More

    ಕಮಿಷನ್​ ಹೆಚ್ಚಿಸಲು ನ್ಯಾಯಬೆಲೆ ಅಂಗಡಿ ಮಾಲೀಕರ ಪ್ರತಿಭಟನೆ; ಬೇರೆ ರಾಜ್ಯಗಳಲ್ಲಿ​ ಎಷ್ಟು ಕೊಡ್ತಾರೆ..?

    ಬೆಂಗಳೂರು: ಕಮಿಷನ್ ಹೆಚ್ಚಳ, ಸಗಟು ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ಆಧಾರಿತ ತೂಕದ ಯಂತ್ರ ಅಳವಡಿಕೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ಮಂಗಳವಾರ (ಡಿ.27) ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

    ಅನ್ನಭಾಗ್ಯ ಯೋಜನೆಯಡಿ ಪ್ರತಿ ತಿಂಗಳು ಪಡಿತರ ವಿತರಣೆಗಾಗಿ ರಾಜ್ಯ ಸರ್ಕಾರ, ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಕ್ವಿಂಟಾಲ್‌ಗೆ 100 ರೂ. ಕಮಿಷನ್​ ನೀಡುತ್ತಿದೆ. ಇದನ್ನು 250 ರೂ.ಹೆಚ್ಚಿಸಬೇಕು ಎಂಬುದು ಮಾಲೀಕರ ಪ್ರಮುಖ ಬೇಡಿಕೆ.

    ‘ಗೋವಾದಲ್ಲಿ ಕ್ವಿಂಟಾಲ್‌ಗೆ 300 ರೂ, ಮಹಾರಾಷ್ಟ್ರದಲ್ಲಿ 230 ರೂ ಹಾಗೂ ಕೇರಳದಲ್ಲಿ 210 ರೂ.ನೀಡಲಾಗುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಕೇವಲ 100 ರೂ. ಸಿಗುತ್ತಿದೆ. ಕಮಿಷನ್ ಹೆಚ್ಚಳ ಮಾಡುವಂತೆ ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದರೂ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಹಾಗಾಗಿ, ಸರ್ಕಾರದ ಮೇಲೆ ಒತ್ತಡ ಹೇರಲು ಸಾವಿರಾರು ಮಾಲೀಕರು ಸೇರಿಕೊಂಡು ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಹೇಳಿದ್ದಾರೆ.

    ನ್ಯಾಯಬೆಲೆ ಅಂಗಡಿಗಳ ಮಾಲೀಕರ ಹೆಸರಿನಲ್ಲಿ ಬೇರೆ ಯಾರೋ ಅನಾಮಿಕ ವ್ಯಕ್ತಿಗಳು, ಪರವಾನಗಿ ನವೀಕರಣ ಮಾಡದ ನ್ಯಾಯಬೆಲೆ ಅಂಗಡಿಗಳು, ಕನ್‌ಜ್ಯೂಮರ್ಸ್‌ ಕ್ರೆಡಿಟ್ ಸೊಸೈಟಿಗಳು (ಸಿಸಿಎಸ್) ಅಕ್ರಮವಾಗಿ ಪಡಿತರವನ್ನು ದುರ್ಬಳಕೆ ಮಾಡುತ್ತಿವೆ. ಇದಕ್ಕೆ ಗೋಡೌನ್ ವ್ಯವಸ್ಥಾಕರು ಹಾಗೂ ಆಹಾರ ನಿರೀಕ್ಷಕರ ಸಹಕಾರ ಕೂಡ ಇದೆ. ಹಾಗಾಗಿ, ಈ ಅಕ್ರಮ ತಡೆಗೆ ಸಗಟು ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ಆಧಾರಿತ ತೂಕದ ಯಂತ್ರ ಅಳವಡಿಸಬೇಕು. ಅಲ್ಲದೆ, ಬಯೋಮೆಟ್ರಿಕ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಘದ ಅಧ್ಯಕ್ಷ ವಿವರಿಸಿದರು.

    ಸರ್ಕಾರ, ರೇಷನ್ ಕಾರ್ಡ್‌ಗೆ ಆಧಾರ್ ಜೋಡಣೆ (EKYC) ನೋಂದಣಿಗಾಗಿ ನೀಡಬೇಕಾಗಿರುವ 23 ಕೋಟಿ ರೂ. ಹಲವು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ. ಕೂಡಲೇ ಈ ಬಾಕಿ ಉಳಿದ ಹಣವನ್ನು ಆಹಾರ ಇಲಾಖೆ ಬಿಡುಗಡೆ ಮಾಡಬೇಕು ಎಂದು ಕೃಷ್ಣಪ್ಪ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts