More

    ರೈತರು, ಕಾರ್ಮಿಕರಿಂದ ಪ್ರತಿಭಟನೆ

    ಬ್ಯಾಡಗಿ: ಉದ್ಯೋಗ ಖಾತ್ರಿ ಯೋಜನೆಯಡಿ ವರ್ಷಪೂರ್ತಿ ಕೆಲಸ ಕೊಡುವುದು, ತಾಲೂಕನ್ನು ಬರಗಾಲ ಪಟ್ಟಿಗೆ ಸೇರ್ಪಡೆ, ಗೃಹಲಕ್ಷ್ಮಿ ಯೋಜನೆಯ ಎಲ್ಲ ಯಜಮಾನಿಯರಿಗೆ ಹಣ ಜಮೆಗೆ ಒತ್ತಾಯಿಸಿ ಅಸಂಘಟಿತ ರೈತ ಕೂಲಿ ಕಾರ್ಮಿಕ ಸಂಘಟನೆ ಹಾಗೂ ತಾಲೂಕು ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

    ಈ ವೇಳೆ ಮಾತನಾಡಿದ ರೈತ ಕಾರ್ಮಿಕ ಮುಖಂಡರಾದ ಕವಿತಾ ಮಳ್ಳಪ್ಪನವರ, ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯ 100 ಕೂಲಿ ದಿನಗಳು ಮುಗಿದು, ಕೂಲಿಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಎರಡು ವರ್ಷಗಳಿಂದ ಕೂಲಿ ದಿನ 150ಕ್ಕೆ ಏರಿಸುವ ಭರವಸೆ ಈಡೇರಿಲ್ಲ. ಕೂಡಲೆ ತಾಲೂಕನ್ನು ಬರಗಾಲ ಪಟ್ಟಿಗೆ ಸೇರಿಸಿ, ರೈತರಿಗೆ ಪರಿಹಾರ, ಕೂಲಿಕಾರರಿಗೆ ಉದ್ಯೋಗಕ್ಕೆ ಒತ್ತು ನೀಡಬೇಕು. ಗೃಹಲಕ್ಷ್ಮಿ ಯೋಜನೆಯಲ್ಲಿ ಆಧಾರ್, ಪಡಿತರ ಚೀಟಿಯ ನೆಪದಿಂದ ಕುಟುಂಬದ ಯಜಮಾನಿಯರಿಗೆ ಹಣ ಜಮೆಯಾಗಿಲ್ಲ. ಪಡಿತರ ತಿದ್ದುಪಡಿ ಸಾಫ್ಟ್‌ವೇರ್ ಬದಲಿಸಬೇಕು. ಕಳೆದ ತಿಂಗಳ ಹಣ ಹಾಕಬೇಕು. ರಾಜ್ಯ ಸರ್ಕಾರ ಕೃಷಿ ಸಮ್ಮಾನ್ ಯೋಜನೆಯಲ್ಲಿ 4 ಸಾವಿರ ರೂಪಾಯಿ ಮಂಜೂರು ಮಾಡಬೇಕು. ಇಲ್ಲವಾದ್ರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

    ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬರಗಾಲದಿಂದಾಗಿ ರೈತರ ಬದುಕು ತೀವ್ರ ತೊಂದರೆಯಲ್ಲಿದೆ. ರೈತರಿಗೆ ಬೆಳೆಯಿಲ್ಲ, ಕೂಲಿಯಿಂದಲೆ ಜೀವನ ನಿರ್ವಹಣೆ ಮಾಡುವ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಇಂದಿನ ದುಸ್ಥಿತಿಗೆ ರೈತರೂ ಗುಳೆ ಹೋಗುವಂತಾಗಿದೆ. ಬರಗಾಲ ಪಟ್ಟಿಯಲ್ಲಿ ಬ್ಯಾಡಗಿ ಸೇರಿಸಲು ಸರ್ಕಾರ ಮೀನಮೇಷ ಮಾಡುತ್ತಿದೆ. ಸ್ಥಳೀಯ ಶಾಸಕರು ತಮ್ಮ ಸರ್ಕಾರದ ವಿರುದ್ಧ ಮಾತನಾಡದೆ, ಮೌನ ಧೋರಣೆ ತಾಳಿದ್ದಾರೆ. ನಾವು ಆಯ್ಕೆ ಮಾಡಿದ ಶಾಸಕರು ರೈತ ಪರ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಕುರಿತು ಕೂಡಲೆ ಶಾಸಕರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಬೇಕು. ಬರಗಾಲ ಪಟ್ಟಿಗೆ ಸೇರಿಸಲು ಒತ್ತಡ ಹಾಕಬೇಕು. ಅಲ್ಲಿಯವರೆಗೂ ತಾಲೂಕಿನ ಯಾವುದೇ ಕಾರ್ಯಕ್ರಮಕ್ಕೆ ಆಗಮಿಸಿದರೂ ರೈತ ಸಂಘಟನೆ ಅಲ್ಲಿಗೆ ತೆರಳಿ ಸಮಾರಂಭಕ್ಕೆ ಅಡ್ಡಿಪಡಿಸುವ ಮೂಲಕ ಧಿಕ್ಕಾರ ಕೂಗಲಾಗುವುದು. ತಹಸೀಲ್ದಾರರು, ಕೃಷಿ ಇಲಾಖೆ ಅಧಿಕಾರಿಗಳು ಬರಗಾಲ ಕುರಿತು ನೈಜ ಮಾಹಿತಿ ನೀಡಿದರೂ, ಬ್ಯಾಡಗಿ ತಾಲೂಕಿಗೆ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಎರಡ್ಮೂರು ದಿನದಲ್ಲಿ ನ್ಯಾಯ ಸಿಗದಿದ್ದಲ್ಲಿ ಶಾಸಕರ ನಿವಾಸ ಎದುರು ಧರಣಿಗೆ ಹಮ್ಮಿಕೊಳ್ಳಲು ನಿರ್ಧರಿಸುತ್ತೇವೆ ಎಂದು ಎಚ್ಚರಿಸಿದರು.

    ಇದಕ್ಕೂ ಮುನ್ನ 300ಕ್ಕೂ ಹೆಚ್ಚು ರೈತರು ಕೆಸಿಸಿ ಬ್ಯಾಂಕ್‌ನಿಂದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಬೇಡಿಕೆ ಈಡೇರಿಸುವಂತೆ ರಸ್ತೆ ಮೇಲೆ ಪ್ರತಿಭಟನೆ ನಡೆಸಿದರು.

    ರೈತ ಮುಖಂಡರಾದ ರುದ್ರಗೌಡ್ರ ಕಾಡನಗೌಡ್ರ, ಗಂಗಣ್ಣ ಎಲಿ, ಕಿರಣ ಗಡಿಗೋಳ, ಚಿಕ್ಕಪ್ಪ ಛತ್ರದ, ಬಸವರಾಜ ಸಂಕಣ್ಣನವರ, ಜಾನ ಪುನೀತ್, ನಂಜುಂಡಯ್ಯ ಹಾವೇರಿ ಮಠ, ಶೇಖಪ್ಪ ಕಾಶಿ, ಪರಮೇಶಪ್ಪ ಹಿತ್ತಲಮನಿ, ನಾಗಪ್ಪ ಕೊತ್ತಂಬರಿ, ಬಸವರಾಜ ಹಡಪದ, ಶಿವಪ್ಪ ಮಾಸಣಗಿ, ಗೀತಾ ದೊಡ್ಡಮನಿ, ಶಕುಂತಲಾ ದಮ್ಮಳ್ಮಿ, ಬಸಮ್ಮ ಬಡಿಗೇರ, ದೇವಕ್ಕ ಹೊಸಳ್ಳಿ, ಫಿರಾಂಬಿ ಕಾಗಿನೆಲಿ, ಬೂಬು ಕಲ್ಲೇರ, ಜಯಮ್ಮ ಬೂದಿಹಾಳ, ಶ್ವೇತಾ ಗುದಗಿ, ಹನುಮವ್ವ ಬಣಕಾರ, ಶೈಲವ್ವ ಕೆ. ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts