More

    ಸೌಹಾರ್ದದ ಹಾದಿ; ಮಾತುಕತೆಯಿಂದ ಸಮಸ್ಯೆ ಪರಿಹಾರ..

    ಅನಗತ್ಯ ವಿವಾದ, ದ್ವೇಷ ಅಥವಾ ಕಿಚ್ಚಿನಿಂದ ಸಾಧಿಸುವಂಥದ್ದು ಏನಿಲ್ಲ. ಬದಲಿಗೆ, ಅದರಿಂದ ಸಮಾಜದ ಸ್ವಾಸ್ಥ್ಯಕ್ಕೆ ಹಾನಿ. ನಮ್ಮದು ಒಕ್ಕೂಟ ವ್ಯವಸ್ಥೆ. ರಾಜ್ಯ-ರಾಜ್ಯಗಳ ನಡುವೆ ಭಿನ್ನಾಭಿಪ್ರಾಯ, ವಿವಾದ ತಲೆದೋರುವುದು ಸಹಜವಾದರೂ, ಅದನ್ನು ಬಗೆಹರಿಸಿಕೊಳ್ಳುವ ಸೂಕ್ತ ಮಾರ್ಗವನ್ನು ಅನುಸರಿಸಬೇಕು. ಪರಸ್ಪರ ಸಮನ್ವಯ, ಸಹಕಾರ, ಗೌರವದ ಭಾವನೆ ಈ ನಿಟ್ಟಿನಲ್ಲಿ ಅಗತ್ಯ. ಅದರಲ್ಲೂ ಜಲವಿವಾದಗಳು ದೀರ್ಘ ಕಾನೂನು ಸಮರಕ್ಕೆ ಸಾಕ್ಷಿಯಾದ, ಇದರಿಂದ ಮಹತ್ವದ ಯೋಜನೆಗಳು ದಶಕಗಟ್ಟಲೇ ನನೆಗುದಿಗೆ ಬಿದ್ದ ನಿದರ್ಶನಗಳಿವೆ. ಕರ್ನಾಟಕ-ತಮಿಳುನಾಡು, ಪಂಜಾಬ್-ಹರಿಯಾಣ, ಆಂಧ್ರಪ್ರದೇಶ-ತೆಲಂಗಾಣ, ಮಹಾರಾಷ್ಟ್ರ-ಆಂಧ್ರ ಹೀಗೆ ಹಲವು ರಾಜ್ಯಗಳ ನಡುವಿನ ವಿವಾದಗಳು ನಮ್ಮ ಕಣ್ಣೆದುರಿಗಿವೆ. ಜಲವಿವಾದ ಮಾತ್ರವಲ್ಲ ಇತರ ಯಾವುದೇ ತಂಟೆಗಳಿದ್ದರೂ ಮಾತುಕತೆ, ಹಲವು ಸುತ್ತಿನ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಲು ಯತ್ನಿಸಬೇಕು. ಆಗಲೂ ಪ್ರಯೋಜನವಾಗದಿದ್ದರೆ ಕಾನೂನು ಹೋರಾಟವನ್ನು ಅಂತಿಮ ಆಯ್ಕೆಯಾಗಿ ಪರಿಗಣಿಸಬೇಕು. ಆದರೆ, ನ್ಯಾಯಾಲಯದ ಮೆಟ್ಟಿಲು ಹತ್ತಿದ ಮೇಲೆ ಪ್ರಕರಣಗಳು ಯಾವಾಗ ಮುಗಿಯುತ್ತವೆ ಎಂದು ಹೇಳಲಾಗದು. ಹಲವು ವರ್ಷಗಳ ಕಾಲ ಆ ಪ್ರಕ್ರಿಯೆ ಸಾಗುವುದರಿಂದ ಆರ್ಥಿಕವಾಗಿ ನಷ್ಟ ಸಂಭವಿಸುವ ಜತೆಗೆ, ಮಹತ್ವದ ಯೋಜನೆಗಳು ಗ್ರಹಣ ಹಿಡಿದು ಎರಡೂ ರಾಜ್ಯಗಳಿಗೆ ನಷ್ಟವಾಗುತ್ತದೆ.

    ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಮಾತುಕತೆ ಮೂಲಕ ಮಹತ್ವದ ವಿಷಯಗಳ ಬಗ್ಗೆ ಸಹಮತಕ್ಕೆ ಬಂದಿರುವುದು ಈ ಹೊತ್ತಲ್ಲಿ ಆಶಾದಾಯಕ ಬೆಳವಣಿಗೆ. ಮಹಾರಾಷ್ಟ್ರದಲ್ಲಿ ಅತಿಯಾದ ಮಳೆ ಸುರಿದು, ಅಲ್ಲಿನ ನದಿಗಳು ಭರ್ತಿಯಾದಾಗ ಅಣೆಕಟ್ಟೆಗಳಿಂದ ಬಿಡುವ ನೀರು ಕರ್ನಾಟಕದ ಗಡಿಜಿಲ್ಲೆಗಳಲ್ಲಿ ಪ್ರವಾಹವನ್ನು ಸೃಷ್ಟಿಸುತ್ತದೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳು ಈ ಸಮಸ್ಯೆಯನ್ನು ಬಹುತೇಕ ಪ್ರತಿ ಮಳೆಗಾಲದಲ್ಲೂ ಎದುರಿಸುತ್ತವೆ. ಹಾಗಾಗಿ, ಕೃಷ್ಣಾ ಕೊಳ್ಳದ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ, ಕೃಷ್ಣಾ ಮತ್ತು ಭೀಮಾ ನದಿಗಳ ಪಾತ್ರದ ಜಲಾಶಯಗಳಿಗೆ ಒಳಹರಿವು, ನೀರು ಸಂಗ್ರಹ ಪ್ರಮಾಣದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಹಂಚಿಕೊಳ್ಳಲು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರ ಸಮ್ಮತಿಸಿವೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಉಭಯ ರಾಜ್ಯಗಳ ಸಚಿವರಮಟ್ಟದ ಸಮನ್ವಯ ಸಮಿತಿಯ ಸಭೆಯಲ್ಲಿ ನಾಲ್ಕು ಮಹತ್ವದ ವಿಷಯಗಳ ಬಗ್ಗೆ ಸಹಮತಕ್ಕೆ ಬರಲಾಗಿದೆ. ದೂದಗಂಗಾ ಯೋಜನೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸುವ ರಾಜ್ಯದ ಕನಸಿಗೂ ಮಹಾರಾಷ್ಟ್ರ ಸ್ಪಂದಿಸಿದ್ದು, ಈ ಯೋಜನೆ ಪೂರ್ಣಗೊಂಡರೆ ಕರ್ನಾಟಕದ 15,167 ಹೆಕ್ಟೇರ್ ಜಮೀನು ನೀರಾವರಿಗೆ ಒಳಪಡಲಿದೆ. ಕೃಷ್ಣಾ ಐತೀರ್ಪಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ಜಂಟಿಹೋರಾಟ ನಡೆಸುವ ಸಂಬಂಧ ಉಭಯ ರಾಜ್ಯಗಳು ಒಡಂಬಡಿಕೆಗೆ ಬಂದಿವೆ. ಪರಸ್ಪರ 4 ಟಿಎಂಸಿ ಹಂಚಿಕೆಗೂ ಒಪ್ಪಿಗೆಯ ಮುದ್ರೆ ಒತ್ತಲಾಗಿದೆ. ತಜ್ಞರ ಸಲಹೆಗಳನ್ನು ಆಧರಿಸಿ ಮತ್ತು ಜನರ ಹಿತವನ್ನು ಪರಿಗಣಿಸಿ ಫಲಪ್ರದ ಚರ್ಚೆ ನಡೆಸಿದರೆ ಸಮಸ್ಯೆಗಳಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದಕ್ಕೆ ಇದು ಉತ್ತಮ ನಿದರ್ಶನ. ಗಡಿ ವಿವಾದದ ವಿಷಯದಲ್ಲೂ ಇದೇ ಬಗೆಯ ಸೌಹಾರ್ದ ತೋರಿದರೆ, ಆ ಸಮಸ್ಯೆಯೂ ಅಂತ್ಯ ಕಾಣಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts