More

    ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಹಾಗೂ ಸ್ನೇಹಜೀವಿ ಟೈಲರ್‌ಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಟನೆ

    ಮೈಸೂರು: ಟೈಲರ್ಸ್ ಕ್ಷೇಮನಿಧಿ ಮಂಡಳಿ ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಹಾಗೂ ಸ್ನೇಹಜೀವಿ ಟೈಲರ್‌ಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.


    ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಕೋಟೆ ಆಂಜನೇಯ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.


    ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ 10 ಲಕ್ಷಕ್ಕೂ ಹೆಚ್ಚು ಸ್ತ್ರೀ-ಪುರುಷರಿಗೆ ಜೀವನ ಭದ್ರತೆ ಒದಗಿಸಲು ಟೈಲರ್ ಕ್ಷೇಮನಿಧಿ ಮಂಡಳಿ ರಚಿಸುವಂತೆ 23 ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಶಾಂತಿಯುತ ಪ್ರತಿಭಟನೆ ಮೂಲಕ ಕೇಂದ್ರ, ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.


    ದೇಶಕ್ಕೆ ಸ್ವಾತಂತ್ರ್ಯ ದೊರೆತು 75ರ ಸಂಭ್ರಮದಲ್ಲಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ನಮ್ಮ ನ್ಯಾಯೋಚಿತ ಹೋರಾಟಕ್ಕೆ ಜನತೆ ಸಹಕಾರ ನೀಡಬೇಕು. ಹೊಲಿಗೆ ಕೆಲಸಗಾರರ ಹೆಣ್ಣುಮಕ್ಕಳಿಗೆ ವಿವಾಹಧನ ನೀಡಬೇಕು. ಮಹಿಳಾ ಹೊಲಿಗೆ ಕೆಲಸಗಾರರಿಗೆ ವಿವಾಹಧನ ಮತ್ತು ಹೆರಿಗೆಭತ್ಯೆ ನೀಡಬೇಕು. ಮನೆ ಕಟ್ಟಲು ಧನಸಹಾಯ, ಕಡಿಮೆ ಬಡ್ಡಿಯ ಸಾಲ ನೀಡಬೇಕು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡಬೇಕೆಂದು ಒತ್ತಾಯಿಸಿದರು.


    ನಮ್ಮ ಬೇಡಿಕೆ ಸಾಕಾರಗೊಳಿಸಲು ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ರಚಿಸಿರುವುದು ಸಂತಸದ ವಿಷಯ. ಆದರೆ, ಮುಖ್ಯ ಬೇಡಿಕೆಯಾದ ಭವಿಷ್ಯನಿಧಿ ಹಾಗೂ 60 ವರ್ಷ ತುಂಬಿದ ಟೈಲರ್‌ಗಳಿಗೆ ಮಾಸಿಕ ಪಿಂಚಣಿ ಜಾರಿ ಮಾಡುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ. 15 ದಿನಗಳೊಳಗೆ ಸರ್ಕಾರ ನ್ಯಾಯ ಒದಗಿಸಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾದರೆ ರಾಜ್ಯಾದ್ಯಂತ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.


    ಅಸೋಸಿಯೇಷನ್ ಅಧ್ಯಕ್ಷ ಚನ್ನನಾಯಕ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದೇಗೌಡ, ಮುಖಂಡರಾದ ಆರ್.ಎನ್.ನಾಗರಾಜ್, ಜನಾರ್ದನ್, ತಾರಾ, ಮರಿಸ್ವಾಮಿ, ಎಚ್.ಕೆ. ಪ್ರದೀಪ್, ಸಿದ್ದೇಗೌಡ, ಎಸ್. ಸೋಮಶೇಖರ್, ದೇವರಾಜ್, ಎಸ್. ಶಂಕರ್, ಪಿ. ಕುಮಾರ್, ಕೆಂಪೇಗೌಡ, ಶಿವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts