More

    ಸಾಂಕ್ರಾಮಿಕ ರೋಗ: ಅಗತ್ಯ ಕ್ರಮಕ್ಕೆ ಸೂಚನೆ

    ಮಡಿಕೇರಿ: ಜಿಲ್ಲೆಯಲ್ಲಿ ಜಾತ್ರೆ, ರಥೋತ್ಸವ, ಮದುವೆ ಸಮಾರಂಭಗಳು, ದರ್ಗಾಗಳಲ್ಲಿ ಉರೂಸ್‌ಗಳು ಮತ್ತು ಊರು ಹಬ್ಬಗಳು ಹೆಚ್ಚಾಗಿ ನಡೆಯುತ್ತಿದ್ದು, ಇಂತಹ ಆಚರಣೆಯ ಸಂದರ್ಭದಲ್ಲಿ ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಸಾಂಕ್ರಾಮಿಕ ರೋಗಗಳು ಉಲ್ಭಣಗೊಳ್ಳದಂತೆ ಎಲ್ಲಾ ಇಲಾಖೆಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ಆಚರಣೆಯ ಸಂದರ್ಭದಲ್ಲಿ ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಕರುಳುಬೇನೆ, ಕಾಲಾರಾ, ವಿಷಮಶೀತ ಜ್ವರ, ಕಾಮಾಲೆ(ಜಾಂಡೀಸ್) ಮತ್ತಿತರ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಮತ್ತು ಹರಡುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ಆದ್ದರಿಂದ ಹೋಟಲ್‌ಗಳಲ್ಲಿ ಸಾರ್ವಜನಿಕರಿಗೆ ಶುದ್ಧವಾದ ಬಿಸಿ ಆಹಾರ ಮತ್ತು ಕುಡಿಯಲು ಬಿಸಿ ನೀರನ್ನು ಉಪಯೋಗಿಸುವಂತೆ ಮತ್ತು ಹೋಟೆಲ್‌ಗಳಲ್ಲಿನ ಘನ ತ್ಯಾಜ್ಯ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.


    ಸಂಬಂಧಪಟ್ಟ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ಮೂಲಗಳ ಮಾಹಿತಿ ಕಲೆ ಹಾಕಿ, ಎಲ್ಲಾ ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು. ಸಾರ್ವಜನಿಕರಿಗೆ ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮವಹಿಸಬೇಕು. ಕುಡಿಯಲು ಯೋಗ್ಯವಲ್ಲವೆಂದು ಧೃಢಪಟ್ಟ ನೀರಿನ ಮೂಲಗಳನ್ನು ಕೂಡಲೇ ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಹಕಾರದೊಂದಿಗೆ ಸ್ವಚ್ಚಗೊಳಿಸಿ ಕ್ಲೋರಿನೇಷನ್ ಮಾಡಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕ್ರಮವಹಿಸಬೇಕು ಎಂದು ತಿಳಿಸಿದ್ದಾರೆ.


    ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್ ಮತ್ತು ಅಂಗಡಿಗಳ ತಪಾಸಣೆ ನಡೆಸಿ ಆಹಾರ ಮತ್ತು ನೀರಿನ ಗುಣಮಟ್ಟದ ಸುರಕ್ಷತೆಯ ಬಗ್ಗೆ ಕ್ರಮವಹಿಸಬೇಕು. ರಸ್ತೆ/ಬೀದಿ ಬದಿಯಲ್ಲಿ ಕತ್ತರಿಸಿ ಮಾರಾಟ ಮಾಡುವ ಹಣ್ಣು-ಹಂಪಲುಗಳನ್ನು ತೆರೆದ ಆಹಾರ ಪದಾರ್ಥಗಳನ್ನು ಸೇವಿಸದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವಾಗ ಮತ್ತು ಸೀನುವಾಗ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.


    ಜಾತ್ರೆ, ಊರುಸ್ ಹಾಗೂ ಸಾಮಾಜಿಕ ಉತ್ಸವಗಳ ಸಂದರ್ಭಗಳಲ್ಲಿ ಆರೋಗ್ಯ ಇಲಾಖೆಯಿಂದ ಆರೋಗ್ಯ ಮಾಹಿತಿ, ವಸ್ತು ಮಾಹಿತಿ, ಶಿಕ್ಷಣ ಸಂವಹನ ಪ್ರದರ್ಶನ ಏರ್ಪಡಿಸಿ ಸಾರ್ವಜನಿಕರಿಗೆ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಶಿಕ್ಷಣ ನೀಡಬೇಕು. ನಿರ್ದಿಷ್ಟವಾದ ರೋಗ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗದಂತೆ ಜಾಗ್ರತೆವಹಿಸಿ, ಸಾರ್ವಜನಿಕರು ಇದಕ್ಕೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಕ್ತ ಸಹಕಾರವನ್ನು ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts