More

  ಸರಳ ಮದುವೆಯಿಂದ ಕುಟುಂಬದಲ್ಲಿ ನೆಮ್ಮದಿ

  ಭದ್ರಾವತಿ: ಪೂರ್ವಜರ ಕಾಲದಲ್ಲಿ ಪದ್ಧತಿಗಳು, ಆಚಾರ-ವಿಚಾರಗಳ ಅನುಸರಣೆಯಿಂದ ಕೌಟಂಬಿಕ ಜೀವನದಲ್ಲಿ ಹೊಂದಾಣಿಕೆ, ಸಹಬಾಳ್ವೆ ಸಾಧ್ಯವಾಗುತ್ತಿತ್ತು. ಆದರೆ ಇಂದು ಬದಲಾದ ಜೀವನ ಶೈಲಿಯಿಂದ ದಾಂಪತ್ಯದಲ್ಲಿ ಬಿರುಕುಗಳು ಹೆಚ್ಚಾಗುತ್ತಿವೆ ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

  ವಿಶ್ವ ಹಿಂದು ಪರಿಷತ್ ಹಾಗೂ ವಿಶ್ವಭಾರತಿ ವಿಶ್ವಸ್ಥ ಮಂಡಳಿ ಆಶ್ರಯದಲ್ಲಿ ಭಾನುವಾರ ಸಿದ್ಧಾರೂಢನಗರದ ಧರ್ಮಶ್ರೀ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ 40ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
  ಇತ್ತೀಚೆಗೆ ಆಡಂಬರದ ಮದುವೆಗಳೇ ಹೆಚ್ಚು. ಹಣ, ಅಂತಸ್ತು ಪ್ರಮುಖ ಪಾತ್ರವಹಿಸುತ್ತಿವೆ. ಅನೇಕ ದಾಂಪತ್ಯಗಳು ಕೆಲವೇ ದಿನಗಳಲ್ಲಿ ಮುರಿದು ಬೀಳುತ್ತಿವೆ. ಇದರಿಂದ ಲಕ್ಷಾಂತರ ರೂ. ಖರ್ಚು ಮಾಡಿ ಮದುವೆ ಮಾಡುವ ಪಾಲಕರಿಗೂ ನೆಮ್ಮದಿ ಇಲ್ಲದಂತಾಗಿದೆ. ವಿಚ್ಛೇದನ ಎಂಬುದು ಸಮಾಜದ ಅನಿಷ್ಟ ಪದ್ಧತಿ. ಹಿಂದು ಧರ್ಮದ ವಿವಾಹ ಪದ್ದತಿಯ ಆಶಯಗಳನ್ನು ದಂಪತಿಗಳು ತಿಳಿದುಕೊಳ್ಳಬೇಕು ಎಂದರು.
  ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಖರ್ಚಿಗೆ ಕಡಿವಾಣ ಬೀಳುತ್ತದೆ. ಸಮಾಜದ ಸಕಲರ ಆಶೀರ್ವಾದವೂ ದೊರೆಯುತ್ತದೆ. ಸಮಾಜಕ್ಕೆ ಉತ್ತಮ ಸಂದೇಶವೂ ರವಾನೆಯಾಗುತ್ತದೆ. ಈ ದಿಸೆಯಲ್ಲಿ ಸರಳ ವಿವಾಹಗಳು ಹೆಚ್ಚು ನಡೆಯಬೇಕು. ಇದರಿಂದ ಮೇಲು-ಕೀಳು ಭಾವನೆಗಳು ದೂರವಾಗಿ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಕಳೆದ 40 ವರ್ಷಗಳಿಂದಲೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮಾಡಿಕೊಂಡು ಬರುತ್ತಿರುವ ವಿಶ್ವ ಹಿಂದು ಪರಿಷತ್ ಕಾರ್ಯ ಶ್ಲಾಘನೀಯ ಎಂದರು.
  ಉದ್ಯಮಿ ಬಿ.ಕೆ.ಜಗನ್ನಾಥ್ ಮಾತನಾಡಿ, ಸಾಮೂಹಿಕ ವಿವಾಹಗಳು ಬಡವರಿಗೆ ಮಾತ್ರ ವರದಾನವಾಗುವುದಿಲ್ಲ. ಸಮಾಜದ ಪ್ರತಿಯೊಬ್ಬರ ನಡುವೆ ಅನ್ಯೋನ್ಯತೆ ಸೃಷ್ಟಿಸುತ್ತದೆ. ಶ್ರೀಮಂತರು ಹಾಗೂ ಬಡವರ ನಡುವಿನ ತಾರತಮ್ಯ ದೂರವಾಗುತ್ತದೆ. ಸಾಮೂಹಿಕ ವಿವಾಹಗಳು ಸರಳ ವಿವಾಹ ಪದ್ಧತಿಯಾಗಿದ್ದು, ಇವು ಹೆಚ್ಚು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
  ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವೈದ್ಯ ವೃತ್ತಿಯ ಡಾ. ಅಮೂಲ್ಯಾ ಹಾಗೂ ಅಭಿಷೇಕ್, ರವಿಕುಮಾರ್ ಹಾಗೂ ಅಕ್ಷಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿವಿಧ ಶಾಲೆಗಳ ವಿದ್ಯಾರ್ಥಿಗನ್ನು ಪುರಸ್ಕರಿಸಲಾಯಿತು.
  ವಿಎಚ್‌ಪಿ ತಾಲೂಕು ಅಧ್ಯಕ್ಷ ವೆಂಕಟರಮಣ ಶೇಟ್, ಪ್ರಮುಖರಾದ ಹಾ.ರಾಮಪ್ಪ, ರಾಮಾಂಜನೇಯ, ಕೃಷ್ಣಮೂರ್ತಿ ಸೋಮಯಾಜಿ, ಶಿವಕುಮಾರ್, ನಗರಸಭೆ ಸದಸ್ಯ ಚನ್ನಪ್ಪ, ಮುತ್ತುರಾಮಯ್ಯ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts