More

    ಛಾಯಾಗ್ರಾಹಕನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

    ಹುಬ್ಬಳ್ಳಿ : ಬೆಂಗಳೂರು ಶಿವಾಜಿ ನಗರದ ಕಲ್ಯಾಣ ಮಂಟಪದಲ್ಲಿ ಮದುವೆಎ ಕಾರ್ಯನಿರತ ಛಾಯಾಗ್ರಾಹಕರ ಮೇಲೆ ಕೆಲ ಪುಂಡರು ಹಲ್ಲೆ ಮಾಡಿರುವುದನ್ನು ಖಂಡಿಸಿ ಹುಬ್ಬಳ್ಳಿ ಫೋಟೊ ಮತ್ತು ವಿಡಿಯೋಗ್ರಾಫರ್ ಸಂಘದ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತಾಡಿದ ಸಂಘದ ಅಧ್ಯಕ್ಷ ಕಿರಣ ಬಾಕಳೆ, ಹೊಟ್ಟೆಪಾಡಿಗಾಗಿ ಫೋಟೋ ಹಾಗೂ ವಿಡಿಯೋ ಮಾಡುವ ಛಾಯಾಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಅಮಾನವೀಯ ಘಟನೆಯಾಗಿದೆ. ಇದರಿಂದ ಛಾಯಾಗ್ರಾಹಕರಿಗೆ ಯಾವುದೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ ಎಂದರು.

    ಈ ಘಟನೆಯು ನಾಡಿನ ಸಮಸ್ತ ವೃತ್ತಿಪರ ಛಾಯಾಚಿತ್ರಗ್ರಾಹಕರ ಮೇಲೆ ತೀವ್ರ ಆಘಾತವನ್ನು ಉಂಟು ಮಾಡಿದ್ದು, ಛಾಯಾಗ್ರಾಹಕರ ಕುಟುಂಬಗಳು ನೋವು ಅನುಭವಿಸುವಂತಾಗಿದೆ. ಸಾಕಷ್ಟು ಕಲ್ಯಾಣ ಮಂಟಪದಲ್ಲಿ ಕ್ಯಾಮರಾ ಪರಿಕರಗಳ ಕಳ್ಳತನ, ಸ್ಟುಡಿಯೋಗಳ ಕಳ್ಳತನ, ಛಾಯಾಗ್ರಾಹಕರನ್ನು ರಸ್ತೆ ಬದಿಗಳಲ್ಲಿ ತಡೆದು ಕ್ಯಾಮರಾ ಪರಿಕರಗಳನ್ನು ಕಿತ್ತುಕೊಂಡು ಹೋದಂತಹ ಅನೇಕ ಪ್ರಕರಣಗಳು ನಡೆಯುತ್ತಲೆ ಇವೆ. ಆದ್ದರಿಂದ ಎಲ್ಲ ಕಲ್ಯಾಣ ಮಂಟಪಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಬೇಕೆಂದು ಆದೇಶಿಸಬೇಕು. ಛಾಯಾಗ್ರಾಹಕರಿಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಸೇರಿಸಿ, ಅನುದಾನ ಬಿಡುಗಡೆ ಮಾಡಿ ಅವರ ಕುಟುಂಬಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದರು.

    ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ವೃತ್ತಿನಿರತ ಛಾಯಾಗ್ರಾಹಕರಿಗೆ ರಕ್ಷಣೆ ನೀಡಬೇಕು. ಹಲ್ಲೆ ಮಾಡಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಲ್ಲೆಗೊಳಗಾದ ಛಾಯಾಗ್ರಾಹಕನಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಂಥಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸದಂತೆ ಸೂಕ್ತ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.

    ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ರವಾನಿಸಿದರು. ಸಂಘದ ಉಪಾಧ್ಯಕ ದಿನೇಶ ದಾಬಡೆ, ಕಾರ್ಯದರ್ಶಿ ರವೀಂದ್ರ ಕಾಟಿಗರ, ಅನಿಲ ತುರಮರಿ, ವಿನಾಯಕ ಸಫಾರೆ, ಪ್ರವೀಣ ಹಣಗಿ, ಶಂಕರ್ ಮಿಸ್ಕಿನ್, ಆನಂದ ರಾಜೊಳ್ಳಿ, ವಿಜಯ ಮೆಹರವಾಡೆ, ಪ್ರಕಾಶ ಬಸವ, ವಜೀರ್ ಗೋಪಂಕಪ್ಪ, ರಶೀದ್, ರಾಕೇಶ ಪವಾರ, ಸುಜಾತಾ ಪೋತದಾರ, ಅಲ್ಲಾಬಕ್ಷ ಅಧೋನಿ, ಆನಂದ ಮೆಹರವಾಡೆ, ಕೃಷ್ಣ ಪೂಜಾರಿ ಹಾಗೂ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts