More

    ಹಳೇ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ; ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್​​ ಭರವಸೆಗೆ ಒತ್ತಾಯ

    ಬೆಂಗಳೂರು: ಹಳೇ ಪಿಂಚಣಿ ಪದ್ಧತಿ ಮುಂದುವರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಸೋಮವಾರ ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದೆ.
    ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಸರ್ಕಾರಿ ನೌಕರರು ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿ ‘ಮಾಡು ಇಲ್ಲವೇ ಮಡಿ, ಅನಿರ್ದಿಷ್ಟಾವಧಿ ಹೋರಾಟ’ ಧ್ಯೇಯದೊಂದಿಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

    ಇದೇ ವೇಳೆ ಎನ್‌ಎಂಒಪಿಎಸ್ ರಾಷ್ಟ್ರೀಯ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಎನ್‌ಪಿಎಸ್ ರದ್ದುಪಡಿಸುವಂತೆ ಒತ್ತಾಯಿಸಿ ಹಲವು ಹೋರಾಟ ಮಾಡುತ್ತ ಬಂದಿದ್ದೇವೆ. ಇದರ ಫಲವಾಗಿ ರಾಜಸ್ಥಾನ, ಛತ್ತೀಸ್‌ಗಢ, ಪಂಜಾಬ್ ಮತ್ತು ಜಾರ್ಖಂಡ್‌ನಲ್ಲಿ ಎನ್‌ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ತರಲಾಗಿದೆ. ಪ್ರಸ್ತುತ ಕರ್ನಾಟಕ ಸರ್ಕಾರ ಸಹ ಹಳೇ ಪಿಂಚಣಿ ಪದ್ಧತಿಯನ್ನು ಮತ್ತೆ ಜಾರಿಗೆ ತರಬೇಕು. ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರನ್ನು ಕಾಪಾಡಬೇಕು. ಅಲ್ಲಿಯವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.

    ಇದೆ ವೇಳೆ ಎನ್‌ಪಿಎಸ್ ರಾಜಾಧ್ಯಕ್ಷ ಶಾಂತಾರಾಮ್ ಮಾತನಾಡಿ, ಹೊಸ ಪಿಂಚಣಿ ಪದ್ಧತಿ ಸರ್ಕಾರಿ ನೌಕರರಿಗೆ ಮರಣ ಶಾಸನವಾಗಿದೆ. ಸರ್ಕಾರಿ ನೌಕರರ ವೇತನದಲ್ಲಿ ಕಡಿತ ಮಾಡಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಜೂಜಾಟಕ್ಕೆ ಪಣವಿಟ್ಟಿದ್ದಾರೆ. 2018ರ ಏಪ್ರಿಲ್‌ರಿಂದ ನಿವೃತ್ತಿ ಮತ್ತು ಮರಣ ಉಪಧನ ಜಾರಿ ಮಾಡಲಾಗಿದೆ. 2022ರ ಮೇ 30ರ ಸರ್ಕಾರದ ಆದೇಶದ ಮೂಲಕ ಮರಣ ಹೊಂದಿರುವ ನೌಕರರ ಪಾಲಿನ ವಂತಿಕೆ ಹಾಗೂ ಅದರ ಮೇಲಿನ ಲಾಭಾಂಶವನ್ನು ಅವರ ಅವಲಂಭಿತರಿಗೆ ಒದಗಿಸುವಂತೆ ಮಾಡಲಾಗಿದೆ. ಆದರೆ, ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ನಿವೃತ್ತಿಯಾದ ಮೇಲೆ 900 ರೂ. ಪಿಂಚಣಿ ಪಡೆಯುತ್ತಿದ್ದಾರೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಧ್ಯಾಕಾಲದ ಬದುಕಿಗೆ ಕನಿಷ್ಟ ಭದ್ರತೆ ಒದಗಿಸುವಲ್ಲಿ ಎನ್‌ಪಿಎಸ್ ವಿಫಲವಾಗಿದೆ. ರಾಜ್ಯ ಸರ್ಕಾರದವರು ಎನ್‌ಪಿಎಸ್ ಬದಲಾಯಿಸಲು ಸಾಧ್ಯವಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ, ಇದೀಗ ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಒಪಿಎಸ್ ಘೋಷಣೆ ಮಾಡಿವೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಸಹ ಒಪಿಎಸ್ ಜಾರಿಗೆ ತರಬೇಕೆಂದು ಶಾಂತರಾಮ್ ಒತ್ತಾಯಿಸಿದರು. ಎನ್‌ಎಂಒಪಿಎಸ್ ಪ್ರಧಾನ ಕಾರ್ಯದರ್ಶಿ ಸ್ಥಿತಪ್ರಜ್ಞಾ, ಮಾಜಿ ಎಂಎಲ್‌ಸಿ ಶ್ರೀಕಂಠೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಹಳೇ ಪಿಂಚಣಿ ಪದ್ಧತಿಯಿಂದ ಸರ್ಕಾರಿ ನೌಕರರಿಗೆ ಆರ್ಥಿಕ ಭದ್ರತೆ ಇತ್ತು. ಆದರೆ, ಎನ್‌ಪಿಎಸ್‌ನಿಂದ ಅಭದ್ರತೆ ಕಾಡುತ್ತಿದೆ. ಒಪಿಎಸ್ ಜಾರಿಗೆ ತರುವುದಾಗಿ ರಾಜಕೀಯ ಪಕ್ಷಗಳು ಚುನಾವಣೆ ಪ್ರನಾಳಿಕೆಯಲ್ಲಿ ಘೋಷಣೆ ಮಾಡಬೇಕು.
    | ಬರಗೂರು ರಾಮಚಂದ್ರಪ್ಪ, ಸಾಹಿತಿ

    ಸರ್ಕಾರಿ ನೌಕರರ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಅವರಿಗೆ ಯಾರು ಅಧಿಕಾರ ಕೊಟ್ಟವರು? ಸಂಬಳವನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುವವರಿಗೆ ಪಿಂಚಣಿ ಸಿಗದೆ ಹೋದಾಗ ಸಂಧ್ಯಾಕಾಲದಲ್ಲಿ ಸಾಯಬೇಕಾ?
    | ರಮೇಶ್ ಹಾನಗಲ್

    ಸಂಧ್ಯಾಕಾಲದಲ್ಲಿ ಜೀವನ ನಡೆಸಲು ಸುರಕ್ಷತೆ ಬೇಕು. 30 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಕೊನೆಯ ಕಾಲದಲ್ಲಿ ಬಿಡಿಗಾಸಿನಲ್ಲಿ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ. ನಮಗೆ ಹಳೇ ಪಿಂಚಣಿ ಪದ್ಧತಿ ಬೇಕು.
    | ಮಂಜುಳಾ, ಶಿಕ್ಷಣ ಇಲಾಖೆ, ಧಾರವಾಡ

    50 ಸಾವಿರದಿಂದ 1 ಲಕ್ಷ ರೂ. ಸಂಬಳ ಪಡೆಯುವ ನೌಕರ, ನಿವೃತ್ತಿ ಬಳಿಕ 800 ರೂಪಾಯಿಯಿಂದ 3 ಸಾವಿರ ರೂ. ಪಿಂಚಣಿ ಪಡೆದರೆ ಯಾವ ರೀತಿ ಜೀವನ ಸಾಗಿಸಬೇಕು.
    | ಪ್ರಭು ರಾಮನಗರ

    ಹಳೇ ಪಿಂಚಣಿ ಪದ್ಧತಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ; ಚುನಾವಣಾ ಪ್ರಣಾಳಿಕೆಯಲ್ಲಿ ಒಪಿಎಸ್​​ ಭರವಸೆಗೆ ಒತ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts