More

    ದೇಶಹಳ್ಳಿ ಪದವೀಧರನ ಕೃಷಿ ಪ್ರೀತಿ: ಸಮಗ್ರ ಬೇಸಾಯದಿಂದ ವರ್ಷಕ್ಕೆ ಲಕ್ಷಾಂತರ ರೂ ಸಂಪಾದನೆ

    ಎಂ.ಪಿ.ವೆಂಕಟೇಶ್ ಮದ್ದೂರು
    ತಾಲೂಕಿನ ದೇಶಹಳ್ಳಿ ಗ್ರಾಮದ ಯುವ ರೈತ ಸಮಗ್ರ ಕೃಷಿಯಿಂದ ವಾರ್ಷಿಕ 15 ಲಕ್ಷ ರೂ. ಆದಾಯ ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
    ಗ್ರಾಮದ ದಿ.ಟಿ.ಪುಟ್ಟೇಗೌಡರ ಪುತ್ರ ಶೈಲೇಂದ್ರ ಅವರಿಗೆ 15 ಎಕರೆ ಜಮೀನು ಇದ್ದು, 10 ಎಕರೆಯದಲ್ಲಿ ರಾಜಮುಡಿ ಭತ್ತ, ಕಬ್ಬು ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಜತೆಗೆ 5 ಎಕರೆಯಲ್ಲಿ ತೋಟಗಾರಿಕಾ ಬೆಳೆ ಬೆಳೆದಿದ್ದು, 1,500 ಅಡಕೆ, 400 ತೆಂಗು, 121 ತೇಗ, 110 ಮಾವು, 70 ರಕ್ತ ಚಂದನ, 20 ಶ್ರೀಗಂಧ , 150 ಹೆಬ್ಬೇವು ಮರಗಳನ್ನು ಬೆಳೆಸಿದ್ದಾರೆ.
    ಜಾಯ್‌ಕಾಯಿ 100, 150 ಏಲಕ್ಕಿ ಗಿಡ, 200 ಮೆಣಸು ಬಳ್ಳಿಯನ್ನು ಸಾವಯವ ಮಾದರಿಯಲ್ಲಿ ಬೆಳೆದು ಗಮನ ಸೆಳೆಯುತ್ತಿದ್ದಾರೆ. ಇದರೊಟ್ಟಿಗೆ ಹಸು, ಕುರಿ ಹಾಗೂ ನಾಟಿಕೋಳಿಗಳನ್ನು ಸಾಕಿದ್ದಾರೆ. ಜಮೀನಿನಲ್ಲಿ ಬದುವಿನಲ್ಲಿ ಖಾಲಿ ಇರುವ ಜಾಗದಲ್ಲಿ ಜಾನುವಾರುಗಳಿಗೆ ಮೇವಿಗಾಗಿ ಸೀಮೆಹುಲ್ಲು ಹಾಗೂ ಮುಸುಕಿನ ಜೋಳವನ್ನು ಬೆಳೆದಿದ್ದಾರೆ. ವಿವಿಧ ರೀತಿಯ ಹೂವಿನ ಸಸಿಗಳನ್ನು ಬೆಳೆದು ಭೂಮಿಯನ್ನು ಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ.
    ಸಾವಯವಕ್ಕೆ ಹೆಚ್ಚಿನ ಒತ್ತು: ತೋಟದಲ್ಲಿ ಸಿಗುವ ಅಡಕೆ, ತೆಂಗಿನ ಗರಿ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡುತ್ತಾರೆ. ತಾವೇ ಸಾಕಿರುವ ಜಾನುವಾರುಗಳಿಂದ ಸಿಗುವ ಕೊಟ್ಟಿಗೆ ಗೊಬ್ಬರ ಮತ್ತು ಹೊರಗಡೆಯಿಂದ ಕೋಳಿ ಗೊಬ್ಬರ ತಂದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡಿಕೊಂಡು ಉತ್ತಮ ಬೆಳೆ ಬೆಳೆಯುತ್ತಿದ್ದಾರೆ.
    ತಾವೇ ಅಡಕೆ ಬೀಜಗಳನ್ನು ತಂದು ಸಸಿ ಮಾಡುತ್ತಾರೆ ಮತ್ತು ತೆಂಗಿನ ಸಸಿಗಳನ್ನು ಬೆಳೆದು ರಿಯಾಯಿತಿ ದರದಲ್ಲಿ ರೈತರಿಗೆ ಮಾರಾಟ ಮಾಡುವ ಮೂಲಕ ಆದಾಯದ ಮೂಲ ವಿಸ್ತರಿಸಿಕೊಂಡಿದ್ದಾರೆ. ಬೆಳೆಗಳನ್ನು ಬೆಳೆಯಲು 2 ಬೋರ್‌ವೆಲ್ ಕೊರೆಸಿದ್ದಾರೆ. ಒಂದು ಸೋಲಾರ್ ಪಂಪ್‌ಸೆಟ್‌ನೊಂದಿಗೆ ಬೆಳೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.
    ಕುಟುಂಬದಿಂದ ಸಾಥ್: ಶೈಲೇಂದ್ರ ಅವರು ಪದವಿ ವ್ಯಾಸಂಗ ಮಾಡಿದ್ದರೂ ಕೃಷಿ ಮೇಲಿನ ಪ್ರೀತಿಯಿಂದ ಮುಂದೆ ವ್ಯಾಸಂಗ ಮಾಡದೆ ಕೃಷಿಯಲ್ಲೇ ಈ ಸಾಧನೆ ಮಾಡಿದ್ದಾರೆ. ಅವರ ಕೃಷಿ ಪ್ರೀತಿಗೆ ಇಡೀ ಕುಟುಂಬ ಸಾಥ್ ನೀಡುತ್ತಿರುವುದು ವಿಶೇಷ. ಅವರು ಬೆಳೆದಿರುವ ಬೆಳೆಗಳನ್ನು ನೋಡಲು ಮತ್ತು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳಲು ತಾಲೂಕು, ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿ ಮಾಹಿತಿ ಪಡೆದು ಹೋಗುತ್ತಾರೆ.
    ಮನೆಯೇ ಬೃಂದಾವನ: ರೈತ ಶೈಲೇಂದ್ರ ಅವರ ಹೊಲ-ಗದ್ದೆ ಅಲ್ಲದೆ ಮನೆ ಆವರಣವೂ ಉದ್ಯಾನದಂತೆ ಭಾಸವಾಗುತ್ತದೆ. ಮನೆ ಆವರಣ ಪ್ರವೇಶ ಮಾಡುತ್ತಿದ್ದಂತೆ ಅಚ್ಚ ಹಸಿರು ಕಣ್ಣಿಗೆ ಮುದ ನೀಡುತ್ತದೆ. ಅಡಕೆ, ರಕ್ತ ಚಂದನ, ಸೇಬು, ಅಂಜೂರ, ಬಟರ್ ಫ್ರೂಟ್, ಸೀಬೆ, ಮಾವು, ಸಪೋಟ, ನೇರಳೆ ಹಣ್ಣಿನ ಮರಗಳು, ಹೂವಿನ ಗಿಡಗಳನ್ನು ಬೆಳೆದ್ದಾರೆ. ಯಾವುದೋ ಸುಂದರ ಉದ್ಯಾನಕ್ಕೆ ಹೋದಂತೆ ಅನುಭವ ನೀಡುತ್ತದೆ.

    ದೇಶಹಳ್ಳಿ ಪದವೀಧರನ ಕೃಷಿ ಪ್ರೀತಿ: ಸಮಗ್ರ ಬೇಸಾಯದಿಂದ ವರ್ಷಕ್ಕೆ ಲಕ್ಷಾಂತರ ರೂ ಸಂಪಾದನೆ

    ಜೇನು ಕೃಷಿಗೂ ಆದ್ಯತೆ: ಶೈಲೇಂದ್ರ ಈಗಾಗಲೇ ಜೇನು ಸಾಕಣೆಯನ್ನೂ ಮಾಡುತ್ತಿದ್ದು, ತೋಟದಲ್ಲಿ 10 ಜೇನು ಪೆಟ್ಟಿಗೆಯನ್ನು ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ 10 ಜೇನು ಪೆಟ್ಟಿಗೆಯನ್ನು ಇಲಾಖೆಯಿಂದ ಪಡೆದುಕೊಳ್ಳಲಿದ್ದಾರೆ. ಜೇನು ಸಾಕಣೆಯಿಂದ ಅಡಕೆ, ಏಲಕ್ಕಿ ಹಾಗೂ ಕಾಳುಮೆಣಸು ಬಳ್ಳಿಯಿಂದ ಉತ್ತಮ ಫಸಲು ಸಿಗಲಿದೆ. ಉಪ ಉತ್ಪನ್ನವಾಗಿ ಜೇನು ಕೂಡ ಸಿಗುವುದರಿಂದ ಲಾಭವೂ ಆಗಲಿದೆ.

    ದೇಶಹಳ್ಳಿ ಪದವೀಧರನ ಕೃಷಿ ಪ್ರೀತಿ: ಸಮಗ್ರ ಬೇಸಾಯದಿಂದ ವರ್ಷಕ್ಕೆ ಲಕ್ಷಾಂತರ ರೂ ಸಂಪಾದನೆ

    ಸವಲತ್ತು ಸಮರ್ಪಕ ಬಳಕೆ: ತೋಟಗಾರಿಕೆ, ಕೃಷಿ ಇಲಾಖೆಗಳಲ್ಲಿ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಶೈಲೇಂದ್ರ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳಿಂದ ಕಾಲ ಕಾಲಕ್ಕೆ ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಏಲಕ್ಕಿ, ಅಡಕೆ, ಜಾಯ್‌ಕಾಯಿ, ಮೆಣಸು ಸೇರಿದಂತೆ ವಿವಿಧ ಬೆಳೆಗಳು ಪ್ರಾರಂಭಿಕ ಹಂತದಲ್ಲಿದ್ದು, ಇನ್ನು ಕೆಲವೇ ತಿಂಗಳಲ್ಲಿ ಫಸಲು ನೀಡಲು ಆರಂಭಿಸುತ್ತವೆ. ಒಟ್ಟಾರೆ ಶ್ರಮ ಹಾಗೂ ಆಸಕ್ತಿ ವಹಿಸಿ ದುಡಿದರೆ ಭೂತಾಯಿ ಕೈ ಬಿಡಳು ಎಂಬುದನ್ನು ಈ ಯುವ ರೈತ ತೋರಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಶೈಲೇಂದ್ರ ಮೊ.9964346834 ಸಂಪರ್ಕಿಸಬಹುದು.
    ಕಷ್ಟ ಹಾಗೂ ಇಷ್ಟಪಟ್ಟು ಕೃಷಿ ಮಾಡಿದರೆ ನಷ್ಟವಾಗುವುದಿಲ್ಲ. ಕಬ್ಬು, ಭತ್ತದ ಜತೆಗೆ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡರೆ ಒಂದಲ್ಲ ಒಂದು ಬೆಳೆಯಿಂದ ಲಾಭ ಪಡೆಯಬಹುದು. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎನ್ನುತ್ತಾರೆ ಯುವ ರೈತ ಶೈಲೇಂದ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts