More

    ದಲಿತ ಯುವಕನ ಹತ್ಯೆ ಖಂಡಿಸಿ ಪ್ರತಿಭಟನೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಹಿಂದು ಜಾಗರಣಾ ವೇದಿಕೆ ಪಟ್ಟು

    ನೆಲಮಂಗಲ: ತಾಲೂಕಿನ ಬಸವನಹಳ್ಳಿ ದಲಿತ ಯುವಕ ಲಕ್ಷ್ಮೀಪತಿ (24) ಹತ್ಯೆ ಖಂಡಿಸಿ ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

    ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದ ಬಳಿ ಬುಧವಾರ ಸಮಾವೇಶಗೊಂಡ ವೇದಿಕೆ ಮತ್ತು ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.

    ಹಿಂದು ಜಾಗರಣಾ ವೇದಿಕೆ ಪ್ರಾಂತ ಕಾರ್ಯದರ್ಶಿ ಜಿ. ಬಸವರಾಜು ಮಾತನಾಡಿ, ಅನ್ಯಧರ್ಮದ ಯುವತಿಯನ್ನು ದಲಿತ ಯುವಕನೊಬ್ಬ ಪ್ರೀತಿಸಿದ್ದ ಎಂದು ಆತನನ್ನು ಕೊಂದಿರುವುದು ಅಪರಾಧ. ಆರೋಪಿ ಕುಟುಂಬದವರು ಲಕ್ಷ್ಮೀಪತಿ ಕುಟುಂಬಕ್ಕೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಆದ್ದರಿಂದ, ತಾಲೂಕು ಆಡಳಿತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

    ಮೃತನ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಿಸುವ ಜತೆಗೆ ಸಮಾಜದ ಅಶಾಂತಿಗೆ ಕಾರಣವಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವಂತೆ ಮಾಡಬೇಕು ಎಂದು ಮಾಜಿ ಶಾಸಕ ಎಂ.ವಿ. ನಾಗರಾಜು ಒತ್ತಾಯಿಸಿದರು. ಅಲ್ಲದೆ ಮೃತ ಲಕ್ಷ್ಮೀಪತಿ ಕುಟುಂಬದವರಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಪರಿಹಾರ ನೀಡಿದರು.

    ತಹಸೀಲ್ದಾರ್‌ಗೆ ಮನವಿ: ಪ್ರಕರಣದಡಿ ಬಂಧಿಸಿರುವ ನಾಲ್ಕು ಮಂದಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮೃತನ ಕುಂಟುಂಬಕ್ಕೆ ಸರ್ಕಾರದಿಂದ 50 ಲಕ್ಷ ರೂ. ಪರಿಹಾರಧನ ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು. ಕುಟುಂಬದ ಜೀವನೋಪಾಯಕ್ಕಾಗಿ 10 ಎಕರೆ ಸರ್ಕಾರಿ ಜಾಗವನ್ನು ಮಂಜೂರು ಮಾಡಬೇಕು ಎಂದು ಕೋರಿ ತಹಸೀಲ್ದಾರ್ ಎಂ. ಶ್ರೀನಿವಾಸ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.

    ಅಖಿಲ ಭಾರತ ಭೋವಿ ಸಮಾಜದ ಅಧ್ಯಕ್ಷ ವೆಂಕಟೇಶ್ ಮೌರ್ಯ, ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಎನ್. ರಾಮ್, ನಗರ ಅಧ್ಯಕ್ಷ ರವಿ, ತಾಲೂಕು ಪ್ರಧಾನ ಕಾರ್ಯದರ್ಶಿ ವಕೀಲ ರವಿಕುಮಾರ್, ನೆ.ಯೋ. ಪ್ರಾಧಿಕಾರ ಅಧ್ಯಕ್ಷ ಎಸ್. ಮಲ್ಲಯ್ಯ, ನಗರಸಭೆ ಸದಸ್ಯ ಎನ್. ಗಣೇಶ್, ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಸತೀಶ್, ಜಿಲ್ಲಾ ಉಪಾಧ್ಯಕ್ಷ ಎ. ರಾಹುಲ್ ಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಸ್ನೇಕ್ ಅರುಣ್, ಮುಖಂಡರಾದ ಎಚ್. ವೆಂಕಟೇಶ್, ಮಂಜುನಾಥ್, ರಾಮಕೃಷ್ಣಪ್ಪ, ಎಂ.ಎಂ. ಗೌಡ, ವಸಂತ್‌ಕುಮಾರ್, ರಾಮಮೂರ್ತಿ, ರಾಜಮ್ಮ ಪ್ರಕಾಶ್ ಮತ್ತಿತರರು ಇದ್ದರು.

    ಘಟನೆ ಹಿನ್ನೆಲೆ: ನೆಲಮಂಗಲ ತಾಲೂಕಿನ ಬಸವನಹಳ್ಳಿ ನಿವಾಸಿ ಲಕ್ಷ್ಮೀಪತಿ ಇಸ್ಮಾಂಪುರ ಅನ್ಯಧರ್ಮಿಯ ಯುವತಿಯನ್ನು ಮೂರು ವರ್ಷಗಳಿಂದಲೂ ಪ್ರೀತಿಸುತ್ತಿದ್ದು, ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ಇತ್ತೀಚೆಗೆ ಇಬ್ಬರೂ ಮನೆಬಿಟ್ಟು ಪರಾರಿಯಾಗಿದ್ದರು. ಆದರೆ, ಅ.11ರಂದು ಯುವಕನನ್ನು ಕರೆತಂದಿದ್ದ ಯುವತಿಯ ಕಡೆಯವರು ಮಾತುಕತೆಗೆ ಎಂದು ಕರೆದೊಯ್ದು, ಲಕ್ಷ್ಮೀಪತಿಯನ್ನು ಹತ್ಯೆ ಮಾಡಿದ್ದರು. ಸಹೋದರನ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಆರೋಪಿಗಳಾದ ನಿಜಾಮುದ್ದೀನ್ ಮತ್ತು ಸಿಖಂದರ್ ಅವರನ್ನು ಬಂಧಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts