More

    ಒತ್ತುವರಿ ಭೂಮಿ ಲೀಸ್‌ಗೆ ನೀಡುವುದನ್ನು ವಿರೋಧಿಸಿ ಪ್ರತಿಭಟನೆ

    ಚಿಕ್ಕಮಗಳೂರು: ಬಲಾಢ್ಯರಿಗೆ ಒತ್ತುವರಿ ಭೂಮಿ ಗುತ್ತಿಗೆ ನೀಡಲು ಹೊರಟಿರುವ ಸರ್ಕಾರದ ನೀತಿಯನ್ನು ಖಂಡಿಸಿ, ಕೂಡಲೇ ಈ ಅಧಿಸೂಚನೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಭೂಮಿ ಹಕ್ಕು ಹೋರಾಟ ಸಮಿತಿ ಕಾರ್ಯಕರ್ತರು ಶುಕ್ರವಾರ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

    ಸರ್ಕಾರ ಒತ್ತುವರಿ ಭೂಮಿಯನ್ನು ಬಲಾಢ್ಯ ಭೂ ಮಾಲೀಕರಿಗೆ ಲೀಸ್ ನೀಡಬಾರದು. ಬದಲಿಗೆ ಒತ್ತುವರಿ ಭೂಮಿ ವಶಕ್ಕೆ ಪಡೆದು ಅದನ್ನು ಭೂ ಹೀನ ಬಡವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
    ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಉಡುಪಿ, ಹಾಸನ, ಕೊಡಗು ಜಿಲ್ಲೆಯಲ್ಲಿ ಒತ್ತುವರಿ ಮಾಡಿರುವ ಭೂಮಾಲೀಕರಿಗೆ ೨೫ ಎಕರೆವರೆಗೆ ೩೦ ವರ್ಷಕ್ಕೆ ಭೂಮಿಯನ್ನು ಗುತ್ತಿಗೆ ಹೊಡಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಸರಿಯಲ್ಲ. ಕೂಡಲೇ ಭೂಮಿ ಲೀಸ್ ನೀಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
    ಮಲೆನಾಡಿನಲ್ಲಿ ಭೂ ಒತ್ತುವರಿ ಗಂಭೀರ ಸಮಸ್ಯೆಯಾಗಿದೆ. ದಲಿತ, ಕಾರ್ಮಿಕ, ಸಣ್ಣ, ಅತಿಸಣ್ಣ ರೈತರು ತಮ್ಮ ಭೂಹಿಡುವಳಿಯ ಜೊತೆಗೆ ಭೂಮಿ ಇಲ್ಲದವರು ಅರ್ಧ,ಒಂದು ಎಕರೆ ಹೆಚ್ಚೆಂದರೆ ೩-೪ ಎಕರೆ ಒತ್ತುವರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ೨೦ರಿಂದ ೩೦ ಎಕರೆಗೂ ಹೆಚ್ಚಿನ ತೋಟವಿದ್ದವರು ತಮ್ಮ ಜಮೀನಿನ ಸುತ್ತ ಅದಕ್ಕೆ ಹೊಂದಿಕೊAಡಿರುವ ೨೦,೫೦, ೧೦೦ ಎಕರೆವರೆಗೂ ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ಜೀವನ ನಿರ್ವಹಣೆಗೆ ಭೂಮಿ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಭೂಮಾಲೀಕರ ಸರ್ಕಾರಿ ಒತ್ತುವರಿ ಭೂಮಿಯನ್ನು ಖುಲ್ಲಾಪಡಿಸಬೇಕು. ಮಲೆನಾಡಿನ ಭೂಮಿಗೆ ಭೂಮಿತಿ ಕಾಯ್ದೆ ಜಾರಿಗೊಳಿಸಬೇಕು. ಬಲಾಢ್ಯರ ಒತ್ತುವರಿ ಭೂಮಿಯನ್ನು ಬಿಡಿಸಿ ಕೂಲಿ ಲೈನಿನಲ್ಲಿ ವಾಸಿಸುವವರು, ನಿವೇಶನ ರಹಿತರು, ಭೂ ರಹಿತರು ಮತ್ತು ಸ್ಮಶಾನಕ್ಕೆ ಭೂಮಿ ಮೀಸಲಿಡಬೇಕು ಎಂದು ಆಗ್ರಹಿಸಿದರು.
    ಅಸಂವಿಧಾನಿಕ ಭೂ ಗುತ್ತಿಗೆ ಪದ್ಧತಿ ರದ್ದುಗೊಳಿಸಿ ನಮೂನೆ ೫೩, ೫೭ ಅಡಿಯಲ್ಲಿ ಅರ್ಜಿಸಲ್ಲಿಸಿದ ಭೂರಹಿತರಿಗೆ ಹಕ್ಕುಪತ್ರ ನೀಡಬೇಕು.ಹಂಗಾಮಿ ಸಾಗುವಳಿ ಚೀಟಿಯನ್ನು ಖಾಯಂಗೊಳಿಸಬೇಕು. ದಲಿತರ ಭೂಮಿಯನ್ನು ಪಿಟಿಸಿಎಲ್ ಕಾಯ್ದೆ ಉಲ್ಲಂಘಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಸಿಪಿಐಎಂಎಲ್ ರಾಜ್ಯಕಾರ್ಯದರ್ಶಿ ಬಿ.ರುದ್ರಯ್ಯ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಅಂಬೇಡ್ಕರ್ ವಿಚಾರ ವೇದಿಕೆಯ ಕೆ.ಜೆ.ಮಂಜುನಾಥ, ಪ್ರಮುಖರಾದ ಉಮೇಶ್‌ಕುಮಾರ್, ದಂಟರಮಕ್ಕಿ ಶ್ರೀನಿವಾಸ್, ವೈ.ಎಂ.ಹೊನ್ನಪ್ಪ, ಕೆ.ಕೆ.ಕೃಷ್ಣಪ್ಪ, ಐ.ಎಂ.ಪೂರ್ಣೇಶ್, ಹರೀಶ್‌ನೆಲ್ಕೆ, ಕಠಾರದಹಳ್ಳಿ ಗಣೇಶ್, ಇಂದಾವರ ನಾಗೇಶ್, ಗೌಸ್‌ಮೊಹಿಯುದ್ದೀನ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts