಾರ ಗ್ರಾಮದ ಬಡಾವಣೆಯಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿ ಬನ್ನಿತಾಳಪುರ ಗ್ರಾಮ ಪಂಚಾಯಿತಿ ಪಿಡಿಒ ಎ.ಎಂ.ಮಹೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ನಿವಾಸಿ ನಾಗರಾಜು ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲದಿದ್ದರೂ ವಾಟರ್‌ಮನ್ ನಿಯೋಜಿಸದೆ ನೀರು ಸರಬರಾಜು ಮಾಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಹಿಂದೆ ಪಿಡಿಒ ಆಗಿದ್ದ ಮಹೇಶ್ ಅವರು ಇ-ಸ್ವತ್ತು ನೀಡಲು ಹಾಗೂ ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಮಾಡಿಕೊಡದೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದರಿಂದ ವರ್ಗಾವಣೆ ಮಾಡಲಾಗಿತ್ತು. ಆದರೆ ಈಗ ಅವರೇ ಮತ್ತೆ ಪ್ರಭಾರ ಅಧಿಕಾರ ವಹಿಸಿಕೊಂಡು ಗ್ರಾಮಸ್ಥರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಳೆದ 15 ದಿನಗಳಿಂದಲೂ ಬಡಾವಣೆಗೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಿದ್ದಾರೆ. ಇದರಿಂದ ಕುಡಿಯುವ ನೀರಿಗೆ ಅಕ್ಕಪಕ್ಕದ ಪಂಪ್‌ಸೆಟ್‌ಗಳನ್ನು ಅವಲಂಬಿಸಬೇಕಾಗಿದೆ. ಗೃಹಬಳಕೆಗೆ ಮಳೆನೀರು ಸಂಗ್ರಹಿಸಿ ಬಳಸಲಾಗುತ್ತಿದೆ. ಮಹೇಶ್ ಎರಡು ಪಂಚಾಯಿತಿಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದು, ಗ್ರಾಮ ಪಂಚಾಯಿತಿ ಕಚೇರಿಗೆ ತಿಂಗಳಾದರೂ ಬರುತ್ತಿಲ್ಲ. ಮೊಬೈಲಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಇ-ಸ್ವತ್ತು ಮಾಡಿಸಿಕೊಳ್ಳಲು ಅರ್ಜಿ ಕೊಟ್ಟು ಆರು ತಿಂಗಳಾದರೂ ಇನ್ನು ಮಾಡಿಕೊಟ್ಟಿಲ್ಲ. ಅವರ ಏಜೆಂಟರ ಮೂಲಕ ಹಣ ಕೊಟ್ಟರೆ ಮಾತ್ರ ಅಂಥ ಅರ್ಜಿಗಳನ್ನು ಪರಿಗಣಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಳೆದ ಮೂರು ವರ್ಷಗಳಿಂದಲೂ ವಾರ್ಡ್ ಸಭೆ ಗ್ರಾಮಸಭೆ ನಡೆಸದೆ ನಿವಾಸಿಗಳನ್ನು ಕಡೆಗಣಿಸಿದೆ. ಈ ಬಗ್ಗೆ ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts