More

    ಮೂರು ವಾರ ನಿರ್ಣಾಯಕ: ರಾಜ್ಯದಲ್ಲಿ ಕೋವಿಡ್ ನಾಲ್ಕನೇ ಅಲೆ ಸಂಭಾವ್ಯತೆ..

    | ಪಂಕಜ ಕೆ.ಎಂ. ಬೆಂಗಳೂರು

    ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡು ಸಾವಿರ ಗಡಿ ದಾಟಿದೆ. ಇದರೊಂದಿಗೆ ನಾಲ್ಕನೇ ಅಲೆ ಭೀತಿ ಎದುರಾಗಿದೆ. ಹೊಸ ಕೋವಿಡ್ ತಳಿ ಕಾಣಿಸಿಕೊಂಡರೆ ನಾಲ್ಕನೇ ಅಲೆ ನಿಶ್ಚಿತವಾದರೂ ಆತಂಕಪಡುವ ಅಗತ್ಯವಿಲ್ಲ. ಮುಂದಿನ 2-3 ವಾರಗಳು ನಿರ್ಣಾಯಕವಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

    ಕಳೆದ ಹತ್ತು ದಿನಗಳಲ್ಲಿ ರಾಜ್ಯದಲ್ಲಿ 1,927 ಸೋಂಕು ಪ್ರಕರಣಗಳು ವರದಿಯಾಗಿದ್ದು, ದಿನದ ಸೋಂಕು ಪ್ರಮಾಣ ದರ ಶೇ.1ಕ್ಕಿಂತ ಹೆಚ್ಚಿದೆ. ಈ ಅವಧಿಯಲ್ಲಿ ಕೋವಿಡ್​ನಿಂದ ಒಂದು ಸಾವು ಸಂಭವಿಸಿದ್ದು, 1,443 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಅತ್ತ, ನೆರೆಯ ಮಹಾರಾಷ್ಟ್ರದಲ್ಲಿ ಹಾಗೂ ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು ಆತಂಕ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಕೇರಳದ ಪ್ರಮುಖ ಮೂರು ನಗರಗಳಲ್ಲಿ ಸೋಂಕು ಏರುಗತಿಯಲ್ಲಿದೆ.

    ಆದರೆ, ರಾಜ್ಯದಲ್ಲಿ ಏರಿಕೆ ಹೆಚ್ಚಿನ ಪ್ರಮಾಣದಲ್ಲಿಲ್ಲ. ದೈನಂದಿನ ಸೋಂಕು ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆಯಾದರೂ, ಆಸ್ಪತ್ರೆ ದಾಖಲಾತಿ ಪ್ರಮಾಣ ತಗ್ಗಿದೆ. ಹೆಚ್ಚಿನವರು ಮನೆ ಆರೈಕೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೆದರುವ ಅಗತ್ಯವಿಲ್ಲ. ಬದಲಿಗೆ ಕೋವಿಡ್ ನಿಯಮಗಳನ್ನು ಮುಂದುವರಿಸುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡಿದ್ದಾರೆ.

    ಸಂಭಾವ್ಯ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರಕ್ಕೆ ಸೂಚಿಸಲಾಗಿದೆ. ಇದರ ಹೊರತಾಗಿ ಜನರು ತಪ್ಪದೇ ನಿಯಮ ಪಾಲಿಸಬೇಕು.

    | ಡಾ. ಎಂ.ಕೆ. ಸುದರ್ಶನ್ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ

    ಹೊಸ ತಳಿಯಿಂದ ನಾಲ್ಕನೇ ಅಲೆ?: ಸದ್ಯರ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ನಾಲ್ಕನೇ ಅಲೆ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಮುಂದಿನ 2-3 ವಾರಗಳು ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಆಸ್ಪತ್ರೆ ದಾಖಲಾತಿಯನ್ನು ಗಮನಿಸಬೇಕು. ದಿನದ ಸೋಂಕು ಪ್ರಮಾಣ ದರ ಶೇ.5 ಮೀರದಿದ್ದರೆ ತೊಂದರೆ ಇಲ್ಲ. ಅಲ್ಲದೆ, ರಾಜ್ಯದಲ್ಲಿ ಮೂರನೇ ಅಲೆ (ಒಮಿಕ್ರಾನ್ ತಳಿ ಹಾಗೂ ಅದರ ಉಪತಳಿ) ನಂತರ ಯಾವುದೇ ಹೊಸ ತಳಿ ಪತ್ತೆಯಾಗಿಲ್ಲ. ಹೀಗಾಗಿ ಆತಂಕ ಬೇಡ ಎನ್ನುತ್ತಾರೆ ನಿಮ್ಹಾನ್ಸ್​ನ ವೈರಾಣು ತಜ್ಞ ಡಾ.ವಿ. ರವಿ.

    ಲಸಿಕೆ ಪಡೆದವರಿಗೂ ಸೋಂಕು?: ರಾಜ್ಯದಲ್ಲಿ ಹೊಸ ತಳಿ ಕಾಣಿಸಿಕೊಂಡಲ್ಲಿ ಲಸಿಕೆ ಪಡೆದವರಿಗೂ ಹಾಗೂ ಈ ಹಿಂದೆ ಸೋಂಕಿಗೆ ಒಳಗಾದವರಿಗೂ ಸೋಂಕು ಹರಡಬಹುದು. ಆದರೆ, ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ. ಇದರಿಂದ ಆಸ್ಪತ್ರೆ ದಾಖಲಾತಿ ಹಾಗೂ ಸಾವಿನ ಪ್ರಮಾಣ ಹೆಚ್ಚಿರುವುದಿಲ್ಲ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯುವುದು ಒಳ್ಳೆಯದು. ಇದರಿಂದ ಸೋಂಕಿನ ತೀವ್ರತೆ ತಗ್ಗಲಿದೆ ಎಂದು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್ ತಿಳಿಸಿದ್ದಾರೆ.

    ಕೋವಿಡ್ ನಾಲ್ಕನೇ ಅಲೆಯಿಂದ ಪಾರಾಗಲು ಜನರು ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು. ಮುಖ್ಯವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಅನಾರೋಗ್ಯಪೀಡಿತರು ಬಹಳ ಎಚ್ಚರದಿಂದ ಇರಬೇಕು.

    | ಡಾ.ವಿ.ರವಿ ವೈರಾಣು ತಜ್ಞ, ನಿಮ್ಹಾನ್ಸ್

    ನಗರದಲ್ಲೇ ಸೋಂಕು ಹೆಚ್ಚು: ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲೇ ವರದಿಯಾಗಿವೆ. ಆದರೆ, ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಆಸ್ಪತ್ರೆಗಳ ದಾಖಲಾತಿ ಹೆಚ್ಚಾಗಿಲ್ಲ. ಕೋವಿಡ್ ಚಿಕಿತ್ಸೆಗೆ ಮೀಸಲಿಟ್ಟಿರುವ ಹಾಸಿಗೆಗಳಲ್ಲಿ ಶೇ.99.79 ಖಾಲಿ ಇವೆ. ಸದ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಚಿಕಿತ್ಸಾ ನಿರ್ಧಾರ ಕೇಂದ್ರಗಳಲ್ಲಿ (ಟ್ರಯಾಜ್ ಸೆಂಟರ್) ಸೋಂಕಿತರನ್ನು ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. ಇದಕ್ಕಾಗಿ ನಗರದಲ್ಲಿ 48 ಟ್ರಯಾಜ್ ಸೆಂಟರ್​ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

    ನಿಯಮ ಪಾಲಿಸಿ, ಲಸಿಕೆ ಪಡೆಯಿರಿ: ಕೋವಿಡ್ ಲಸಿಕೆ ಪಡೆದಿದ್ದರೂ, ಜನರು ಇನ್ನೂ ಕೆಲ ಕಾಲ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಸಾಧ್ಯವಾದಷ್ಟು ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ನಿಯಂತ್ರಿಸಬೇಕು. ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಜ್ಞರು ಸೂಚಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ಮಾಸ್ಕ್ ಕಡ್ಡಾಯ; ಕೇರಳದಲ್ಲಿ ಸೋಂಕು ಏರಿಕೆ

    ನವದೆಹಲಿ: ಕರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಕೇರಳದ ಮೂರು ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳವಾಗಿರುವುದು ಜಿಲ್ಲಾಡಳಿತಗಳಿಗೆ ಆತಂಕ ತಂದಿದೆ. ಸೋಂಕು ಏರಿಕೆಗೆ ಕಡಿವಾಣ ಹಾಕುವಂತೆ ಕೇಂದ್ರ ಪತ್ರ ಬರೆದ ಐದು ರಾಜ್ಯಗಳ ಪೈಕಿ ಇವೆರಡೂ ರಾಜ್ಯಗಳು ಇವೆ.

    ಮಹಾರಾಷ್ಟ್ರದಲ್ಲಿ ಬುಧವಾರ ಅತ್ಯಧಿಕ 1,081 ದೈನಿಕ ಕೇಸ್​ಗಳು (ಫೆ.24ರ ನಂತರ) ದಾಖಲಾಗಿದ್ದವು. ಕರೊನಾ ಪ್ರಕರಣಗಳು ಜಾಸ್ತಿಯಾಗುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ಬಸ್-ರೈಲುಗಳು, ಚಿತ್ರಮಂದಿರಗಳು, ಆಡಿಟೋರಿಯಮ್ ಆಸ್ಪತ್ರೆ, ಶಾಲಾ-ಕಾಲೇಜು ಮತ್ತು ಜನಸಂದಣಿಯ ಎಲ್ಲ ಸ್ಥಳಗಳಲ್ಲಿ ಜನರು ತಪ್ಪದೆ ಮಾಸ್ಕ್ ಧರಿಸಬೇಕೆಂದು ಸರ್ಕಾರ ಸೂಚಿಸಿದೆ.

    ಕೇರಳದ ಎರ್ನಾಕುಲಂ, ತಿರುವನಂತಪುರ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಕರೊನಾ ಸೋಂಕು ಪ್ರಕರಣಗಳ ಏರಿಕೆಯಾಗಿದೆ. ಆದರೂ, ಜನರು ಕಳವಳಪಡುವ ಅಗತ್ಯವಿಲ್ಲ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಸೋಂಕಿನ ಲಕ್ಷಣವಿರುವವರು ಮಾಸ್ಕ್ ಧರಿಸುವುದು ಕೂಡ ಅಗತ್ಯ ಎಂದು ವೀಣಾ ಹೇಳಿದ್ದಾರೆ.

    ದೇಶದಲ್ಲಿ ಸಕ್ರಿಯ ಕೇಸ್ ಏರಿಕೆ: ಶನಿವಾರ ಬೆಳಗ್ಗೆವರೆಗಿನ ಒಂದು ದಿನದ ಅವಧಿಯಲ್ಲಿ ಭಾರತದಲ್ಲಿ ಕರೊನಾ ಸೋಂಕಿನ 3,962 ಹೊಸ ಪ್ರಕರಣಗಳು ವರದಿಯಾಗಿವೆ ಹಾಗೂ 26 ಜನರು ಮೃತಪಟ್ಟಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳು 22,416ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಕೈ-ಕಾಲಿಲ್ಲದ ಸ್ಥಿತಿಯಲ್ಲಿ ಶವ ಪತ್ತೆ; ಎರಡು ದಿನಗಳ ಹಿಂದೆ ನಾಪತ್ತೆ ಆಗಿದ್ದ ವ್ಯಕ್ತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts