ಬೆಳ್ವೆ: ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮೋಲ(ಗುಮ್ಮ ಹೊಲ) ಸಂತ ಜೋಸೆಫರ ಚರ್ಚ್‌ನ ಧರ್ಮಗುರು ಅಲೆಕ್ಸಾಂಡರ್ ಲೂವೀಸ್ ಅವರ ವರ್ಗಾವಣೆಗೆ ಒತ್ತಾಯಿಸಿ ಕ್ರೈಸ್ತರು ಭಾನುವಾರ ಪ್ರತಿಭಟನೆ ನಡೆಸಿದರು.
ಕಳೆದ ಕೆಲವು ತಿಂಗಳುಗಳಿಂದ ವಿನಃ ಕಾರಣ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿ ಭಕ್ತರಿಗೆ ಜೀವಬೆದರಿಕೆ ಹಾಕಿದ ಧರ್ಮಗುರು ವರ್ಗಾಯಿಸುವಂತೆ ಒತ್ತಾಯಿಸಿ ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷರಿಗೆ ಇಲ್ಲಿನ ಕ್ರೈಸ್ತರು ದೂರು ನೀಡಿದ್ದರು. ಇದಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನೂರಾರು ಮಂದಿ ಬೆಳ್ವೆ ಗುಮ್ಮೋಲ ಚರ್ಚ್ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರವೀಣ ಲೋಬೊ ಮಾತನಾಡಿ, ಗುಮ್ಮೋಲ ಸಂತ ಜೋಸೆಫರ ಚರ್ಚ್ 60 ವರ್ಷ ಇತಿಹಾಸ ಹೊಂದಿದ್ದು, ಸರ್ವಧರ್ಮ ಕೇಂದ್ರವಾಗಿದೆ. ಚರ್ಚ್ ನಿರ್ಮಾಣದಲ್ಲಿ ಎಲ್ಲ ಧರ್ಮದವರು ಕೊಡುಗೆ ನೀಡಿದ್ದಾರೆ. ಇಲ್ಲಿ 35 ಕ್ರೈಸ್ತ ಕುಟುಂಬಗಳು ನೆಲೆಸಿವೆ. ಇಂಥ ಚರ್ಚ್‌ಗೆ ಕೆಲವು ತಿಂಗಳುಗಳ ಹಿಂದೆ ನಿರ್ದೇಶಕರಾಗಿ ಬಂದ ಧರ್ಮಗುರು ಅಲೆಕ್ಸಾಂಡರ್ ಲೂವೀಸ್ ಇಲ್ಲಿನ ಕ್ರೈಸ್ತರೊಂದಿಗೆ ವ್ಯತಿರಿಕ್ತವಾಗಿ ವರ್ತಿಸುತ್ತಿದ್ದಾರೆ. 20 ವರ್ಷ ಹಿಂದೆ ನಿರ್ಮಿಸಿದ ಗಟ್ಟಿಮುಟ್ಟಾಗಿರುವ ಚರ್ಚ್ ಕಟ್ಟಡವನ್ನು ಧರ್ಮಗುರು ತನ್ನ ಐಷಾರಾಮಿ ಜೀವನಕ್ಕಾಗಿ ವಿನ್ಯಾಸ ಬದಲಾಯಿಸಿ ಕಟ್ಟಡಕ್ಕೆ ಹಾನಿಗೊಳಿಸಿದ್ದಾರೆ. ಸ್ಮಶಾನ ಸ್ವಚ್ಛತೆಗೆ ಹೋದವರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಚರ್ಚ್ ಅವರಣದೊಳಗಡೆ ಯಾರೂ ಪ್ರವೇಶಿಸದಂತೆ ಗೇಟ್ ಮುಚ್ಚಿ ಬೀಗ ಹಾಕಿದ್ದಾರೆ ಎಂದು ಆರೋಪಿಸಿದರು.
ನೂರಾರು ಕ್ರೈಸ್ತರು ಧರ್ಮಗುರುಗಳ ಕಾರ್ಯ ವೈಖರಿ ಖಂಡಿಸುವ ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯ ದೊರಕಿಸಿಕೊಡುವಂತೆ ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಚಂದ್ರಶೇಖರ್ ಶೆಟ್ಟಿ ಅವರಿಗೆ ಕ್ರೈಸ್ತ ಸಮುದಾಯದವರು ಮನವಿ ಸಲ್ಲಿಸಿದರು.
ಸ್ಥಳೀಯರಾದ ಗೋಳಿಯಂಗಡಿ ಉದ್ಯಮಿ ವೈ. ಕರುಣಾಕರ ಶೆಟ್ಟಿ ಯರುಕೋಣೆ, ಬೆಳ್ವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಉದಯಕುಮಾರ್ ಪೂಜಾರಿ, ಕ್ರೈಸ್ತ ಸಮುದಾಯದ ಸಿಲ್ವಿಯಾ ಪ್ರೋರೆಸ್, ಶಾಂತಿ ಡೇಸಾ, ಸ್ಯಾಂಡ್ರಾ ಸಾಮ್ಸನ್, ತಿಯದೊರ್ ಪ್ರೊರೆಸ್ ಖಂಡನಾಸಭೆಯಲ್ಲಿ ಮಾತನಾಡಿದರು. ಸ್ಥಳೀಯ ಜನ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯರು ಪಾಲ್ಗೊಂಡಿದ್ದರು.
ಉಪವಾಸ ಸತ್ಯಾಗ್ರಹ ಎಚ್ಚರಿಕೆ: ಧರ್ಮಗುರು ಅನುಚಿತ ವರ್ತನೆಯಿಂದ ಬೇಸತ್ತು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬಿಷಪ್‌ಗೆ ಕರೆ ಮಾಡಿ ಇಲ್ಲಿನ ಭಕ್ತರ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ನ್ಯಾಯಯುತ ಹೋರಾಟಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸಂಪೂರ್ಣ ಬೆಂಬಲ ನೀಡುವುದಾಗಿ ಸೂಚಿಸಿದ್ದಾರೆ. ಮುಂದಿನ 8 ದಿನಗಳಲ್ಲಿ ಧರ್ಮಗುರುಗಳನ್ನು ವರ್ಗಾವಣೆಗೊಳಿಸದಿದ್ದಲ್ಲಿ ಉಡುಪಿ ಧರ್ಮಾಧ್ಯಕ್ಷರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ, ಚರ್ಚ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ನ್ಯಾಯ ಸಿಗದಿದ್ದಲ್ಲಿ ಇಲ್ಲಿನ ಕ್ರೈಸ್ತರು ಧರ್ಮ ತ್ಯಜಿಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಪ್ರವೀಣ ಲೋಬೊ ಎಚ್ಚರಿಸಿದ್ದಾರೆ.
ಗುಮ್ಮೋಲ ಚರ್ಚ್ ಎಲ್ಲ ಧರ್ಮದವರ ಏಕತೆಯ ಧಾರ್ಮಿಕ ಕೇದ್ರವಾಗಿದೆ. ಭಕ್ತರಿಗೆ ತೊಂದರೆ ಕೊಟ್ಟು ಜನರ ಭಾವನೆಗಳಿಗೆ ವಿರುದ್ಧವಾಗಿ ವರ್ತಿಸುವ ಧರ್ಮಗುರು ವರ್ಗಾವಣೆಯಾಗಲೇಬೇಕು. ಇಲ್ಲದ್ದಿದಲ್ಲಿ ಸಮಸ್ತರು ಸೇರಿ ಹೋರಾಟ ಮುಂದುವರಿಸಲಾಗುವುದು. ಈ ನಿಟ್ಟಿನಲ್ಲಿ ಭಕ್ತರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು.
|ಎಸ್.ಚಂದ್ರಶೇಖರ್ ಶೆಟ್ಟಿ ಬೆಳ್ವೆ, ಗ್ರಾಮ ಪಂಚಾಯಿತಿ ಅಧ್ಯಕ್ಷ