More

    ಶಾಸಕ ಶ್ರೀನಿವಾಸ್ ರಾಜೀನಾಮೆ ನೀಡಲಿ ; ಬಿಜೆಪಿ ನಗರ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ; ಬಹಿರಂಗ ಕ್ಷಮೆಯಾಚನೆಗೆ ಆಗ್ರಹ

    ತುಮಕೂರು : ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಸಂಸದ ಜಿ.ಎಸ್.ಬಸವರಾಜು ಅವರನ್ನು ಅವಾಚ್ಯವಾಗಿ ನಿಂದಿಸಿರುವುದನ್ನು ಖಂಡಿಸಿ ನಗರದ ಟೌನ್‌ಹಾಲ್ ವೃತ್ತದಲ್ಲಿ ಬಿಜೆಪಿ ನಗರ ಘಟಕದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

    ಸಂಸ್ಕಾರರಹಿತ ಶಾಸಕ ಎಸ್.ಆರ್.ಶ್ರೀನಿವಾಸ್‌ಗೆ ಜನಪ್ರತಿನಿಧಿಯಾಗಿ ಮುಂದುವರಿಯಲು ಯೋಗ್ಯತೆ ಇಲ್ಲ. ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕೆಂಬ ತಿಳಿವಳಿಕೆ ಇಲ್ಲದ ಮೇಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಲಿ ಎಂದು ಮೇಯರ್ ಬಿ.ಜಿ.ಕೃಷ್ಣಪ್ಪ ಹರಿಹಾಯ್ದರು.

    ಹಿರಿಯರು, ಮುತ್ಸದ್ಧಿ ರಾಜಕಾರಣಿ ಜಿ.ಎಸ್.ಬಸವರಾಜು ಅವರನ್ನು ಏಕವಚನದಲ್ಲಿ ನಿಂದಿಸಿರುವ ಶಾಸಕ ಶ್ರೀನಿವಾಸ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಒಂದು ವೇಳೆ ಇದೇ ರೀತಿ ಉದ್ಧಟತನ, ದುರ್ನಡತೆ ತೋರಿದರೆ ತಕ್ಕ ಪಾಠ ಕಲಿಸುತ್ತೇವೆ. ರಾಜಕಾರಣದಲ್ಲಿ ಟೀಕೆಟಿಪ್ಪಣಿ ಮಾಡುವುದು ಸಾಮಾನ್ಯ. ಈ ರೀತಿ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ ಎಂದು ಎಚ್ಚರಿಸಿದರು.

    ಗುಬ್ಬಿ ಜನತೆಗೆ ಅವಮಾನ: ಅಭಿವೃದ್ಧಿ ಹರಿಕಾರ, ನೀರಾವರಿ ತಜ್ಞ ಜಿ.ಎಸ್.ಬಸವರಾಜು ವಿರುದ್ಧ ಶ್ರೀನಿವಾಸ್ ನಾಲಿಗೆ ಹರಿಬಿಟ್ಟಿರುವುದು ಸರಿಯಲ್ಲ, ಅವರ ಮಟ್ಟದಲ್ಲಿ ಮಾತನಾಡುವುದು ನಮ್ಮ ಪಕ್ಷದ ಸಂಸ್ಕೃತಿಯಲ್ಲ. ಸಂಸದರಿಗೆ ನಿಂದನೆ ಮಾಡಿರುವುದು ಗುಬ್ಬಿ ಜನರಿಗೆ ಮಾಡಿರುವ ಅವಮಾನ. ತಾವು ಕೂಡ ಗಾಜಿನ ಮನೆಯಲ್ಲಿ ಇದ್ದೇನೆ ಎಂಬುದನ್ನು ಮರೆತು ಶ್ರೀನಿವಾಸ್ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ರವಿಶಂಕರ್ ಗುಡುಗಿದರು.

    ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ನೀರಾವರಿ ಸಮಸ್ಯೆ ಬಗೆಹರಿದಿದೆ ಎಂಬ ಮಾತುಗಳನ್ನು ಶ್ರೀನಿವಾಸ್ ಅವರೇ ಹೇಳುತ್ತಾರೆ. ಸಂಸದರಾದ ಬಳಿಕ ಜಿ.ಎಸ್.ಬಸವರಾಜು ಮಾಡಿರುವ ಕೆಲಸದ ಬಗ್ಗೆ ಜನರೇ ಮಾತನಾಡುತಿದ್ದಾರೆ. ಯಾವುದೇ ರಾಜಕಾರಣಿ ಆದರೂ ಅವರಿಗೆ ವ್ಯಕ್ತಿಗತವಾದ ಗೌರವ ನೀಡಬೇಕಿರುವುದು ಜನಪ್ರತಿನಿಧಿಯಾಗಿರುವ ಶ್ರೀನಿವಾಸ್ ಅವರ ಕರ್ತವ್ಯ ಎಂದು ಹೇಳಿದರು.

    ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿ, ಸಂಸದರ ಬಗ್ಗೆ ಮಾತನಾಡಿರುವ ರೀತಿ ಶ್ರೀನಿವಾಸ್‌ಗೆ ಸಂಸ್ಕಾರ ಇಲ್ಲ ಎನ್ನುವುದನ್ನು ತೋರಿಸುತ್ತದೆ. ನಾಲಿಗೆ ಮೇಲೆ ಹಿಡಿತವಿಲ್ಲದ ಶ್ರೀನಿವಾಸ್ ಅಂಥವರಿಂದ ರಾಜಕೀಯ ಮೌಲ್ಯ ಕುಸಿದಿದೆ. ಶಾಸಕನಾಗಿ ಎಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಜನರಿಗೆ ತಿಳಿಸಲಿ. ಸಂಸದರ ಮಾತಿನ ಬಗ್ಗೆ ಸಹಮತವಿಲ್ಲದೆ ಇದ್ದರೆ ಪ್ರಜಾಸತಾತ್ಮಕ ರೀತಿಯಲ್ಲಿ ಟೀಕಿಸಲಿ. ಅದನ್ನು ಬಿಟ್ಟು ವೈಯಕ್ತಿಕವಾಗಿ ನಿಂದಿಸುವುದು, ವಿಕೃತವಾಗಿ ನಡೆದುಕೊಳ್ಳುವುದು ಸರಿಯಲ್ಲ. ಅಂತಹ ಶಾಸಕರಿಗೆ ಜನರೇ ಬುದ್ಧಿ ಕಲಿಸಲಿದ್ದಾರೆ ಎಂದರು.

    ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ಶ್ರೀನಿವಾಸ್, ಟೂಡಾ ಸದಸ್ಯ ಅಣ್ಣೇನಹಳ್ಳಿ ಶಿವಕುಮಾರ್, ಮುಖಂಡರಾದ ಎಂ.ವೈ.ರುದ್ರೇಶ್, ಕೊಪ್ಪಲ್ ನಾಗರಾಜು, ಟಿ.ಎಚ್.ಹನುಮಂತರಾಜು, ರಕ್ಷಿತ್, ವೇದಮೂರ್ತಿ, ಹೊನ್ನುಡಿಕೆ ಲೋಕೇಶ್, ನೇರಲಾಪುರ ಕುಮಾರ್, ಚಂದ್ರಶೇಖರ್, ವಿನಯ್ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಯಾರು ಲೂಟಿಕೋರರು, ಯಾರು ಶ್ರೀಮಂತರು ಎನ್ನುವುದು ಜನರಿಗೆ ಗೊತ್ತಿದೆ. ಅಸಭ್ಯವಾಗಿ ಮಾತನಾಡುವುದು ಬಿಡದೇ ಇದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಕ್ಷಮೆ ಕೋರದೆ ಇದ್ದರೆ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಗುಬ್ಬಿ ಕ್ಷೇತ್ರದ ಅಭಿವೃದ್ಧಿಗೆ ಸಂಸದರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯಲಿ.
    ಎಸ್.ಶಿವಪ್ರಸಾದ್, ಉಪಾಧ್ಯಕ್ಷ, ರಾಜ್ಯ ಬಿಜೆಪಿ ರೈತ ಮೋರ್ಚಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts