More

    ಆಟಿ ಕಳಂಜನಿಗೂ ಕರೊನಾ ಸಂಕಷ್ಟ

    ಬದಿಯಡ್ಕ: ಆಟಿ ತಿಂಗಳ ವ್ಯಾದಿ-ಸಂಕಷ್ಟಗಳನ್ನು ನಿವಾರಿಸುವ ಆಟಿ ಕಳಂಜ ಅಥವಾ ಆದಿ ಬೇಡನ್ ನಾಡಿಗಿಳಿಯುವ ಕಾಲ ಇದು. ಆದರೆ ಈ ಬಾರಿ ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ಕಳಂಜನೂ ಹೊರಗಿಳಿಯದಂತಾಗಿದೆ.

    ಉತ್ತರ ಮಲಬಾರ್- ತುಳುನಾಡಿನಾದ್ಯಂತ ಕಳಂಜ ವಿವಿಧ ಹೆಸರು, ರೂಪಗಳಲ್ಲಿ ಏಕ ಪರಿಕಲ್ಪನೆಯಡಿ ಸಾಮಾಜಿಕ ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ಜಾನಪದ ಆಚರಣೆಯೂ, ಕಲೆಯೂ ಆಗಿ ನಡೆದುಬಂದಿದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಹಿತ ಕೇರಳದ ಮಲಬಾರ್ ಪ್ರದೇಶಗಳಲ್ಲಿ ಈ ಕಲಾಪ್ರಕಾರ ಸಮಗ್ರವಾಗಿ ಬೆಳೆದುಬಂದಿದೆ.

    ತುಳುನಾಡಿನಲ್ಲಿ ನಲಿಕೆ ಸಮುದಾಯದವರು ಕಳಂಜ ಕುಣಿತವನ್ನು ಅನುಸರಿಸುವ ವಿಭಾಗಗಳಾಗಿದ್ದರೆ, ಕಾಸರಗೋಡಿನಾಚೆಗಿನ ಮಲಬಾರ್ ವಲಯದಲ್ಲಿ ಮಲಯ ಮತ್ತು ಪಾಣಾರರು ಆದಿ ಬೇಡನ್ ನಾಡಿಗಿಳಿದು ಮನೆಮನೆಗಳಿಗೆ ತೆರಳಿ ದುರಿತ ನಿವಾರಿಸುವ ಪುಟ್ಟ ದೈವಗಳೆಂದೇ(ಕುಟ್ಟಿ ತೈಯ್ಯಂ) ಪ್ರತೀತಿ. ಮಹಾಭಾರತದ ಪಾಂಡವರಲ್ಲಿ ಓರ್ವನಾದ ಅರ್ಜುನ ಪಾಶುಪತಾಸ್ತ್ರ ಪಡೆಯಲು ಶಿವನನ್ನು ಸಂಸ್ತುತಿಸಿ ತಪಗೈದ ಪ್ರಕರಣಗಳ ಸುತ್ತ ಹೆಣೆದ ಕತೆಯ ಪ್ರತೀಕವಾಗಿ ಕಳಂಜ ಬಹುವಿಸ್ತಾರದ ಜಾನಪದೀಯ ಮಹತ್ವ ಹೊಂದಿದೆ.

    ಕರ್ಕಾಟಕದ ಈ ಥೈಯಂ ಮನೆಗಳಿಗೆ ಆಗಮಿಸಿದಾಗ ಮನೆಯ ಹಿರಿಯ ಮಹಿಳೆ ಭಸ್ಮ ಬೆರೆಸಿದ ನೀರು ಮತ್ತು ಬೆಳಗುವ ಆರತಿಗಳೊಂದಿಗೆ ಅಂಗಳಕ್ಕೆ ಬರುತ್ತಾಳೆ. ಹರಿವಾಣ ಮತ್ತು ದೀಪವನ್ನು ಮೂರು ಬಾರಿ ಉತ್ತರಾಭಿಮುಖವಾಗಿ ತಿರುಗಿಸಿ ಭಸ್ಮ ಬೆರೆಸಿದ ನೀರನ್ನು ಕೃಷಿ ತೋಟ- ಹೊಲದತ್ತ ಚೆಲ್ಲಲಾಗುತ್ತದೆ. ಸಮಾಜ ಕಲ್ಯಾಣಕ್ಕಾಗಿ ಸ್ವತಃ ಶಿವನೇ ಬೇಟೆಗಾರನಾಗಿ ಸಂಕಷ್ಟ ನಿವಾರಿಸುತ್ತಾನೆಂದು ನಂಬಲಾಗುತ್ತದೆ. ಪ್ರಸ್ತುತ ಕರೊನಾ ಭಯದಿಂದ ಥೈಯಂ ಅಥವಾ ಬೇಡನನ್ನು ಬಂಧಿಸಲಾಗಿದೆ. ಮನೆಮನೆಗಳಿಗೆ ತೆರಳಲು ಅನುಮತಿ ಇಲ್ಲದಿರುವುದರಿಂದ ತಿರುಗಾಟ ಮೊಟಕುಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts