More

    ಮುಂಜಾಗ್ರತೆ ಇದ್ರೆ ಆಗದು ತೊಂದರೆ; ಕಂಪ್ಲಿ ತಾಲೂಕಿನಲ್ಲಿ ಪೈಪ್ ಒಡೆದರೆ, ವಿದ್ಯುತ್ ಕೈಕೊಟ್ಟರಷ್ಟೇ ನೀರಿನ ಸಮಸ್ಯೆ

    ಬಂಗಿ ದೊಡ್ಡಮಂಜುನಾಥ ಕಂಪ್ಲಿ
    ಕಂಪ್ಲಿ ಪಟ್ಟಣ ಮತ್ತು ತಾಲೂಕಾದ್ಯಂತ ಪೈಪ್ ಒಡೆದರೆ ಮತ್ತು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಮಾತ್ರ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಹುದೆ ಹೊರತು ಬೇರೆ ಸಮಸ್ಯೆಯಿಲ್ಲ. ಜಲ ಜೀವನ್ ಮಿಷನ್ ಯೋಜನೆಯಿಂದಾಗಿ ನೀರಿನ ದಾಹ ತೀರಿದ್ದಲ್ಲದೆ ಕೊಡಗಳನ್ನು ಹಿಡಿದು ನಲ್ಲಿ, ಬಾವಿ, ಟ್ಯಾಂಕ್‌ಗಳತ್ತ ಅಲೆಯುವುದು ತಪ್ಪಿದೆ. ಭವಿಷ್ಯದಲ್ಲಿ ಸಮರ್ಪಕ ನೀರು ಪೂರೈಕೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡಲ್ಲಿ ತೊಂದರೆ ಉದ್ಭವಿಸದು.

    ಕಂಪ್ಲಿ ಪುರಸಭೆಯ 23 ವಾರ್ಡ್‌ಗಳು ಮತ್ತು ನದಿ ಪಾತ್ರ ಗ್ರಾಮಗಳಿಗೆ ತುಂಗಭದ್ರಾ ಆಸರೆ. ಪಟ್ಟಣದಲ್ಲಿ ನೀರಿನ ಪೂರೈಕೆಗೆ ತೊಂದರೆಯಿಲ್ಲ. ಪಟ್ಟಣದಾದ್ಯಂತ 8,810 ನಲ್ಲಿ (ನಳ) ಸಂಪರ್ಕ ಹೊಂದಿದ್ದು, 12,500ಕ್ಕೂ ಹೆಚ್ಚಿನ ಮನೆ-ಕಟ್ಟಡಗಳಿವೆ. 2011ರ ಜನಗಣತಿಯಲ್ಲಿದ್ದ 39,307 ಜನಸಂಖ್ಯೆ ಇದೀಗ 45,000ಕ್ಕೂ ಹೆಚ್ಚಿದೆ. 35 ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಿಸಲು ನಾಲ್ಕು ಒವರ್‌ಹೆಡ್ ಟ್ಯಾಂಕ್‌ಗಳಿವೆ. ಸದ್ಯ ದಿನ ಬಿಟ್ಟು ದಿನ 50 ಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ. ಪ್ರತಿ ವ್ಯಕ್ತಿಗೆ ಸರಾಸರಿ 135 ಲೀಟರ್ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಬಳಕೆ ನೀರಿಗೆ 89 ಸಿಸ್ಟನ್ ಟ್ಯಾಂಕ್‌ಗಳಿದ್ದು, ಇವುಗಳಲ್ಲಿ 76 ಕಾರ್ಯನಿರ್ವಹಿಸುತ್ತಿವೆ. 139 ಬೋರ್‌ವೆಲ್‌ಗಳಿದ್ದು, ಇದರಲ್ಲಿ 30 ದುರಸ್ತಿಗೆ ಕಾಯುತ್ತಿವೆ. ತುಂಗಭದ್ರಾ ನದಿಯಿಂದ ನೀರನ್ನು ಪಡೆಯಲು ಜಾಕ್‌ವೆಲ್ ಬಳಿ 150 ಎಚ್‌ಪಿ ಸಾಮರ್ಥ್ಯದ ಎರಡು ಮೋಟರ್ ಪಂಪ್‌ಗಳಿದ್ದು, ಇವುಗಳಲ್ಲಿ ಒಂದು ಹೆಚ್ಚುವರಿ ಮೋಟರ್ ಅನ್ನು ಮೀಸಲಿಡಲಾಗಿದೆ. 30 ಎಚ್‌ಪಿಯ ಒಂದು ಮೋಟರ್ ಕೂಡಾ ಇದೆ. ಬೇಸಿಗೆಯಲ್ಲಿ ನದಿ ನೀರಿನ ಹರಿವು ತಗ್ಗಿದಲ್ಲಿ ರಿಂಗ್‌ಬಂಡ್ ಹಾಕುವ ಮೂಲಕ ನೀರನ್ನು ಜಾಕ್‌ವೆಲ್‌ಗೆ ಸೆಳೆಯಲಾಗುತ್ತಿದೆ.

    ತಾಲೂಕಿನ ಹತ್ತು ಗ್ರಾಪಂಗಳ ವ್ಯಾಪ್ತಿಯಲ್ಲಿ ನೀರಿನ ಬರವಿಲ್ಲ. ಗ್ರಾಮಗಳಲ್ಲಿ ಶುದ್ಧೀಕರಣ ಘಟಕಗಳಿಂದ ನೀರನ್ನು ಪೂರೈಸಲಾಗುತ್ತಿದೆ. ತಾಲೂಕಿನಲ್ಲಿ 41ಆರ್‌ಒ ಪ್ಲಾೃಂಟ್‌ಗಳಿದ್ದು, ಎಮ್ಮಿಗನೂರಿನಲ್ಲಿನ ಮೂರು ಮತ್ತು ದೇವಲಾಪುರದ ಒಂದು ಆರ್‌ಒ ಪ್ಲಾೃಂಟ್ ದುರಸ್ತಿಯಲ್ಲಿವೆ. ಬಳಕೆ ನೀರಿಗೆ ಸಿಸ್ಟನ್ ಟ್ಯಾಂಕ್‌ಗಳ ಮೂಲಕ ಬೋರ್‌ವೆಲ್ ನೀರನ್ನು ಪೂರೈಸಲಾಗುತ್ತಿದೆ. ಬುಕ್ಕಸಾಗರ ಬಹುಗ್ರಾಮ ಕುಡಿವ ನೀರಿನ ಯೋಜನೆ ಸಂಪೂರ್ಣ ಸಾಕಾರಗೊಂಡಲ್ಲಿ ಕಣ್ವಿ ತಿಮ್ಮಲಾಪುರ, ದೇವಸಮುದ್ರ, ಮೆಟ್ರಿ ಗ್ರಾಮಗಳಿಗೆ ಕುಡಿವ ನೀರು ದೊರಕಲಿದೆ.

    ಮುಂಜಾಗ್ರತೆ ಇದ್ರೆ ಆಗದು ತೊಂದರೆ; ಕಂಪ್ಲಿ ತಾಲೂಕಿನಲ್ಲಿ ಪೈಪ್ ಒಡೆದರೆ, ವಿದ್ಯುತ್ ಕೈಕೊಟ್ಟರಷ್ಟೇ ನೀರಿನ ಸಮಸ್ಯೆ
    ಜವುಕು ಗ್ರಾಮದ ಬಳಿ ನೀರು ಸಂಗ್ರಹಗೊಳ್ಳದೆ ಹಾಳು ಬಿದ್ದ ಕುಡಿವ ನೀರಿನ ಕೆರೆ.

    ಪ್ರಗತಿಯಲ್ಲಿ ಅಮೃತ ಸರೋವರ, ಕಲ್ಯಾಣಿ ಯೋಜನೆ
    ಕಂಪ್ಲಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಸುಧಾರಣೆಗೆ, ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಲು ಜಲಾನಯನ ಅಭಿವೃದ್ಧಿಗೊಳಿಸಿ ಜನ-ಜಾನುವಾರುಗಳಿಗೆ ನೀರಿನ ಮೂಲಗಳನ್ನು ಸಂರಕ್ಷಿಸಿ ಒದಗಿಸುವ ನಿಟ್ಟಿನಲ್ಲಿ ಅಮೃತ ಸರೋವರ, ಅಮೃತ ಕಲ್ಯಾಣಿ ಯೋಜನೆ ಪ್ರಗತಿಯಲ್ಲಿದೆ. ಮೆಟ್ರಿ ಗ್ರಾಪಂಯಲ್ಲಿ ಆರು, ರಾಮಸಾಗರ, ಕಣ್ವಿ ತಿಮ್ಮಲಾಪುರದಲ್ಲಿ ತಲಾ ಎರಡು, ದೇವಸಮುದ್ರ, ದೇವಲಾಪುರ, ಎಮ್ಮಿಗನೂರಿನಲ್ಲಿ ತಲಾ ಒಂದು ಸೇರಿ 13 ಅಮೃತ ಸರೋವರ ಕಾಮಗಾರಿಗಳು, ಒಂದು ಕಲ್ಯಾಣಿ ಸೇರಿ 14 ಗುರಿ ಹೊಂದಲಾಗಿದೆ. ತಾಲೂಕಿನಲ್ಲಿ ಎಂಟು ಅಮೃತ ಸರೋವರ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಮೆಟ್ರಿ ಗ್ರಾಪಂನಲ್ಲಿ ಮೂರು, ರಾಮಸಾಗರ, ದೇವಸಮುದ್ರ, ಕಣ್ವಿ ತಿಮ್ಮಲಾಪುರಗಳಲ್ಲಿ ತಲಾ ಒಂದೊಂದು ಸೇರಿ ಆರು ಕಾಮಗಾರಿ ಮುಕ್ತಾಯಗೊಂಡಿವೆ.

    ಮುಂಜಾಗ್ರತೆ ಇದ್ರೆ ಆಗದು ತೊಂದರೆ; ಕಂಪ್ಲಿ ತಾಲೂಕಿನಲ್ಲಿ ಪೈಪ್ ಒಡೆದರೆ, ವಿದ್ಯುತ್ ಕೈಕೊಟ್ಟರಷ್ಟೇ ನೀರಿನ ಸಮಸ್ಯೆ
    ಸೋಮಲಾಪುರ ಕ್ರಾಸ್ ಬಳಿ ನೀರು ಸಂಗ್ರಹಗೊಳ್ಳದೆ ಹಾಳು ಬಿದ್ದ ದೇವಲಾಪುರ ಕುಡಿವ ನೀರಿನ ಕೆರೆ.

    ವರವಾದ ಜಲ ಜೀವನ್ ಮಿಷನ್
    ಗ್ರಾಮಗಳಲ್ಲಿ ನೀರಿನ ಬರವನ್ನು ತೀರಿಸುವಲ್ಲಿ ಜಲ ಜೀವನ್ ಮಿಷನ್ ವರದಾನವಾಗಿದೆ. ಶೇ.80ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಯೋಜನೆ ಅಳವಡಿಕೆಯಾಗಿದೆ. ಮನೆಮನೆಗೆ ನೀರು ತಲುಪಿಸುವ ಈ ಯೋಜನೆಯಿಂದ ಕೊಡ ಹಿಡಿದು ಬೀದಿಬೀದಿ ಅಲೆಯುವುದನ್ನು ತಪ್ಪಿಸಿದ್ದಲ್ಲದೆ, ನೀರಿನ ಪೂರೈಕೆಯನ್ನು ಖಾತ್ರಿಗೊಳಿಸಿದೆ. ಪ್ರತಿ ವ್ಯಕ್ತಿಗೆ ಬೇಕಾಗುವಷ್ಟು ಶುದ್ಧಕುಡಿವ ನೀರನ್ನು ಪೂರೈಸುವ ಯೋಜನೆಯಾಗಿದ್ದು, 2024ರ ಹೊತ್ತಿಗೆ ಪ್ರತಿ ಮನೆಯಲ್ಲೂ ನಲ್ಲಿ ಸೌಲಭ್ಯ ದೊರಕಲಿದೆ.

    ಕುಡಿವ ನೀರಿನ ಕೆರೆಗಳು
    ಹಂಪಾದೇವನಹಳ್ಳಿ ಗ್ರಾಪಂ ಜವುಕು ಗ್ರಾಮದ ಬಳಿ 21 ಎಕರೆ ಪ್ರದೇಶದಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಕುಡಿವ ನೀರಿನ ಕೆರೆಯಿದ್ದು, ಇದರಲ್ಲಿ ನೀರು ನಿಲ್ಲುತ್ತಿಲ್ಲ. ಇದೀಗ ಎಲ್‌ಎಲ್‌ಸಿ ಕಾಲುವೆಯಿಂದ ನೀರು ಒದಗಿಸಲು ಯೋಜಿಸಿದ್ದು, ಸುಮಾರು ಎಂಟು ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿಪಡಿಸಲು ಎಸ್ಟಿಮೇಟ್ ಸಲ್ಲಿಕೆಯಾಗಿದ್ದು, ಅನುಮೋದನೆ ಹಂತದಲ್ಲಿದೆ. ಈ ಯೋಜನೆ ಸಾಕಾರಗೊಂಡಲ್ಲಿ ಹಂಪಾದೇವನಹಳ್ಳಿ, ಚಿಕ್ಕಜಾಯಿಗನೂರು, ಜೀರಿಗನೂರು, ಜವುಕು, ಹಾಗೂ ರೆಗ್ಯೂಲೇಟರ್ ಕ್ಯಾಂಪ್‌ಗಳ ಜನತೆಗೆ ಕುಡಿವ ನೀರು ಒದಗುತ್ತದೆ. ದೇವಲಾಪುರ ಗ್ರಾಪಂ ವ್ಯಾಪ್ತಿಯ ಸೋಮಲಾಪುರ ಕ್ರಾಸ್ ಬಳಿ ಬರುವ ಕೆರೆಯನ್ನು 2003ರಲ್ಲಿ ಸುಮಾರು 1.63 ಕೋಟಿ ರೂಪಾಯಿಗಳ ವೆಚ್ಚದಲ್ಲಿ, 16 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳಿಸಲಾಗಿದೆ. ನೀರು ನಿಲ್ಲದೆ ಹಾಳುಬಿದ್ದಿದೆ. ಎಚ್‌ಎಲ್‌ಸಿಯಿಂದ ಕೆರೆಗೆ ನೀರೊದಗಿಸಲು ಯೋಜಿಸಿದ್ದು, ಏಳು ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿಪಡಿಸಲು ಎಸ್ಟಿಮೇಟ್ ಸಲ್ಲಿಸಿದ್ದು, ಅನುಮೋದನೆ ಹಂತದಲ್ಲಿದೆ. ಉಪ್ಪಾರಹಳ್ಳಿ ಕೆರೆಯನ್ನು ಐದು ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿಪಡಿಸಿ, ಎಚ್‌ಎಲ್‌ಸಿಯಿಂದ ನೀರು ಒದಗಿಸಲು ಉದ್ದೇಶಿಸಿದ್ದು, ಅನುಮೋದನೆ ಹಂತದಲ್ಲಿದೆ. ಇದರಿಂದ ಚಿನ್ನಾಪುರ, ಉಪ್ಪಾರಹಳ್ಳಿಗಳಿಗೆ ನೀರು ಒದಗಲಿದೆ. ನೆಲ್ಲೂಡಿ ಗ್ರಾಪಂ ಬಳಿಯ ಬಳ್ಳಾಪುರ ಕೆರೆಯನ್ನು 11 ಕೋಟಿ ರೂಪಾಯಿಗಳಲ್ಲಿ ಆಧುನೀಕರಿಸಿ ಹಳೆನೆಲ್ಲೂಡಿ, ಹೊಸನೆಲ್ಲೂಡಿ, ಶಾಂತಿನಗರ, ಶಂಕರಸಿಂಗ್‌ಕ್ಯಾಂಪ್, ಕೊಟ್ಟಾಲ್ ಗ್ರಾಮಗಳಿಗೆ ನೀರೋದಗಿಸುವ ಯೋಜನೆ ಟೆಂಡರ್ ಹಂತದಲ್ಲಿದೆ. ಸಣಾಪುರ ಗ್ರಾಪಂಯ ಅರಳಿಹಳ್ಳಿ(ಸಣಾಪುರ)ಯ ಕುಡಿವನೀರಿನ ಯೋಜನೆ ಪೂರ್ಣಗೊಂಡಿದ್ದರೂ ಬೆಳಗೋಡ್‌ಹಾಳ್ ಸೇರಿ ಮೂರು ಗ್ರಾಮಗಳಿಗೆ ನೀರು ದೊರಕುತ್ತಿಲ್ಲ. ಮುಂದಿನ 30 ವರ್ಷಗಳ ದೂರದೃಷ್ಟಿ ಅಭಿವೃದ್ಧಿಗಾಗಿ ರೀ-ಎಸ್ಟಿಮೇಟ್ ಮಾಡಿ ಉಳಿದ ಗ್ರಾಮಗಳಿಗೂ ನೀರು ಸಲ್ಲಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸಿದಲ್ಲಿ ನೀರಿನ ತೊಂದರೆ ನೀಗಲು ಸಾಧ್ಯವಿದೆ.

    ಕಂಪ್ಲಿ ತಾಲೂಕಿನ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ತಾಲೂಕಿನಾದ್ಯಂತ ನೀರಿನ ಬರ ಇರದಂತೆ ಕ್ರಮ ಕೈಗೊಳ್ಳಲಾಗಿದೆ. ಶೇ.80 ಜೆಜೆಎಂ ಅನುಷ್ಠಾನಗೊಂಡಿದ್ದು ಮನೆಮನೆಗೆ ನೀರು ತಲುಪಿಸುವಲ್ಲಿ ಯಶಸ್ವಿಯಾಗಿದೆ. ಕೆರೆಗಳಿಗೆ ಎಲ್‌ಎಲ್‌ಸಿಯಿಂದ ನೀರು ಒದಗಿಸಿ, ಅಭಿವೃದ್ಧಿಪಡಿಸುವ ಮೂಲಕ ಶಾಶ್ವತ ಕುಡಿವ ನೀರನ್ನು ಒದಗಿಸಲು ಯೋಜಿಸಿದೆ.
    ಜೆ.ಎನ್.ಗಣೇಶ್, ಶಾಸಕ, ಕಂಪ್ಲಿ.

    ಬೇಸಿಗೆ ಸೇರಿ ಎಲ್ಲ ಋತುಮಾನಗಳಲ್ಲೂ ಕುಡಿವ ಮತ್ತು ಬಳಕೆ ನೀರಿನ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ನಿಗಾವಹಿಸಲಾಗಿದೆ.
    ಗೌಸಿಯಾ ಬೇಗಂ, ತಹಸೀಲ್ದಾರ್, ಕಂಪ್ಲಿ.

    ಕಂಪ್ಲಿ ತಾಲೂಕು ಜಲ ಸಮೃದ್ಧಿ ಪ್ರದೇಶವಾಗಿದ್ದು ನೀರಿನ ತೊಂದರೆಯಿಲ್ಲ. ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಕಡಿಮೆ ಆದಲ್ಲಿ, ಪೈಪು ಒಡೆದಲ್ಲಿ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದಲ್ಲಿ ಮಾತ್ರ ನೀರಿನ ಸರಬರಾಜಿಗೆ ಅಡ್ಡಿಯಾಗಬಹುದು. ಜನರು ನೀರನ್ನು ಹಿತಮಿತವಾಗಿ ಬಳಸುವ ಜೊತೆಗೆ, ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ, ಮಳೆ ನೀರಿನ ಕೊಯ್ಲು ಅಳವಡಿಸಿಕೊಳ್ಳುವಲ್ಲಿ ಜಾಗೃತಿ ತೋರಬೇಕು.
    ಕೆ.ಎಸ್.ಮಲ್ಲನಗೌಡ, ತಾಪಂ ಇಒ, ಕಂಪ್ಲಿ.

    ಕಂಪ್ಲಿ ಪಟ್ಟಣ ದಿನೇದಿನೆ ಅಭಿವೃದ್ಧಿ ಹೊಂದುತ್ತಿದ್ದು ಜನಸಂಖ್ಯೆಯೂ ಹೆಚ್ಚುತ್ತಿದೆ. ಅಗತ್ಯ ಪ್ರಮಾಣದ ಕುಡಿವ ನೀರನ್ನು, ಬಳಕೆ ನೀರನ್ನು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ದಿನ ಬಿಟ್ಟು ದಿನ ಕುಡಿವ ನೀರನ್ನು ಶುದ್ಧಿಕರಿಸಿ ನಲ್ಲಿ ಮೂಲಕ ಪೂರೈಸಲಾಗುತ್ತಿದೆ.
    ಡಾ.ಎನ್.ಶಿವಲಿಂಗಪ್ಪ, ಪುರಸಭೆ ಮುಖ್ಯಾಧಿಕಾರಿ, ಕಂಪ್ಲಿ.

    ಜವುಕು, ಸೋಮಲಾಪುರ, ಉಪ್ಪಾರಹಳ್ಳಿ ಕೆರೆಗಳ ಅಭಿವೃದ್ಧಿಗಾಗಿ ಸಲ್ಲಿಸಿದ ಪ್ರಸ್ತಾವನೆ ಅನುಮೋದನೆ ಹಂತದಲ್ಲಿವೆ. ನೆಲ್ಲೂಡಿ ಕೆರೆ ಆಧುನೀಕರಣ ಟೆಂಡರ್ ಹಂತದಲ್ಲಿದೆ. ಸಣಾಪುರ ನೀರಿನ ಯೋಜನೆ ರೀಎಸ್ಟಿಮೇಟ್ ಮಾಡಿ ಪ್ರಸ್ತಾವನೆ ಸಲ್ಲಿಸಿದೆ.
    ಬಿ.ಸುರೇಶ್‌ಕುಮಾರ್, ಜೆಇ, ಪಿಆರ್‌ಇಡಿ, ಕಂಪ್ಲಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts