More

    ಹರಿಯಾಣ ಸರ್ಕಾರದ ವಿರುದ್ಧ ರೈತರ ಹೋರಾಟ ; ತುಮಕೂರಿನಲ್ಲಿ ಪ್ರತಿಭಟನಾ ಮೆರವಣಿಗೆ

    ತುಮಕೂರು : ರೈತರನ್ನು ಆತಂಕವಾದಿಗಳಂತೆ ನಡೆಸಿಕೊಂಡಿರುವ ಹರಿಯಾಣ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ನಗರದಲ್ಲಿ ರೈತ ಸಂಘ ಮತ್ತು ಹಸಿರುಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮಂಗಳವಾರ ನೂರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರ ರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ದಬ್ಬಾಳಿಕೆಯನ್ನು ನಿಲ್ಲಿಸಿ, ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸುವಂತೆ ಘೋಷಣೆಗಳನ್ನು ಕೂಗಿದರು.
    ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರ್ಕಾರವು ರೈತರನ್ನು ಉಗ್ರಗಾಮಿಗಳಂತೆ ಕಾಣುತ್ತಿದೆ. ರೈತ ವಿರೋಧಿ ಕಾನೂನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಮೇಲೆ ದೌರ್ಜನ್ಯ ನಡೆಸಿ, ಕೀಳು ಮಟ್ಟದಲ್ಲಿ ನಡೆದು ಕೊಂಡಿದೆ ಎಂದು ಹರಿಹಾಯ್ದರು.

    ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ರೈತರ ಚಳವಳಿ ಹತ್ತಿಕ್ಕಲು ಪದೇಪದೆ ರೈತರ ಮೇಲೆ ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಹಿಂಸಾತ್ಮಕ ಹೋರಾಟ ಮಾಡುತ್ತಿರುವ ರೈತರ ಮೇಲೆ ಹಿಂಸಾತ್ಮಕ ಪ್ರಚೋದನೆ ನೀಡುವುದನ್ನು ಬಿಟ್ಟು ರೈತರೊಂದಿಗೆ ಕುಳಿತು ಮಾತನಾಡಲಿ ಎಂದು ಹೇಳಿದರು.

    ಹರಿಯಾಣ ಸರ್ಕಾರದ ರೈತ ವಿರೋಧಿ ನೀತಿ, ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯವನ್ನು ನಿಯಂತ್ರಿಸುವಲ್ಲಿ ವಿಫಲರಾಗಿರುವ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಕೇಂದ್ರ ಸರ್ಕಾರಕ್ಕೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮೂಲಕ ಪ್ರತಿಭಟನಾನಿರತರು ಮನವಿ ರವಾನಿಸಿದರು.

    ಮೈಸೂರು, ತುಮಕೂರು, ಬೆಳಗಾವಿಯಲ್ಲಿ ಅತ್ಯಾಚಾರ ಪ್ರಕರಣ ವಿಚಾರದಲ್ಲಿ ಗೃಹ ಇಲಾಖೆ ಮುಗ್ಗರಿಸಿದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡಬೇಕು. ಇನ್ನೂ ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಮಾದಕ ದ್ರವ್ಯ ಪ್ರಕರಣದಲ್ಲಿ ಸಿನಿಮಾ ತಾರೆಗಳನ್ನು ಬಂಧಿಸಿದರೇ ಮುಗಿದು ಹೋಯಿತೇ? ಮಾದಕ ವಸ್ತು ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಲು ಸಿಎಂ ಬೊಮ್ಮಾಯಿ ಗಮನ ಹರಿಸಬೇಕು.
    ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷ, ರಾಜ್ಯ ರೈತ ಸಂಘ

    25ರಂದು ಭಾರತ್ ಬಂದ್‌ಗೆ ಬೆಂಬಲ ಒಂದೂವರೆ ವರ್ಷ ರೈತ ವಿರೋಧಿ ಕಾನೂನು ಜಾರಿಗೆ ತರಬಾರದೆಂದು ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ, ಖಾಸಗೀಕರಣ ಮತ್ತು ನಗರೀಕರಣದ ಘೋಷಣೆಗಳನ್ನು ಕೇಂದ್ರ ಸರ್ಕಾರ ಮಾಡುತ್ತಲೇ ಇದೆ. ಪ್ರಧಾನಿ ಮೋದಿ ಪ್ರತಿಭಟನಾನಿರತ ರೈತರೊಂದಿಗೆ ಮಾತನಾಡಬೇಕು ಎಂದು ಒತ್ತಾಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಸೆ.25ರಂದು ಭಾರತ ಬಂದ್‌ಗೆ ರೈತ ಒಕ್ಕೂಟ ಕರೆ ನೀಡಿದ್ದು, ರಾಜ್ಯದಲ್ಲಿಯೂ ಬಂದ್‌ಗೆ ಬೆಂಬಲ ನೀಡಲಾಗುವುದು. ಬಂದ್ ಯಶಸ್ವಿಗೊಳಿಸಲು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕಾರ್ಯ ನಿರ್ವಹಿಸುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts