More

    ಮಾಳಮಡ್ಡಿಯ ಬಾವಿಯಲ್ಲಿ ಬಿದ್ದ ವೃದ್ಧೆ ರಕ್ಷಣೆ

    ಧಾರವಾಡ: ವೃದ್ಧೆಯೊಬ್ಬಳು ಬಾವಿಗೆ ಬಿದ್ದು ತೀವ್ರ ಗಾಯಗೊಂಡ ಘಟನೆ ನಗರದ ಮಾಳಮಡ್ಡಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದ್ದು, ಶಾಲಾ ಬಾಲಕನೊಬ್ಬನ ಸಮಯ ಪ್ರಜ್ಞೆಯಿಂದ ವೃದ್ಧೆಯನ್ನು ರಕ್ಷಣೆ ಮಾಡಲಾಗಿದೆ.

    ಮಾಳಮಡ್ಡಿ ಪ್ರದೇಶದವಳೇ ಆಗಿರುವ ವನಮಾಲಾ ಕುಲಕರ್ಣಿ ಬಾವಿಗೆ ಬಿದ್ದ ವೃದ್ಧೆ. ಸುಮಾರು 50 ಅಡಿ ಆಳದ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದ ವೃದ್ಧೆಯನ್ನು ಕಂಡ ಬಾಲಕ ಮಂಜುನಾಥ ಅಮ್ಮಿನಬಾವಿ ಕೂಡಲೆ ಸ್ಥಳದಲ್ಲಿದ್ದ ವ್ಯಕ್ತಿಯ ಸಹಾಯದೊಂದಿಗೆ ತನ್ನ ತಂದೆಗೆ ತಿಳಿಸಿದ್ದಾನೆ. ಅವರು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು.

    ಕೂಡಲೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಏಣಿ ಹಾಗೂ ಹಗ್ಗದ ಸಹಾಯದಿಂದ ವೃದ್ಧೆಯನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿದರು. ವೃದ್ಧೆ ತೀವ್ರವಾಗಿ ಗಾಯಗೊಂಡಿದ್ದು, ಭಯಭೀತಳಾಗಿದ್ದಾಳೆ.ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧೆ ಏಕೆ ಅಲ್ಲಿಗೆ ಹೋಗಿದ್ದಳು ಎಂಬ ಮಾಹಿತಿ ತಿಳಿದು ಬಂದಿಲ್ಲ.

    ಬಾಲಕ ಮಂಜುನಾಥನ ಕಾರ್ಯಕ್ಕೆ ಮೆಚ್ಚುಗೆ

    ಸಮಯ ಪ್ರಜ್ಞೆ ಮೂಲಕ ವೃದ್ಧೆಯ ಜೀವ ಉಳಿಸಿದ ಬಾಲಕನ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡಿದ ಬಾಲಕ ಮಂಜುನಾಥ ಅಮ್ಮಿನಬಾವಿ, ಶಾಲೆಯಿಂದ ಗೆಳೆಯನ ಜತೆಗೆ ಆಗಮಿಸುವಾಗ ಸಹಜವಾಗಿ ಬಾವಿ ನೋಡಲು ಹೋದೆ. ಆಗ ವೃದ್ಧೆ ಬಿದ್ದಿರುವುದನ್ನು ಗಮನಿಸಿ ಗೆಳೆಯ ಹೆದರಿಹೋದ. ಬಳಿಕ ನಾನು ಕೆಲವರಿಗೆ ಕರೆದೆ, ಯಾರೂ ಬರಲಿಲ್ಲ. ಸಮೀಪದಲ್ಲಿದ್ದ ಒಬ್ಬರ ಸಹಾಯದಿಂದ ತಂದೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದೆ. ಅವರು ಮಾಹಿತಿ ನೀಡಿದೊಡನೆ ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿ ಕೂಡಲೆ ಬಂದು ವೃದ್ಧೆಯನ್ನು ಮೇಲಕ್ಕೆತ್ತಿದರು ಎಂದು ತಿಳಿಸಿದನು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts