More

    ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಿ

    ಎಂ.ಕೆ.ಹುಬ್ಬಳ್ಳಿ: ಲಾಕ್‌ಡೌನ್ ಘೋಷಣೆ ಆದಾಗಿನಿಂದ ಕೆಲಸವಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ. ಸರ್ಕಾರ ಪಡಿತರ ಅಕ್ಕಿ ನೀಡುತ್ತಿದೆ. ಆದರೆ, ಮನೆ ನಿರ್ವಹಣೆಯ ಇನ್ನುಳಿದ ಖರ್ಚು ಭರಿಸಲು ಪರದಾಡುವಂತಾಗಿದೆ ಎಂದು ಸ್ಥಳೀಯ ಅಂಬೇಡ್ಕರ್ ಗಲ್ಲಿಯ ದಲಿತ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

    ಸ್ಥಳೀಯ ಪಟ್ಟಣ ಪಂಚಾಯಿತಿ ಕಚೇರಿಗೆ ಶುಕ್ರವಾರ ಆಗಮಿ ಸಿದ ಮಹಿಳೆಯರು ಮುಖ್ಯಾಧಿಕಾರಿ ಬಳಿ ಸಹಾಯಕ್ಕಾಗಿ ಮನವಿ ಮಾಡಿದರು. ಬಡವರು ಉಪವಾಸ ಇರಬಾರದೆಂಬ ಉದ್ದೇಶ ದಿಂದ ಲಾಕ್‌ಡೌನ್ ವೇಳೆ ಸರ್ಕಾರ ಎಲ್ಲ ಬಡ ಹಾಗೂ ಮಧ್ಯಮ ಕುಟುಂಬಗಳಿಗೆ ಪಡಿತರ ವಿತರಿಸುತ್ತಿದೆ. ಆದರೆ, ಪಡಿತರದಿಂದ ಮಾತ್ರ ನಾವು ಅಡುಗೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಬೇಕಾದ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದೇವೆ. ದುಡಿಮೆ ಇಲ್ಲದೆ ಮನೆಯಲ್ಲೇ ಕುಳಿತು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದೇವೆ ಎಂದರು.

    ಕೇಂದ್ರ ಸರ್ಕಾರದಿಂದ ಬಡವರಿಗೆ ನೀಡಲಾದ ಸಿಲಿಂಡರ್‌ಗಳನ್ನು ಈಗ ಉಚಿತವಾಗಿ ತುಂಬಿಕೊಡಲಾಗುತ್ತಿದೆ. ಆದರೆ, ರಾಜ್ಯ ಸರ್ಕಾರದಿಂದ ವಿತರಿಸಲಾದ ಗ್ಯಾಸ್ ಸಿಲಿಂಡರ್‌ಗಳನ್ನು ಉಚಿತವಾಗಿ ತುಂಬಿ ಕೊಡಲಾಗುತ್ತಿಲ್ಲ. ಇದರಿಂದ ಗ್ಯಾಸ್ ತುಂಬಿಸುವುದೇ ಕಷ್ಟವಾಗಿದೆ. ತಕ್ಷಣ ಸಂಬಂಧಿಸಿದ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಬೇಕು. ದಾನಿಗಳು ಸಹ ನಮ್ಮಂತವರ ಕಷ್ಟಕ್ಕೆ ಕೈಜೋಡಿಸಿ ನೆರವಿಗೆ ಧಾವಿಸಬೇಕು ಎಂದು ವಿನಂತಿಸಿದ ಮಹಿಳೆಯರು ನಮಗೂ ಉಚಿತವಾಗಿ ಗ್ಯಾಸ್ ಸಿಲಿಂಡರ್ ತುಂಬಿಕೊಡಬೇಕು ಎಂದು ಆಗ್ರಹಿಸಿದರು. ಸಮಸ್ಯೆ ಆಲಿಸಿದ ಮುಖ್ಯಾಧಿಕಾರಿ ಐ.ಸಿ.ಸಿದ್ನಾಳ, ತಮ್ಮೆಲ್ಲರ ಕುಟುಂಬದ ತಲಾ ಒಬ್ಬರ ಹೆಸರನ್ನು ಬರೆದು ಪಟ್ಟಿ ನೀಡಿ. ನಮ್ಮ ಹಿರಿಯ ಅಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಮಹಿಳೆಯರು ಅಲ್ಲಿಂದ ತೆರಳಿದರು. ದಾಕ್ಷಾಯಿಣಿ ಧೂಳಪ್ಪನವರ, ಗಂಗವ್ವ ಕೋಲಕಾರ, ದೇವಕ್ಕ ಕೋಲಕಾರ, ಗಂಗವ್ವ ಪಾಗದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts