More

    ಭೂಮಿಯೇ ಇಲ್ಲದ ಮೇಲೆ ನಾಡಕಚೇರಿ ಉದ್ಘಾಟನೆ ಏಕೆ?

    ವಿಜಯವಾಣಿ ಸುದ್ದಿ ಜಾಲ ಚನ್ನರಾಯಪಟ್ಟಣ
    ರೈತರ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗೆಂದು ಸ್ವಾಧೀನ ಪಡಿಸಿಕೊಂಡು, ಈಗ ನೂತನ ನಾಡ ಕಚೇರಿ ಕಟ್ಟಡ ಉದ್ಘಾಟನೆಗೆ ಮುಂದಾಗುವುದು ಹಾಸ್ಯಾಸ್ಪದವಾಗಿದೆ. ರೈತರ ಭೂಮಿ ಇಲ್ಲದ ಮೇಲೆ ನಾಡಕಚೇರಿ ಏಕೆ ಬೇಕು ಎಂದು ಹೋರಾಟಗಾರ ನಂಜಪ್ಪ ಪ್ರಶ್ನಿಸಿದರು.
    ಭೂ ಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣ ನಾಡಕಚೇರಿ ಮುಂಭಾಗ ಕೈಗೊಂಡಿರುವ ರೈತರ ಹೋರಾಟ ಗುರುವಾರ 640ನೇ ದಿನ ಪೂರೈಸಿದ ಹಿನ್ನೆಲೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದರು.
    13 ಹಳ್ಳಿಗಳ ಸಾವಿರಾರು ಎಕರೆ ಪಲವತ್ತಾದ ಕೃಷಿ ಭೂಮಿ ಉಳಿವಿಗಾಗಿ 640 ದಿನಗಳಿಂದ ಹೋರಾಟ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ರೈತರ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಿ ನಾಡಕಚೇರಿ ಉದ್ಘಾಟನೆಗೆ ಮುಂದಾಗಿರುವುದು ಸರಿಯಲ್ಲ. ಸಮಸ್ಯೆ ಪರಿಹಾರಕ್ಕೆ ಮುಂದಾಗದೆ ಉದ್ಘಾಟನೆಗೆ ಮುಂದಾದರೆ ಅಂದು ದೊಡ್ಡಮಟ್ಟದಲ್ಲಿ ಪ್ರತಿಭಟನೆಗೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 8 ತಿಂಗಳು ಕಳೆದರೂ ರೈತರ ನ್ಯಾಯಯುತ ಬೇಡಿಕೆ ಈಡೇರಿಸುವ ಲಕ್ಷಣವಿಲ್ಲ. ಅಧಿಕಾರವಿಲ್ಲದಾಗ ನೀಡಿದ ಭರವಸೆಯನ್ನು ಅಧಿಕಾರಕ್ಕೆ ಬಂದಾಗ ಈಡೇರಿಸದಿರುವುದು ಸರಿಯಲ್ಲ ಎಂದರು.
    ಹೋರಾಟಗಾರ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ರೈತರು ಕೃಷಿ ಚಟುವಟಿಕೆಗಳ ನಡುವೆಯೂ 640 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ನಾಡಕಚೇರಿ ಉದ್ಘಾಟನೆಗೆ ಆಗಮಿಸುವ ಸಚಿವರ ಗಮನ ಸೆಳೆದು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
    ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಸುರೇಶ್ ಮಾತನಾಡಿ, ರೈತರ ಮನವಿಯನ್ನು ತಾಲೂಕು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರಿಗೆ ತಲುಪಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts