More

    ಮತ್ತೆ ಕೃತಕ ನೆರೆಯಿಂದ ಸಂಕಷ್ಟ, ರಾಜಕಾಲುವೆಯಲ್ಲಿ ಹೂಳು ಸಂಗ್ರಹ

    ಭರತ್ ಶೆಟ್ಟಿಗಾರ್ ಮಂಗಳೂರು

    ಮಳೆಗಾಲ ದೂರವಾಗಿ ಚಳಿ, ಬೇಸಿಗೆ ದಿನಗಳು ಹತ್ತಿರವಾಗುತ್ತಿವೆ. ಈ ಮಧ್ಯೆ ಆಗಾಗ್ಗೆ ಸುರಿಯುತ್ತಿರುವ ಮಳೆ ಮಂಗಳೂರಿನ ಕೆಲವು ಭಾಗದ ಜನರಲ್ಲಿ ಭಯ ಹುಟ್ಟಿಸಿದೆ. ಕಾರಣ ಹಠಾತ್ ಆಗಿ ಎದುರಾಗುವ ಕೃತಕ ನೆರೆ.

    ಮಳೆಗಾಲದಲ್ಲಿ ಅಬ್ಬರದ ಮಳೆಗೆ ಕಾಡದ ಆತಂಕ, ಪ್ರಸ್ತುತ ಸುರಿಯುತ್ತಿರುವ ಮಳೆಯಿಂದ ಎದುರಾಗಿದೆ. ಮುಖ್ಯವಾಗಿ ಕೊಟ್ಟಾರ ಚೌಕಿ, ಮಾಲೆಮಾರ್, ಕೂಳೂರು 4ನೇ ಮೈಲು, ಕುದ್ರೋಳಿ, ಅಳಕೆ, ಕೊಡಿಯಾಲ್‌ಬೈಲ್ ಭಾಗದಲ್ಲಿ ಮಳೆ ನೀರು ರಾಜಕಾಲುವೆ ಮೀರಿ ಹೊರಕ್ಕೆ ಬರುತ್ತಿದೆ. ಕಾಲುವೆಗಿಂತ ತಗ್ಗಿನಲ್ಲಿರುವ ಈ ಪ್ರದೇಶಗಳಲ್ಲಿ ವಾಸಿಸುವ ಜನರು, ಅಂಗಡಿ, ಹೋಟೆಲ್ ಮಾಲೀಕರು ಪ್ರತಿ ವರ್ಷದಂತೆ ಈ ಬಾರಿಯೂ ಕೃತಕ ನೆರೆಯಿಂದ ಸಂಕಷ್ಟ ಅನುಭವಿಸಿದ್ದಾರೆ.

    ಇನ್ನೊಂದೆಡೆ ಕೂಳೂರು 4ನೇ ಮೈಲಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ರಾಜಕಾಲುವೆಗೆ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗುವಲ್ಲಿ ಸಮಸ್ಯೆಯಾಗಿದೆ. ತಿಂಗಳ ಹಿಂದೆ ಪಾಲಿಕೆಯಿಂದ ಜರುಗಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಬೇಗ ಕೆಲಸ ಮುಗಿಸುವಂತೆ ಮೇಯರ್ ಸೂಚಿಸಿದ್ದರು. ಆದರೆ ಕಾಮಗಾರಿ ನಿಧಾನವಾಗಿ ಕೃತಕ ನೆರೆ ಸೃಷ್ಟಿಯಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.

    2018ರ ನೆನಪು ಮಾಸಿಲ್ಲ: 2018ರ ಮೇ ಅಂತ್ಯದಲ್ಲಿ ಸುರಿದ ಕುಂಭದ್ರೋಣ ಮಳೆಗೆ ಮಂಗಳೂರು ನಗರ ಭಾಗಶಃ ಮುಳುಗಡೆಯಾಗಿತ್ತು. ಅದರಲ್ಲೂ ಕೊಟ್ಟಾರ ಚೌಕಿ, ಮಾಲೆಮಾರ್, 4ನೇ ಮೈಲು, ಮಾಲಾಡಿ ಎಸ್ಟೇಟ್ ಪ್ರದೇಶದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ಅಂದು ಒಂದೇ ದಿನಕ್ಕೆ 400 ಮಿ.ಮೀ. ಮಳೆ ಸುರಿದಿತ್ತು. ಮಹಾನಗರ ಪಾಲಿಕೆ ಮಳೆಗಾಲಕ್ಕೆ ಸಿದ್ಧತೆ ಮಾಡದೆ ತೋಡಿನ ಹೂಳು ತೆಗೆಯದೇ ಮಳೆ ನೀರು ಸರಿಯಾಗಿ ಹರಿದು ಹೋಗಲು ಸಾಧ್ಯವಾಗದೆ ಯಾರೂ ಯೋಚಿಸದಂಥ ನೆರೆ ಬಂದಿತ್ತು. ಕೊಟ್ಟಾರ ಭಾಗದ ಜನರು ಈಗಲೂ ಅದನ್ನು ನೆನಪಿಸಿಕೊಳ್ಳುತ್ತಾರೆ.

    ಎರಡು ಬಾರಿ ಹೂಳು ತೆರವು: ಮಹಾನಗರ ಪಾಲಿಕೆಯವರು ಪ್ರತಿವರ್ಷದಂತೆ ಈ ಬಾರಿಯೂ ಮೇ ತಿಂಗಳಲ್ಲಿ ನಗರ ವ್ಯಾಪ್ತಿಯ ಎಲ್ಲ ರಾಜಕಾಲುವೆಗಳ ಹೂಳು ತೆರವು ಮಾಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಅಷ್ಟಾಗಿ ಸಮಸ್ಯೆಯಾಗಿಲ್ಲ. ಆದರೆ ಮಳೆಗೆ ಗುಡ್ಡ ಪ್ರದೇಶದಿಂದ ಹರಿದು ಬಂದ ನೀರಿನೊಂದಿಗೆ, ಕೆಸರು ಮಣ್ಣು, ಮರಳು, ತ್ಯಾಜ್ಯ ಬಂದು ಸೇರಿ ಮತ್ತೆ ರಾಜ್ಯಕಾಲುವೆಯ ಕೊನೇ ಭಾಗದಲ್ಲಿ ಸಂಗ್ರಹಗೊಂಡಿದೆ. ಮೇ ತಿಂಗಳಲ್ಲಿ ಹೂಳು ತೆರವು ಮಾಡಿದರೂ, ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ಮತ್ತೊಮ್ಮೆ ಹೂಳು ತೆರವು ಮಾಡುವುದರಿಂದ ನೆರೆ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಎನ್ನುವುದು ಆಗ್ರಹವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.

    ತ್ಯಾಜ್ಯವೂ ಕಾರಣ: ಭಾರಿ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ವಿವಿಧ ರೀತಿಯ ತ್ಯಾಜ್ಯಗಳು ರಾಜಕಾಲುವೆ ಸೇರಿತ್ತಿವೆ. ಇವು ಅಲ್ಲಲ್ಲಿ ಇರುವ ಪೈಪ್, ಕೇಬಲ್‌ಗಳಲ್ಲಿ ಸಿಲುಕಿ ನೀರು ಹರಿಯುವುದಕ್ಕೆ ತಡೆಯಾಗುತ್ತಿದೆ. ಈ ಹಿಂದೆ ತೆಗೆಯಲಾಗಿದ್ದರೂ, ಮತ್ತೆ ಎತ್ತರಕ್ಕೆ ಹುಲ್ಲು-ಪೊದೆಗಳು ಬೆಳೆದು ನಿಂತಿವೆ.

    ನಿರೀಕ್ಷೆಯೇ ಇರದಂತೆ ಮಳೆ ಅಬ್ಬರಿಸಿದ ಪರಿಣಾಮ ಕೃತಕ ನೆರೆ ಉಂಟಾಗಿದೆ. ಇದರಿಂದ ನೀರು ಪ್ರವಾಹೋಪಾದಿಯಲ್ಲಿ ಹರಿದು ಬಂದು ರಾಜಕಾಲುವೆ ಉಕ್ಕಿ ಹರಿದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ದಿನಗಳಲ್ಲಿ ನೆರೆ ಉಂಟಾಗದಂತೆ ಯಾವ ರೀತಿ ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯವಿದ್ದರೆ ಸೂಕ್ತ ಕಾಮಗಾರಿ ನಡೆಸಲಾಗುವುದು.

    ಪ್ರೇಮಾನಂದ ಶೆಟ್ಟಿ
    ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts