More

  ಪದವೀಧರನ ಮಿಶ್ರ ಬೇಸಾಯ ಪ್ರೀತಿ

  ಮದ್ದೂರು: ಮಿಶ್ರ ಬೇಸಾಯ ಅನುಸರಿಸಿದ ರೈತ ವರ್ಷಕ್ಕೆ 10 ಲಕ್ಷ ರೂ.ಗಳಿಗೂ ಅಧಿಕ ಲಾಭ ಗಳಿಸುವ ಮೂಲಕ ಕೃಷಿಯಲ್ಲೂ ಖುಷಿ ಕಾಣುವುದರ ಜತೆಗೆ ಕೈ ತುಂಬಾ ಆದಾಯ ಗಳಿಸಬಹುದು ಎಂಬುದನ್ನು ತೋರಿಸಿದ್ದಾರೆ.

  ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಸಿದ್ದಯ್ಯ ಅವರ ಪುತ್ರ ವಿ.ಎಸ್.ಶಂಕರಯ್ಯ ಯಶಸ್ವಿ ಹಾದಿಯಲ್ಲಿ ಸಾಗುತ್ತಿರುವ ಪ್ರಗತಿಪರ ಕೃಷಿಕ.
  ರೈತ ಶಂಕರಯ್ಯ ಅವರಿಗೆ 9 ಎಕರೆ ಜಮೀನಿದ್ದು, ಇದರಲ್ಲಿ 650 ಸಪೋಟ ಗಿಡ, 150 ಸೀಬೆ, 1200 ಟೀಕ್, 150 ತೇಗ, 2.20 ಎಕರೆ ಪ್ರದೇಶದಲ್ಲಿ ರೇಷ್ಮೆ, 2 ಎಕರೆ ಪ್ರದೇಶದಲ್ಲಿ ಸೋನಾ ಅಕ್ಕಿ ಬೆಳೆಯುತ್ತಿದ್ದಾರೆ. ಇದರೊಂದಿಗೆ 25 ಕುರಿಗಳು, 40 ಹಂದಿಗಳು, 20 ಕೋಳಿಗಳು, ಮಲ್ನಾಡ್ ತಳಿಯ 1 ಹಸು, 2 ಜತೆ ಎತ್ತುಗಳು ಹಾಗೂ ಹಾಲು ಕರೆಯುವ ಹಸುಗಳನ್ನು ಸಾಕುತ್ತಿದ್ದಾರೆ. ಜತೆಗೆ ತೋಟದ ಸುತ್ತಲೂ 150 ತೇಗ, ಹೆಬ್ಬೇವು ಮರ ನೆಟ್ಟಿದ್ದಾರೆ. ಇನ್ನು ಬೆಳೆಗಳಿಗೆ ಸಾವಯವ, ಬೇವು, ಕೊಟ್ಟಿಗೆ ಗೊಬ್ಬರ, ಕುರಿ, ಕೋಳಿ ಹಾಗೂ ಹಂದಿಗಳ ಗೊಬ್ಬರವನ್ನು ಹೆಚ್ಚಾಗಿ ಬಳಸುವ ಮೂಲಕ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

  ಒಟ್ಟು 6 ಬೋರ್‌ವೆಲ್‌ಗಳನ್ನು ಕೊರೆಸಿದ್ದು, ಬೇಸಿಗೆಯಲ್ಲೂ ನೀರು ಉತ್ತಮವಾಗಿ ಬರುತ್ತಿದೆ. ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಕೂಲಿ ಕಾರ್ಮಿಕರ ಸಮಸ್ಯೆ ನಡುವೆಯೂ ಸಹೋದರ ವಿ.ಎಸ್.ರಾಜು, ಪತ್ನಿ ಎಸ್.ಸಿ.ಗೀತಾ ಹಾಗೂ ಕುಟುಂಬದವರ ಸಹಾಯದೊಂದಿಗೆ ಬೇಸಾಯ ಮಾಡುತ್ತಿರುವುದು ವಿಶೇಷ.
  10 ವರ್ಷಗಳ ಹಿಂದೆ ಶಂಕರಯ್ಯ ಅವರು ತಮ್ಮ ಜಮೀನಿನಲ್ಲಿ ಒಂದು ಎಕರೆ ಪ್ರದೇಶದಲ್ಲಿ 95 ಟನ್ ಕಬ್ಬು ಹಾಗೂ 7 ಎಕರೆ ಪ್ರದೇಶದಲ್ಲಿ 145 ಕ್ವಿಂಟಾಲ್ ಟನ್ ರಾಗಿ ಬೆಳೆದು ಗಮನ ಸೆಳೆದಿದ್ದರು. ಆಗ ವಿಸಿ ಫಾರ್ಮ್‌ನ ವಿಜ್ಞಾನಿಗಳು ಬಂದು ಪರಿಶೀಲನೆ ಮಾಡಿ ಗೌರವಿಸಿದ್ದರು. 2019-20ರಲ್ಲಿ ಶಂಕರಯ್ಯ ಅವರು ಬಹುಬೆಳೆ ಬೇಸಾಯ ಮಾಡಿ ಉತ್ತಮವಾಗಿ ಫಸಲು ತೆಗೆದಿದ್ದು, ಆಗಲೂ ಕೂಡ ವಿಸಿ ಫಾರ್ಮ್ ವಿಜ್ಞಾನಿಗಳು ಗೌರವಿಸಿದ್ದರು. ಇದರೊಂದಿಗೆ 180 ಟನ್ ಭತ್ತ ಹಾಗೂ 145 ಕ್ವಿಂಟಾಲ್ ರಾಗಿ ಬೆಳೆದು ಗಮನ ಸೆಳೆದಿದ್ದರು.

  ಕೃಷಿಕ ಶಂಕರಯ್ಯ ಅವರ ಸಾಧನೆ ಗುರುತಿಸಿ ಕೃಷಿ ಇಲಾಖೆ ಸರ್ಕಾರ 2009-20 ರಲ್ಲಿ ಸುಮಾರು 42 ರೈತರನ್ನು ಒಳಗೊಂಡ ತಂಡವನ್ನು 9 ದಿನ ಇಸ್ರೇಲ್ ದೇಶಕ್ಕೆ ಕಳುಹಿಸಿತ್ತು. ಇಸ್ರೇಲ್‌ನಲ್ಲಿ 1500 ಹಸುಗಳನ್ನು ನಾಲ್ಕು ಜನರು ಸಾಕುತ್ತಿದ್ದು ನಿಜಕ್ಕೂ ನನಗೆ ಆಶ್ಚರ್ಯ ಎನಿಸಿತು. ಮೀನು ಸಾಕಣೆ, ಸೇಬು, ಮೊಸಂಬಿ, ಬಾಳೆ ಬೆಳೆಯಲು ಮಾನವ ಶಕ್ತಿ ಹೆಚ್ಚಾಗಿ ಬೇಕಾಗುವುದಿಲ್ಲ ಎಂಬುದು ಅರಿವಿಗೆ ಬಂತು. ಇದನ್ನು ನಮ್ಮ ದೇಶದಲ್ಲೂ ಅಳವಡಿಕೆ ಮಾಡಿಕೊಂಡರೆ ರೈತರು ಹೆಚ್ಚಿನ ಲಾಭಗಳಿಸಬಹುದು ಎಂದು ಅಭಿಪ್ರಾಯಪಡುತ್ತಾರೆ ರೈತ ಶಂಕರಯ್ಯ. ಜತೆಗೆ ಅವರು ಇಸ್ರೆಲ್ ಮಾದರಿ ಕೃಷಿಯನ್ನು ತಮ್ಮ ತೋಟದಲ್ಲಿ ಅಳವಡಿಸಿರುವುದು ವಿಶೇಷ.

  ರೈತ ಶಂಕರಯ್ಯ ಪದವೀಧರರಾಗಿದ್ದು, ಚಿಕ್ಕ ವಯಸ್ಸಿನಿಂದಲೇ ಬೇಸಾಯದ ಬಗ್ಗೆ ಪ್ರೀತಿಯಿದ್ದ ಕಾರಣ ಬೇರೆಡೆಗೆ ಕೆಲಸಕ್ಕೆ ಹೋಗಲಿಲ್ಲ. ಇವರ ಬೆಳೆಗಳನ್ನು ನೋಡಲು ಬೇರೆ ಕಡೆಗಳಿಂದ ರೈತರು ಬರುತ್ತಾರೆ. ದಾವಣಗೆರೆ, ಮೈಸೂರು ಭಾಗಗಳಿಗೆ ತೆರಳಿ ಅಲ್ಲಿನ ರೈತರಿಗೆ ವಿಶೇಷ ತರಬೇತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.9742171165 ಸಂಪರ್ಕಿಸಬಹುದಾಗಿದೆ.

  ರೈತ ಹೋರಾಟದಲ್ಲೂ ಮುಂದು: ಶಂಕರಯ್ಯ ಅವರು ರೈತ ಸಂಘದಲ್ಲಿ ಸಕ್ರಿಯವಾಗಿದ್ದು, ರೈತರಿಗೆ ಅನ್ಯಾಯವಾದ ಸಂದರ್ಭದಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಪುತ್ರ ವಿ.ಎಸ್.ಸುನೀಕ್‌ಗೌಡ ವೈದ್ಯಕೀಯ ಶಿಕ್ಷಣ ಮುಗಿಸಿ ಎಂಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಇನ್ನೊಬ್ಬ ಪುತ್ರ ವಿ.ಎಸ್.ಶ್ರೇಯಸ್‌ಗೌಡ ಬಿಇ ಮಾಡಿದ್ದು, ಇವರು ಬೇರೆಡೆ ಕೆಲಸಕ್ಕೆ ಹೋಗದೆ ಗ್ರಾಮದಲ್ಲಿರುವ ರೈಸ್‌ಮಿಲ್ ನೋಡಿಕೊಳ್ಳುತ್ತಿದ್ದಾರೆ. ಇವರ ಕೃಷಿ ಸಾಧನೆ ಮೆಚ್ಚಿ ಕೃಷಿ ಇಲಾಖೆಯಿಂದ ತಾಲೂಕು ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲಾಗಿದೆ.

  ನಂಬಿದವರನ್ನು ಭೂಮಿ ತಾಯಿ ಎಂದಿಗೂ ಕೈ ಬಿಟ್ಟಿಲ್ಲ ಹಾಗೂ ಯಾರೂ ಕೆಟ್ಟಿಲ್ಲ. ರೈತರು ಬೇಸಾಯ ಮಾಡುವಾಗ ವೈಜ್ಞಾನಿಕ ರೀತಿಯಲ್ಲಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಕಷ್ಟಪಟ್ಟು ಬೇಸಾಯ ಮಾಡಿದರೆ ಖಂಡಿತವಾಗಿಯೂ ವ್ಯವಸಾಯದಲ್ಲಿ ಹೆಚ್ಚಿನ ಲಾಭಗಳಿಸಬಹುದು.
  ವಿ.ಎಸ್.ಶಂಕರಯ್ಯ ಸಮಗ್ರ ಕೃಷಿಕ, ವಳಗೆರೆಹಳ್ಳಿ

  ವಿ.ಎಸ್.ಶಂಕರಯ್ಯ ಅವರು ಕೃಷಿ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದರು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ವೈಜ್ಞಾನಿಕ ರೀತಿಯಲ್ಲಿ ಬೇಸಾಯ ಮಾಡಿ ಉತ್ತಮ ಲಾಭ ಗಳಿಸುತ್ತಿರುವುದು ಸಂತೋಷ ತಂದಿದೆ.
  ಗವಾಸ್ಕರ್ ಕೃಷಿ ತಾಂತ್ರಿಕ ಅಧಿಕಾರಿ, ಮದ್ದೂರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts